ಎಕ್ಕ. ಜುಲೈ 18ಕ್ಕೆ ರಿಲೀಸ್ ಆದ ಸಿನಿಮಾ. ವಿಶೇಷ ಅಂದ್ರೆ ಎಕ್ಕ ಚಿತ್ರಕ್ಕೆ ಯುವ ರಾಜ್ ಕುಮಾರ್ ಹೀರೋ. ಬಂಡವಾಳ ಹೂಡಿದ್ದವರು ಅಶ್ವಿನಿ ಪುನೀತ್. ಅದೇ ದಿನ ರಿಲೀಸ್ ಆದ ಇನ್ನೊಂದು ಸಿನಿಮಾ ಜೂನಿಯರ್. ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಹೀರೋ. ಶ್ರೀಲೀಲಾ ಹೀರೋಯಿನ್. ಜೊತೆಗೆ ರವಿಚಂದ್ರನ್, ಸುಧಾರಾಣಿ ಇದ್ದರು. ಪುನೀತ್ ಅವರ ಬ್ಯಾನರ್ ಸಿನಿಮA ಮಾಯಾಬಜಾರ್ ಮೂಲಕವೇ ಪರಿಚಿತರಾದ ರಾಧಾಕೃಷ್ಣ ರೆಡ್ಡಿ, ಜೂನಿಯರ್ ನಿರ್ದೇಶಕ. ಇನ್ನು ಚಿತ್ರದ ಪ್ರಚಾರಕ್ಕೆ ಹೋಗಿದ್ದವರು ಶಿವರಾಜ್ ಕುಮಾರ್. ಸಹಜವಾಗಿಯೇ ಉದ್ಭವವಾಗುವ ಪ್ರಶ್ನೆ ಎಂದರೆ.. ಎರಡೂ ಸಿನಿಮಾಗಳಲ್ಲಿ ಗೆದ್ದವರು ಯಾರು?
ಬಾಕ್ಸಾಫೀಸ್ ರಿಪೋರ್ಟ್ :
ಜೂನಿಯರ್ ಗೆದ್ದಿದೆ. ಆದರೆ.. ತೆಲುಗಿನಲ್ಲಿ ದೊಡ್ಡ ಹಿಟ್ ಆಗಿದೆ. ಕನ್ನಡಕ್ಕಿಂತ ತೆಲುಗು ವರ್ಷನ್‌ಗೆ ಜಾಸ್ತಿ ಕಲೆಕ್ಷನ್ ಆಗುತ್ತಿದ್ದು, ಸದ್ಯಕ್ಕೆ ಸ್ಯಾಕ್ನಿಲ್ಕ್ ವರದಿ ಮಾಡಿರುವ ಪ್ರಕಾರ, ಮೊದಲ ದಿನ ‘ಜೂನಿಯರ್’ ಸಿನಿಮಾವು 1.50 ಕೋಟಿ ರೂ. ಕಲೆಕ್ಷನ್ ಮಾಡಿದರೆ, ಎರಡನೇ ದಿನ 1.80 ಕೋಟಿ ರೂ. ಗಳಿಸಿದೆ. ಅಲ್ಲಿಗೆ ಮೊದಲ ಎರಡು ದಿನಗಳಲ್ಲಿ ಒಟ್ಟು 3.30 ಕೋಟಿ ರೂ. ಕಲೆಕ್ಷನ್ ಆಗಿದೆ. ಇದರಲ್ಲಿ ಬಹುತೇಕ ಗಳಿಕೆ ಆಗಿರುವುದು ತೆಲುಗು ವರ್ಷನ್‌ಗೆ ಎನ್ನಲಾಗಿದೆ. ಇನ್ನು, ಭಾನುವಾರ ಕೂಡ ಅಂದಾಜು 1.75 ಕೋಟಿ ರೂ. ಗಳಿಸಿದೆ. ಆದರೆ.. ಕನ್ನಡದಲ್ಲಿ ಕಲೆಕ್ಷನ್ ಡಲ್ಲು ಹೊಡೆದಿದೆ.
