ಪ್ರತಿ ವರ್ಷ ಧರ್ಮಸ್ಥಳದ (Dharmasthala) ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ (Soujanya) ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ (Soujanya) ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ (Dharmasthala manjunatha) ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ
ಇಂತಾದ್ದೊಂದು ಪೋಸ್ಟ್ ಹಾಕಿ, ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರಿಗೆ ಶಿಕ್ಷೆಯಾಗಲಿ ಎಂಬ ಸಂದೇಶ ರವಾನಿಸಿದ್ದಾರೆ ದುನಿಯಾ ವಿಜಯ್(Dunia Vijay) .
ಸೌಜನ್ಯ ಎಂಬ 16 ವರ್ಷದ ಕಾಲೇಜು ಯುವತಿ, 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕೊಲೆಯಾಗಿದ್ದಳು. ಆಕೆಯ ಮೇಲೆ ಬರ್ಬರವಾಗಿ ಅತ್ಯಾಚಾರ ನಡೆಸಿದ್ದರು ರಾಕ್ಷಸರು. ಕಾಲೇಜಿನಿಂದ ಹೊರಟು ಬಸ್ ಹತ್ತಿದ ಹುಡುಗಿ, ಬಸ್ ಇಳಿದಿದ್ದನ್ನು ನೋಡಿದವರಿದ್ದಾರೆ. ಆದರೆ ಅದಾದ ಮೇಲೆ ಆಕೆ ಮನೆಗೆ ಹೋಗಲಿಲ್ಲ. ಸಿಕ್ಕಿದ್ದು ಹೆಣವಾಗಿ. ಪ್ರಕರಣದಲ್ಲಿ ಸಂತೋಷ್ ರಾವ್ ಎಂಬ ಆರೋಪಿಯನ್ನು ಅರೆಸ್ಟ್ ಮಾಡಿ, ಚಾರ್ಜ್‍ಶೀಟ್ (Chargesheet) ಕೂಡಾ ಹಾಕಲಾಗಿತ್ತು. ಆದರೆ ನಿಜವಾದ ಅಪರಾಧಿ ಅವನಲ್ಲ ಎಂದು ಸೌಜನ್ಯ ಹೆತ್ತವರು ಹಾಗೂ ಸ್ಥಳೀಯರು ಮತ್ತು ಕೆಲವು ಸಂಘಟನೆಗಳು ವಾದಿಸಿದ್ದವು. ಮಲಿಕ್ ಜೈನ್, ಉದಯ್ ಜೈನ್, ಹರ್ಷಿತ್ ಜೈನ್, ನಿಶ್ಚಲ್ ಜೈನ್ ಎಂಬುವವರ ಮೇಲೆ ಆರೋಪ ಮಾಡಿದ್ದರು. ಅದಕ್ಕೆ ತಕ್ಕಂತೆ ಸಂತೋಷ್ ರಾವ್ ನಿರಪರಾದಿ ಎಂದು ಸಿಬಿಐ ಕೋರ್ಟ್ (CBI Court) ಇತ್ತೀಚೆಗೆ ತೀರ್ಪು ಕೊಟ್ಟಿದೆ. ಈಗ ಉಳಿದಿರುವ ಪ್ರಶ್ನೆ ಸೌಜನ್ಯ ಮೇಲೆ ಅತ್ಯಾಚಾರ ಎಸಗಿದ್ದು ಯಾರು? ಕೊಲೆ ಮಾಡಿದ್ದು ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಈ ಬೆಳವಣಿಗೆ ಬಳಿಕ ಮತ್ತೆ ಸೌಜನ್ಯ ಪ್ರಕರಣಕ್ಕೆ ಜೀವ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ‘ಜಸ್ಟಿಸ್ ಫಾರ್ ಸೌಜನ್ಯ’ (Justice for Soujanya) ಅಭಿಯಾನ ಆರಂಭ ಆಗಿದೆ. ಇನ್ನೊಂದು ಕಡೆ ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯ (Dr. Veerendra Heggade) ವಿರುದ್ಧವೂ ಕೆಲವರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಸಿಬಿಐ (CBI) ಅಧಿಕಾರಿಗಳು ತನಿಖೆಯನ್ನು ಸೂಕ್ತವಾಗಿ ನಡೆಸಿಲ್ಲ. ಹೀಗಾಗಿ ಮರು ತನಿಖೆ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ನ್ಯಾಯ ಸಿಗಲಿ, ತನಿಖೆಯಾಗಲಿ ಎಂದು ಸ್ವತಃ ವೀರೇಂದ್ರ ಹೆಗ್ಗಡೆಯವರೂ (Dr. Veerendra Heggade) ಒತ್ತಾಯಿಸಿದ್ದಾರೆ. ಆರಂಭದಲ್ಲಿಯೂ ಹೆಗ್ಗಡೆಯವರು (Dr. Veerendra Heggade) ಇದೇ ಮಾತು ಹೇಳಿದ್ದರು. ತನಿಖೆಗೆ, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು. ಈ ಘಟನೆಗೀಗ ದುನಿಯಾ ವಿಜಯ್ ಸ್ಪಂದಿಸಿದ್ದಾರೆ.
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ :
ಈ ಮಧ್ಯೆ ಧರ್ಮಸ್ಥಳದ ಬಗ್ಗೆ ಹೆಚ್ಚುತ್ತಿರುವ ವದಂತಿಗಳಿಗೆಲ್ಲ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ. ಸೌಜನ್ಯ ಸಾವು ಪ್ರಕರಣದಲ್ಲಿ ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹಬ್ಬಿಸುತ್ತಿರುವುದರ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೆ ಈಡಾಗಬಾರದು. 2012ರಲ್ಲಿ ನಡೆದ ಪಾಂಗಳ ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಹತ್ಯೆಯ ಪ್ರಕರಣದಲ್ಲಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಸಿಐಡಿ ನಂತರದಲ್ಲಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ಮೂಲಕ ತನಿಖೆ ನಡೆಸುವಂತೆ ಸರ್ಕಾರವನ್ನು ಶ್ರೀ ಕ್ಷೇತ್ರದ ಪರವಾಗಿ ಮತ್ತು ನಮ್ಮ ಕುಟುಂಬಸ್ಥರ ಪರವಾಗಿ ಒತ್ತಾಯಿಸಲಾಗಿತ್ತು. ಅದರಂತೆ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಆದೇಶಿಸಿರುತ್ತದೆ. ಅದರಂತೆ ತನಿಖೆ ನಡೆಸಿ ಇಲಾಖೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ನಂತರದಲ್ಲಿ ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪಿತನನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದು ತಿಳಿದಿದೆ. ಆ ನಂತರದಲ್ಲಿ ಕೆಲವು ವ್ಯಕ್ತಿಗಳು ಶ್ರೀ ಕ್ಷೇತ್ರವನ್ನು ಹಾಗೂ ನಮ್ಮ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಸುಳ್ಳು ಆರೋಪ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಶ್ರೀ ಕ್ಷೇತ್ರದ ಭಕ್ತರಲ್ಲಿ ಹಾಗೂ ಕ್ಷೇತ್ರದೊಂದಿಗೆ ತೊಡಗಿಸಿಕೊಂಡಿರುವ ಅನೇಕರಿಗೆ ಖೇದ ಉಂಟಾಗಿದ್ದು ಈ ಮೂಲಕ ಸಮಸ್ತ ಭಕ್ತಾದಿಗಳಲ್ಲಿ ಹಾಗು ಸಾರ್ವಜನಿಕರ ಗಮನಕ್ಕೆ ತರ ಬಯಸುವುದೆಂದರೆ ಈ ಪ್ರಕರಣದ ಬಗ್ಗೆ ಶ್ರೀ ಕ್ಷೇತ್ರದ ವತಿಯಿಂದ ಈಗಾಗಲೇ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಅದರಂತೆ ಸರ್ಕಾರ ಸದರಿ ಪ್ರಕರಣವನ್ನು ಸಿ.ಬಿ.ಐ. ತನಿಖೆ ನಡೆಸಲು ಆದೇಶಿಸಿರುತ್ತದೆ. ಹೀಗಾಗಿ ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳನ್ನು ಹಬ್ಬಿಸುತ್ತಿರುವುದರ ಬಗ್ಗೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಗೊಂದಲಕ್ಕೆ ಈಡಾಗಬಾರದಾಗಿ ವಿನಂತಿಸುತ್ತೇನೆ.



