ಪುನೀತ್ ಅವರಿಲ್ಲದ 3ನೇ ಹುಟ್ಟುಹಬ್ಬ, ಇದೇ ಮಾರ್ಚ್ 17ಕ್ಕೆ. ಪುನೀತ್ ಇದ್ದಿದ್ದರೆ ಹಬ್ಬಕ್ಕೊಂದು ಸಂಭ್ರಮವಿರುತ್ತಿತ್ತು. ಆದರೆ, ಸಂಭ್ರಮ ಇಲ್ಲದೇ ಇದ್ದರೂ, ಜವಾಬ್ದಾರಿಯಂತೂ ಇದೆ. ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಪುನೀತ್ ಅಭಿಮಾನಿಗಳು ಸಕಲ ಸಿದ್ಧತೆಯನ್ನೂ ನಡೆಸಿದ್ದಾರೆ. ಅಂತಹ ಸಿನಿಮಾ ಮಾದರಿ ಸಿದ್ಧತೆಗಳಲ್ಲೊಂದು ಜಾಕಿ.
ಪುನೀತ್ ಅವರ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಜಾಕಿ ಚಿತ್ರ ಬೇರೆಯದೇ ಸ್ಪೆಷಲ್. ಜಾಕಿ ಬರುವವರೆಗೆ ಅದುವರೆಗಿನ ಪುನೀತ್ ಅವರ ಚಿತ್ರಗಳಲ್ಲಿ ಪುನೀತ್ ಜಾಕಿಯಂತಹ ಪಾತ್ರ ಮಾಡಿರಲಿಲ್ಲ. ಸೂರಿಯ ಟಚ್ ಸಿಕ್ಕು ಜಾಕಿ ಸ್ಪೆಷಲ್ ಹಿಟ್ ಎನಿಸಿಕೊಂಡಿತ್ತು. ಜಾಕಿ ಚಿತ್ರದ ಮೂಲಕವೇ ಕನ್ನಡಕ್ಕೆ ಬಂದ ಭಾವನಾ, ಕನ್ನಡತಿಯೇ ಆಗಿ ಹೋಗಿದ್ಧಾರೆ. ಈ ಬಾರಿಯ ಪುನೀತ್ ಹುಟ್ಟುಹಬ್ಬದ ಮೊದಲ ಸ್ಪೆಷಲ್ ಜಾಕಿ.
ಸೂರಿ ನಿರ್ದೇಶನದ ‘ಜಾಕಿ’ ಚಿತ್ರವನ್ನು 4ಏ ವರ್ಷನ್‌ನಲ್ಲಿ ರೀ ರಿಲೀಸ್ ಮಾಡಲು ಸಿದ್ಧತೆ ನಡೀತಿದೆ. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದ’ಜಾಕಿ’ 14 ವರ್ಷಗಳ ಹಿಂದೆ ತೆರೆಕಂಡಿ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಅಂದಾಜು 7 ಕೋಟಿ ರೂ. ಬಂಡವಾಳದಲ್ಲಿ ನಿರ್ಮಾಣವಾಗಿದ್ದ ‘ಜಾಕಿ’ ಸಿನಿಮಾ 30 ಕೋಟಿ ರೂ.ಗೂ ಗಳಿಕೆ ಕಂಡಿತ್ತು. 2010ರಲ್ಲಿ ದಾಖಲೆ ಬರೆದಿದ್ದ ಜಾಕಿ, ಈಗ ಮತ್ತೊಮ್ಮೆ ಪುನೀತ್ ಹುಟ್ಟುಹಬ್ಬಕ್ಕೆ ಮತ್ತೊಮ್ಮೆ ರಿಲೀಸ್ ಆಗುತ್ತಿದೆ.
ಇನ್ನು ಪುನೀತ್ ಹಬ್ಬಕ್ಕಾಗಿ ಅಭಿಮಾನಿಗಳು ಎಂದಿನಂತೆ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಅನ್ನ ಸಂತರ್ಪಣೆ, ಅನಾಥ ಮಕ್ಕಳು ಮತ್ತು ವೃದ್ಧಾಶ್ರಮಗಳಲ್ಲಿ ವಿಶೇಷ ಸೇವಾ ಕಾರ್ಯ ಇಟ್ಟುಕೊಳ್ಳಲಿದ್ದಾರೆ. ಕೇವಲ ಪುನೀತ್ ಹಬ್ಬದ ದಿನದ ಮಾಡುವ ಕೆಲಸ ಅಲ್ಲವಲ್ಲ.ವರ್ಷವಿಡೀ ಏನಾದರೊಂದು ಸಮಾಜಸೇವೆ ಮಾಡುತ್ತಲೇ ಇರುವ ಅಭಿಮಾನಿಗಳ ಸಂಘ, ಆ ದಿನ ಇನ್ನೊಂದು ರೀತಿಯ ಸೆಲಬ್ರೇಷನ್ ಮಾಡ್ತಾರೆ.