ಕನ್ನಡದಲ್ಲಿ ಪುನೀತ್ ಅವರ, ತೆಲುಗಿನಲ್ಲಿ ಎನ್‌ಟಿಆರ್ ಅವರ ಫ್ಯಾನ್ ಆಗಿರುವ ಕಿರೀಟಿ, ಅದ್ಭುತ ಡ್ಯಾನ್ಸ್ ಮಾಡಿದ್ದಾರೆ. ಚಿತ್ರದ ಕಥೆಯೂ ಎಮೋಷನಲ್ ಆಗಿದೆ. ಶಿವಣ್ಣ ಅವರಂತೂ “ಕಿರೀಟಿ ಡ್ಯಾನ್ಸ್ ನೋಡ್ತಾ ಇದ್ರೆ ಅಪ್ಪು ನೋಡಿದಂಗೆ ಆಯ್ತು” ಎಂದಿದ್ದರು. ರವಿಚಂದ್ರನ್ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ಧಾರೆ.
ಎಕ್ಕ ಬಾಕ್ಸಾಫೀಸ್ ರಿಪೋರ್ಟ್ :
ಜೂನಿಯರ್ ಚಿತ್ರಕ್ಕೆ ಹೋಲಿಸಿದರೆ ಎಕ್ಕ ಕನ್ನಡದಲ್ಲಿ ಮೆಗಾ ಹಿಟ್ ಸಾಲಿಗೆ ಸೇರುತ್ತಿದೆ. ಮೊದಲ ದಿನ ಸುಮಾರು 2 ಕೋಟಿ ಕಲೆಕ್ಷನ್ ಮಾಡಿದ್ದ ಎಕ್ಕ ಚಿತ್ರದ ಕಲೆಕ್ಷನ್ 7 ಕೋಟಿ ಕ್ರಾಸ್ ಆಗಿದೆ. ಈ ಚಿತ್ರದ ನೆಟ್ ಕಲೆಕ್ಷನ್ ಮೂರು ದಿನಕ್ಕೆ 6.86 ಕೋಟಿ ರೂಪಾಯಿ ಆಗಿದೆ. ಗ್ರಾಸ್ ಕಲೆಕ್ಷನ್ 7 ಕೋಟಿ ದಾಟಿದೆ ಮೊದಲ ದಿನ ಈ ಚಿತ್ರ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶನಿವಾರ ಚಿತ್ರ 1.82 ಕೋಟಿ ರೂಪಾಯಿ ಗಳಿಕೆ ಮಾಡಿತು. ಭಾನುವಾರ ಚಿತ್ರದ ಕಲೆಕ್ಷನ್ 2.39 ಕೋಟಿ ರೂಪಾಯಿ ಆಗಿದೆ. ಚಿತ್ರಕ್ಕೆ ಬರುವ ಪ್ರೇಕ್ಷಕರು ಹೆಚ್ಚಾಗಿದ್ದಾರೆ. ಸಂಡೇ ಕಲೆಕ್ಷನ್ ವಂಡರ್ ಫುಲ್ ಆಗಿದೆ. ಬಹುತೇಕ ಶೋಗಳು ಹೌಸ್ ಫುಲ್ ಆಗಿವೆ.
ಯುವ ಹೀರೋ ಯುವ ರಾಜ್ಕುಮಾರ್ಗೆ ಒಂದೊಳ್ಳೆಯ ಯಶಸ್ಸು ಸಿಕ್ಕಿದೆ. ಒಬ್ಬ ಹೀರೋಗೆ ಆರಂಭದಲ್ಲಿ ಎಷ್ಟು ದೊಡ್ಡ ಬುನಾದಿ ಬೇಕೋ ಅದನ್ನು ಹಾಕಿಕೊಡುವಲ್ಲಿ ‘ಎಕ್ಕ’ ಸಿನಿಮಾ ಯಶಸ್ವಿ ಆಗಿದೆ. ನಿರ್ದೇಶಕ ರೋಹಿತ್ ಪದಕಿ ಅವರು ಅದ್ಭುತವಾಗಿ ಸಿನಿಮಾನ ಕಟ್ಟಿಕೊಡುವ ಮೂಲಕ ಕನ್ನಡಕ್ಕೆ ಒಂದೊಳ್ಳೆಯ ಸಿನಿಮಾ ಕೊಟ್ಟಿದ್ದಾರೆ. ಬ್ಯಾಂಗಲ್ ಬಂಗಾರಿ ಹಾಡು, ಸಂಜನಾ ಆನಂದ್ ಸ್ಮೈಲಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.



