ʻʻಎಲ್ಲರೂ ಬಾಯಿ ಮುಚ್ಚಿಕೊಂಡು ಸುಮ್ಮನಿರಿ. ಮೊದಲು ನಿಮಗೆ ವಹಿಸಿರುವ ಕೆಲಸ ಸರಿಯಾಗಿ ಮಾಡಿ. ಹೈಕಮಾಂಡ್ ಸೂಚನೆ ಮೀರಿ ಮಾತನಾಡಿದರೆ ಹೈಕಮಾಂಡ್ ದುರ್ಬಲ ಅಲ್ಲ ಎಂಬುದನ್ನು ತೋರಿಸಬೇಕಾಗುತ್ತದೆ. ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಪಕ್ಷ ಕಾಂಗ್ರೆಸ್. ಯಾರೋ ಒಬ್ಬರು ಇಬ್ಬರನ್ನು ಅವಲಂಬಿಸಿ ಪಕ್ಷ ಕಟ್ಟಿಲ್ಲʼʼ ಮಲ್ಲಿಕಾರ್ಜುನ ಖರ್ಗೆ ಇಷ್ಟು ಖಾರವಾಗಿ ನೇರಾನೇರವಾಗಿ ಮಾತನಾಡಿದ್ದನ್ನು ಈ ಹಿಂದೆ ಕಂಡವರಿಲ್ಲ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿ ವಿವಿಧ ವಿಚಾರಗಳ ಕುರಿತು ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಖರ್ಗೆ ʻʻಕೆಲ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ. ಆಮೇಲೆ ಹೈಕಮಾಂಡ್ ಸುಮ್ಮನೆ ಕುಳಿತಿದೆ ಎಂದು ದೂರುತ್ತಾರೆ. ನೀವು ಯಾರಾದರೂ ಒಂದು ಹೇಳಿಕೆ ನೀಡಿದರೆ ಅದಕ್ಕೆ ಹೈಕಮಾಂಡ್ ಸ್ಪಷ್ಟನೆ ನೀಡಬೇಕಾ? ನೀವೇ ಹೇಳಿಕೆ ನೀಡಿ ನೀವೇ ಗೊಂದಲ ಸೃಷ್ಟಿಸುತ್ತಿದ್ದೀರಿ. ಮತ್ತೆ ಹೈಕಮಾಂಡ್ ಸ್ಪಷ್ಟನೆ ನೀಡಬೇಕು ಎಂದು ಹೇಳುತ್ತೀರಿ. ನೀವು ಮಾತನಾಡಿರುವುದಕ್ಕೆಲ್ಲ ನಾವು ಸ್ಪಷ್ಟನೆ ಕೊಡಲು ಸಾಧ್ಯವೇ? ನೂರು ಜನ ನೂರು ರೀತಿ ಮಾತನಾಡಿದರೆ ಹೈಕಮಾಂಡ್ ಪ್ರತಿಕ್ರಿಯಿಸಬೇಕೇʼʼ ಎಂದು ಸಚಿವರು ಹಾಗೂ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಾನು, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಇದ್ದೇವೆ. ನಾವೆಲ್ಲ ಕೂತು ಸೂಕ್ತ ಕಾಲದಲ್ಲಿ ಅಗತ್ಯ ನಿರ್ಧಾರ ಮಾಡುತ್ತೇವೆ. ಅಲ್ಲಿಯವರೆಗೆ ಅನಗತ್ಯ ಹೇಳಿಕೆಗಳನ್ನು ನಿಲ್ಲಿಸಿ ಬಾಯ್ಮುಚ್ಚಿಕೊಂಡು ನಿಮ್ಮ ಕೆಲಸ ನೀವು ಮಾಡಿ. ಯಾವುದೇ ಶಾಸಕರು, ಸಚಿವರು, ಸಂಸದರು ಬದಲಾವಣೆ ಬಗ್ಗೆ ಮಾತನಾಡಬೇಡಿ ಎನ್ನುವುದು ಖರ್ಗೆಯವರ ಡೈರೆಕ್ಟ್ ವಾರ್ನಿಂಗ್. ಇಂತಹ ಸೂಚನೆಗಳೇನೂ ಹೊಸದಲ್ಲ, ಈ ಸೂಚನೆಯನ್ನೂ ಮೀರಿದರೆ ಏನ್ ಮಾಡ್ತೀರಿ ಅನ್ನೋ ಪ್ರಶ್ನೆಗೆ ಹೈಕಮಾಂಡ್ ದುರ್ಬಲವಿಲ್ಲ ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಉತ್ತರ ಕೊಟ್ಟಿದ್ದಾರೆ.
ಆದರೆ ಖರ್ಗೆ ಈ ಹೇಳಿಕೆ ಕೊಡುವ ಹೊತ್ತಿನಲ್ಲೇ ಸತೀಶ್ ಜಾರಕಿಹೊಳಿ ಬಣದ ಅಸೀಫ್ ಸೇಠ್ ದುಬೈ ಪಾಲಿಟಿಕ್ಸ್ ಮಾತನಾಡಿದ್ಧಾರೆ. ಕಾಂಗ್ರೆಸ್ಸಿನ 15 ಶಾಸಕರು ಶೀಘ್ರದಲ್ಲೇ ದುಬೈ ಪ್ರವಾಸ ಮಾಡಲಿದ್ದಾರೆ ಎಂಬ ಸತೀಶ್ ಜಾರಕಿಹೊಳಿ ಆಪ್ತ ಅಸೀಫ್ ಸೇಠ್ ಹೇಳಿಕೆ ಸಂಚಲನ ಮೂಡಿಸಿದೆ. ಅಸೀಫ್ ಸೇಠ್ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ.
ಸತೀಶ್ ಜಾರಕಿಹೊಳಿ ದುಬೈಗೆ ಹೋಗಲ್ಲ, ಆಪ್ತರು ಮಾತ್ರ ಹೋಗ್ತಾರೆ. ವಿಮಾನ ಟಿಕೆಟ್ ಬುಕ್ ಮಾಡುತ್ತಿದ್ದೇವೆ ಎಂದಿರುವ ಅಸೀಫ್ ಸೇಠ್, ಖರ್ಗೆ ʻಬಾಯ್ಮುಚ್ಚಿಕೊಂಡಿರಿʼ ಎಂದು ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಹೇಳಿಕೆ ಕೊಟ್ಟಿದ್ದಾರೆ. ಹಾಗಾದರೆ ಡಿಕೆಶಿ, ಸತೀಶ್ ಜೊತೆಗೆ ಸುರ್ಜೇವಾಲ ಮೀಟಿಂಗ್ ಕೂಡಾ ವಿಫಲವಾಯ್ತಾ..? ಇದು ಸದ್ಯದ ಕುತೂಹಲ.
ದಿನದಿನಕ್ಕೆ ಬೆಂಕಿಯಾಗುತ್ತಲೇ ಇದೆ ಡಿಕೆಶಿ ವರ್ಸಸ್ ಜಾರಕಿಹೊಳಿ ಫೈಟ್
ಡಿನ್ನರ್ ಮೀಟಿಂಗ್, ಬ್ರೇಕ್ ಫಾಸ್ಟ್ ಸಭೆ ನಂತರ ದುಬೈ ಟೂರ್ ಪಾಲಿಟಿಕ್ಸ್.



