ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆಯೇ ಜೆಡಿಎಸ್ ಜಾತ್ಯತೀತತೆ ಬಿಟ್ಟಿದೆ ಎಂದು, ಜೆಡಿಎಸ್ ಬಿಜೆಪಿಯ ಬಿ ಪಾರ್ಟಿ ಎಂದೂ ಟೀಕೆ ಮಾಡುತ್ತಿದ್ದವರಿಗೇ ಈಗ ಜಾತ್ಯತೀತ ಜನತಾದಳವನ್ನು ಕುಮಾರಸ್ವಾಮಿ ಹಿಂದುತ್ವದ ಬ್ರಾಂಡ್ ಮಾಡೋಕೆ ಹೊರಟಿದ್ದಾರಾ.. ಅನುಮಾನವೇ ಇಲ್ಲ, ಇದು ನಿಜ.
ಧರ್ಮಾಭಿಮಾನಕ್ಕೆ ನಾನು ಭಯಪಡುವುದಿಲ್ಲ. ದತ್ತಮಾಲೆ ಹಾಕುವುದು ದೇವರ ಕಾರ್ಯ, ಕಾನೂನು ಬಾಹಿರ ಅಲ್ಲ. ಕಾನೂನು ಬಾಹಿರವಾದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ದತ್ತಮಾಲೆ ಏಕೆ ಹಾಕಬಾರದು? ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇನೆ ಎಂದಿರುವ ಕುಮಾರಸ್ವಾಮಿ ಅದಕ್ಕೆ ದಿನಾಂಕವನ್ನೂ ಫಿಕ್ಸ್ ಮಾಡಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ.
ದತ್ತಪೀಠದ ಹೋರಾಟ ನಡೆಸುತ್ತಿರುವುದು ಬಿಜೆಪಿ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೆಸರು ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಕೇಳಿ ಬಂದಿದ್ದೇ ದತ್ತಮಾಲೆ ಹೋರಾಟದ ಮೂಲಕ. ಮಾಜಿ ಶಾಸಕ ಸಿಟಿ ರವಿ ಇಡೀ ರಾಜ್ಯಕ್ಕೆ ಗೊತ್ತಾಗಿದ್ದೂ ದತ್ತಮಾಲೆ ಅಭಿಯಾನದ ಮೂಲಕವೇ. ವಿಶ್ವ ಹಿಂದೂ ಪರಿಷತ್, ಭಜರಂಗ ದಳಗಳು ನಡೆಸಿದ ರಾಜ್ಯದ ಅತಿದೊಡ್ಡ ಹೋರಾಟಗಳಲ್ಲಿ ಒಂದು ದತ್ತಮಾಲಾ ಅಭಿಯಾನ. ಈ ಅಭಿಯಾನಕ್ಕೀಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕೂಡಾ ಕೈಜೋಡಿಸುತ್ತಿರುವುದು ದೊಡ್ಡ ಬೆಳವಣಿಗೆ.
ದತ್ತಮಾಲಾ ಅಭಿಯಾನ ನಡೆಯುವ ವೇಳೆ ಚಿಕ್ಕಮಗಳೂರಿನಲ್ಲಿ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ.
