ಮಂಡ್ಯ ಟೂ ಇಂಡಿಯಾ ಎನ್ನುವ ಘೋಷವಾಕ್ಯದೊಂದಿಗೆ ಉದ್ಯೋಗ ಮೇಳ ನಡೆಯುತ್ತಿದೆ. ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ ೧೮ ಮತ್ತು ೧೯ರಂದು ಎರಡು ದಿನ ಉದ್ಯೋಗ ಮೇಳ ನಡೆಯಲಿದೆ. ಮಂಡ್ಯದ ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು ಎನ್ನುವಂತೆ ನಡೆಯುತ್ತಿರುವ ಈ ಉದ್ಯೋಗ ಮೇಳದಿಂದ ಸುಮಾರು ೩ ಸಾವಿರ ಜನಕ್ಕೆ ಉದ್ಯೋಗ ಕಲ್ಪಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಈ ಬಗ್ಗೆ ಸ್ವತಃ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರೇ ಮಾಹಿತಿ ನೀಡಿದ್ದಾರೆ. ದೇಶದ ಉದ್ದಗಲಕ್ಕೂ ಇರುವ 150ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳಕ್ಕೆ ಬರಲಿವೆ. ಈ ಭಾಗದ ಮೂರು ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಕೊಡಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಆಸಕ್ತ ಯುವಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಪ್ರತಿಭೆಗೆ ಬರವಿಲ್ಲ. ಉತ್ತಮ ವಿದ್ಯಾಸಂಸ್ಥೆಗಳು ಜಿಲ್ಲೆಯಲ್ಲಿ ಇದ್ದು, ಪ್ರತಿವರ್ಷ ಸಾಕಷ್ಟು ಯುವಜನರು ಉತ್ತೀರ್ಣರಾಗಿ ಕಾಲೇಜುಗಳಿಂದ ಹೊರಗೆ ಬರುತ್ತಿದ್ದಾರೆ. ಇವರಿಗೆ ಆದಷ್ಟು ಉದ್ಯೋಗಾವಕಾಶ ಕಲ್ಪಿಸಬೇಕು ಎನ್ನುವುದು ನನ್ನ ದೃಢ ಸಂಕಲ್ಪ ಎನ್ನುವ ಕುಮಾರಸ್ವಾಮಿ ನನ್ನ ಸಚಿವಾಲಯದ ಉನ್ನತ ಅಧಿಕಾರಿಗಳು, ಮಂಡ್ಯ ಜಿಲ್ಲೆಯ ಉನ್ನತ ಹಾಗೂ ಎಲ್ಲಾ ಶ್ರೇಣಿಯ ಅಧಿಕಾರಿಗಳು ಉದ್ಯೋಗ ಮೇಳ ಯಶಸ್ಸಿಗೆ ಕೆಲಸ ಮಾಡುತ್ತಿದ್ದಾರೆ. ನಿರುದ್ಯೋಗಿ ಯುವಕ ಯುವತಿಯರಿಗೆ ನಮ್ಮ ಸ್ವಯಂ ಸೇವಕರು, ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಂಪನಿಗಳ ಅಧಿಕಾರಿಗಳು ಅಭ್ಯರ್ಥಿಗಳ ವಿವರಗಳನ್ನು ಗಮನಿಸಿದ ನಂತರ ಅವರಿಗೆ ಸೂಕ್ತವಾದ, ಅರ್ಹವಾದ ಹುದ್ದೆಯನ್ನು ನೀಡುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ (BHEL), ಜಿಂದಾಲ್ ಸ್ಟೀಲ್ ಸೇರಿದಂತೆ 150ಕ್ಕೂ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ನೇರ ನೇಮಕಾತಿ ಮಾಡಿಕೊಳ್ಳುತ್ತಿವೆ.
ಪ್ರತಿನಿತ್ಯ ನನ್ನ ಮನೆಗೆ ಬರುವ ಅಸಂಖ್ಯಾತ ನಿರುದ್ಯೋಗಿ ಯುವ ಜನರು ಉದ್ಯೋಗ ಕೊಡಿಸಿ ಎಂದು ಕೇಳುತ್ತಾರೆ. ವೈಯಕ್ತಿಕವಾಗಿ ಕೆಲವರಿಗೆ ಸಹಾಯ ಮಾಡಿದ್ದೇನೆ. ಆದರೆ ದೊಡ್ಡ ಪ್ರಮಾಣದಲ್ಲಿ ಮಾಡಲು ಆಗುತ್ತಿರಲಿಲ್ಲ. ಈ ಉದ್ಯೋಗ ಮೇಳದ ಮೂಲಕ ಸಾವಿರಾರು ಸಂಖ್ಯೆಯಷ್ಟು ಯುವ ಜನರಿಗೆ ಕೆಲಸ ಸಿಗಲಿದೆ ಎನ್ನುವ ವಿಶ್ವಾಸ ಕುಮಾರಸ್ವಾಮಿ ಅವರದ್ದು.
ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಮಂಡ್ಯ ನಗರದಲ್ಲಿರುವ ಮಾನ್ಯ ಸಂಸದರ ಕಛೇರಿಗೆ ಭೇಟಿ ನೀಡಿ, ತಮ್ಮ ಹೆಸರು ಮತ್ತು ವಿವರವನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಆ ರೀತಿ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಲು ಸಾಧ್ಯವಿಲ್ಲದವರಿಗೂ ಅವಕಾಶಗಳಿವೆ. ಆದರೆ ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.