ಏನಿದು ದತ್ತಪೀಠ ವಿವಾದ :
ದತ್ತಪೀಠದಲ್ಲಿ, ಗುರುದತ್ತಾತ್ರೇಯ ಸ್ವಾಮಿ ಅವರ ಪುಣ್ಯಭೂಮಿ. ಇದುಹಿಂದೂಗಳಿಗೆ ಸೇರಿದ್ದು ಹಿಂದೂಪರ ಸಂಘಟನೆಗಳ ವಾದ. ಆದರೆ ಇದು ಬಾಬಾಬುಡನ್ ಗಿರಿ, ಮುಸ್ಲಿಮರಿಗೆ ಸೇರಿದ್ದು ಎನ್ನುವುದು ಮುಸ್ಲಿಮರ ವಾದ. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲೇ ಇರುತ್ತವೆ. ಇದು ಬಾಬಾಬುಡನ್ ದರ್ಗಾವೇ ವಿನಾ ದತ್ತಾತ್ರೇಯರ ದೇವಸ್ಥಾನವಲ್ಲ. ದೇವಸ್ಥಾನವೆಂದು ನಂಬಲು ದಾಖಲೆಗಳೂ ಇಲ್ಲ. ಮುಜರಾಯಿ ಕಮಿಷನರ್ 2010ರಲ್ಲಿ ಹೇಳಿರುವಂತೆ ಮುಜಾವರ್ ಜತೆಗೆ ಅರ್ಚಕರನ್ನು ನೇಮಕ ಮಾಡಿದರೆ 1991ರ ಕಾಯಿದೆಯ ಉಲ್ಲಂಘನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ 1947ರ ಆಗಸ್ಟ್ 15ಕ್ಕೆ ಮೊದಲಿದ್ದ ಸ್ವರೂಪವನ್ನೇ ಒಪ್ಪಬೇಕು. ಅದು ವಕ್ಫ್‌ಗೆ ಸೇರಿದ ಆಸ್ತಿಯಲ್ಲ; ಮುಜರಾಯಿ ಆಸ್ತಿ ಎಂದು ಸಚಿವ ಸಂಪುಟ ಉಪ ಸಮಿತಿ ನೇಮಿಸಿದ್ದ ನ್ಯಾ.ನಾಗಮೋಹನ್‌ದಾಸ್ ಸಮಿತಿ ವರದಿ ನೀಡಿದ್ದು, ಇದನ್ನು ಸಚಿವ ಸಂಪುಟ ಒಪ್ಪಿದೆ.
1947ಕ್ಕೂ ಮೊದಲು ಇಲ್ಲಿ ದತ್ತಪಾದುಕೆ ಪೂಜೆ, ನಂದಾದೀಪ ಹಚ್ಚುವುದು, ಹೂವು ಅರ್ಪಿಸುವುದು, ನಗಾರಿ ಬಾರಿಸುವುದು, ತೀರ್ಥ ಪ್ರೋಕ್ಷಣೆ ನಡೆಯುತ್ತಿದ್ದವು. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ 1929ರಿಂದಲೂ ಮುಜರಾಯಿ ವ್ಯಾಪ್ತಿಯಲ್ಲೇ ಇತ್ತು. 1976ರಲ್ಲಿ ಇದನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ಪ್ರಯತ್ನ ಮಾಡಿದ್ದರಿಂದ ವಿವಾದ ಕೋರ್ಟ್ ಮೆಟ್ಟಿಲೇರಿ ಪುನಃ 1982 ರಲ್ಲಿ ನ್ಯಾಯಾಲಯದ ಆದೇಶದಂತೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬಂದಿದೆ. ಇಲ್ಲಿಗೆ ಮಠಾಧೀಶರು ಆಗಮಿಸಿದರೆ ಗುಹೆಯ ಒಳಗೆ ತೆರಳಿ ದತ್ತಪಾದುಕೆಗೆ ಹೂವು ಅರ್ಪಿಸಿ, ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗುತ್ತದೆ. ನಂದಾದೀಪ ಹಚ್ಚುವ, ಹೂವು ಅರ್ಪಿಸುವ, ತೀರ್ಥ ಪ್ರೋಕ್ಷಣೆ ಮಾಡುವ ಆಚರಣೆಯನ್ನು ಮುಜಾವರ್ ನಿರ್ವಹಿಸುತ್ತಾರೆ. ವಿವಾದ ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ. ಬದಲಿಗೆ 1947 ಆಗಸ್ಟ್ 15ಕ್ಕಿಂತ ಹಿಂದೆ ಇದ್ದ ಆಚರಣೆಗಳನ್ನಷ್ಟೇ ಪಾಲಿಸಬೇಕು ಎಂದು ಹೇಳುವ ಮೂಲಕ ಇಡೀ ವಿವಾದವನ್ನು 1947ರಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿದೆ. ಇನ್ನು ದತ್ತಾತ್ರೇಯ ಗುಹೆಗೆ ಹೋಗುವ ದಾರಿಯಲ್ಲಿ ಹಲವು ಗೋರಿಗಳಿವೆ. ಅಲ್ಲಿನ ಹಜಾರದಲ್ಲಿ ಇರುವ ನಾಲ್ಕು ಗೋರಿ ಅಥವಾ ಸಮಾಧಿಗಳನ್ನು ದತ್ತಾತ್ರೇಯರ ಶಿಷ್ಯರ ಸಮಾಧಿ ಎಂದು ಹಿಂದೂಗಳು ವಾದಿಸಿದರೆ, ಅಲ್ಲಲ್ಲ ಅವು ದಾದಾ ಹಯಾತ್ ಮೀರ್ ಖಲಂದರ್ (ಬಾಬಾಬುಡನ್) ಶಿಷ್ಯರ ಗೋರಿಗಳಿವು ಎಂದು ವಿರುದ್ಧ ವಾದದವರು ಹೇಳುತ್ತಾರೆ. ಇಲ್ಲಿ ಜಾತಿ, ಮತ, ಧರ್ಮದ ಭೇದವಿಲ್ಲದೆ ಮುಜಾವರ್ ಎಲ್ಲರಿಗೂ ತೀರ್ಥ ನೀಡುತ್ತಾರೆ. ಬೇರೆ ಪೂಜೆಗಳಿಗೆ ಅವಕಾಶ ಇಲ್ಲ. ಅವರವರ ಭಾವನೆಗೆ ತಕ್ಕಂತೆ ಮನದಲ್ಲೇ ಪ್ರಾರ್ಥನೆ ಮಾಡಬಹುದು. ಗುಹೆಯ ಎಡಭಾಗದಲ್ಲಿ ಒಂದು ಗದ್ದುಗೆ ಇದೆ. ಅದು ಅನುಸೂಯದೇವಿ ತಪಸ್ಸು ಮಾಡುತ್ತಿದ್ದ ಸ್ಥಳ ಎಂಬ ಪ್ರತೀತಿ ಇದೆ. ಗದ್ದುಗೆಯ ನೇರದಲ್ಲೇ ಮೇಲ್ಭಾಗದಲ್ಲಿ ಒಂದು ರಂಧ್ರವಿದ್ದು, ಅದೇ ರಂಧ್ರದಿಂದ ಭಕ್ತರಿಗೆ ಅನುಸೂಯದೇವಿ ರೊಟ್ಟಿ ನೀಡುತ್ತಿದ್ದಳು ಎಂಬುದು ನಂಬಿಕೆ. ಗದ್ದುಗೆ ಎಡಭಾಗದಲ್ಲಿ ಗಂಧದ ಮಣ್ಣಿನ ಬಾವಿಯಿದೆ. ಈ ಮಣ್ಣು ಪವಿತ್ರ ಎಂದು ಭಕ್ತರು ತೆಗೆದುಕೊಂಡು ಹೋಗುತ್ತಾರೆ.
ಅಂದಹಾಗೆ ಕುಮಾರಸ್ವಾಮಿ ಸೇರಿದಂತೆ ಎಲ್ಲ ಜೆಡಿಎಸ್ ಶಾಸಕರೂ ಡಿಸೆಂಬರ್ 6ನೇ ತಾರೀಕು ದತ್ತಮಾಲೆ ಧರಿಸಲಿದ್ಧಾರೆ ಎನ್ನವುದು ಮೂಲಗಳ ಮಾಹಿತಿ. ಸದ್ಯಕ್ಕೆ ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿಯೇ ಬೀಡುಬಿಟ್ಟಿದ್ದು, ಶಾಸಕರ ಜೊತೆ ಇದ್ದಾರೆ.



