ಐತಿಹಾಸಿಕ ದೇವಸ್ಥಾನಗಳ ಸುತ್ತಮುತ್ತ ನಿಧಿಗಳಿರುತ್ತವೆ. ಹಿಂದಿನ ಕಾಲದ ರಾಜಮಹಾರಾಜರು ತಮ್ಮ ಆಸ್ತಿಯನ್ನ ಅಲ್ಲಿನ ಗುಹೆಗಳಲ್ಲಿಯೋ, ನೆಲಮಾಳಿಗೆಯಲ್ಲೋ ಬಚ್ಚಿಟ್ಟಿರುತ್ತಿದ್ದರು ಎನ್ನುವ ನಂಬಿಕೆ ಇಂದಿನದ್ದಲ್ಲ. ಹೀಗಾಗಿಯೇ ಅದೆಷ್ಟೋ ಜನ ನಿಧಿ ಆಸೆಗಾಗಿ ಮಾಡಬಾರದ್ದನ್ನೆಲ್ಲ ಮಾಡ್ತಾರೆ. ಆದರೆ, ಅಂಥಾದ್ದೊಂದು ವಿವಾದ ಈಗ ಶ್ರೀಶೈಲದ ಅಹೋಬಿಲ ಮಠ, ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ʻನ ಅಧ್ಯಕ್ಷ ಧರ್ಮರೆಡ್ಡಿ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಎ ವಿ ರಮಣ ದೀಕ್ಷಿತುಲು
ಈ ವ್ಯಕ್ತಿ ತಿರುಮಲ ದೇವಸ್ಥಾನದ ಮುಖ್ಯ ಗೌರವ ಅರ್ಚಕ. ಈ ವ್ಯಕ್ತಿ ಇತ್ತೀಚೆಗೆ ಒಂದು ವಿಡಿಯೋ ಮಾಡಿದ್ದರು. ಆ ವಿಡಿಯೋದಲ್ಲಿ ಟಿಟಿಡಿ ಅಧಿಕಾರಿ ಎ.ವಿ.ಧರ್ಮರೆಡ್ಡಿ ಹಾಗೂ ಶ್ರೀಶೈಲದ ಅಹೋಬಿಲ ಮಠಾಧೀಶರು ಶ್ರೀಶೈಲದ ಗುಹೆಯೊಂದರಿಂದ ನಿಧಿ ತೆಗೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು. ಇದಕ್ಕೆ ಅಹೋಬಿಲ ಮಠದ ಮುಖ್ಯಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಮಣ ದೀಕ್ಷಿತುಲು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಶ್ರೀಶೈಲದ ಅಹೋಬಿಲ ಮಠದವರ ಪ್ರಕಾರ..
ರಮಣ ದೀಕ್ಷಿತುಲು ಅವರು ತಿರುಮಲ ದೇವಸ್ಥಾನದ ಅರ್ಚಕ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯರಲ್ಲ. ಅವರನ್ನು ವಜಾಗೊಳಿಸಬೇಕು. ಟಿಟಿಡಿಯ ಧರ್ಮರೆಡ್ಡಿ ಆಗಾಗ ಅಹೋಬಿಲಕ್ಕೆ ಬಂದು ನಿಧಿ ತೆಗೆಯಲು ಹೊಂಚು ಹಾಕುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ. ಆದರೆ ಧರ್ಮರೆಡ್ಡಿ ಕಳೆದ ಐದು ವರ್ಷದಲ್ಲಿ ಒಮ್ಮೆಯೂ ಅಹೋಬಿಲ ಮಠಕ್ಕೆ ಬಂದೇ ಇಲ್ಲ ಎಂದು ಹೇಳಿದೆ.
ತಿರುಪತಿಯ ಅರ್ಚಕರ ಪ್ರಕಾರ..
ತಿರುಪತಿಯಲ್ಲಿ ರಮಣ ದೀಕ್ಷಿತುಲು ಒಬ್ಬರೇ ಅರ್ಚಕರಲ್ಲ. ಇವರು ಹಲವು ಗೌರವ ಅರ್ಚಕರಲ್ಲಿ ಒಬ್ಬರು, ಅಷ್ಟೆ. ಇಂತಹ ರಮಣ ದೀಕ್ಷಿತುಲು ಅವರ ಆರೋಪವನ್ನು ಮುಖ್ಯ ಅರ್ಚಕ ವೇಣುಗೋಪಾಲ ದೀಕ್ಷಿತರು ಒಪ್ಪಿಲ್ಲ. ಅವರಷ್ಟೇ ಅಲ್ಲ, ಟಿಟಿಡಿಯ ಯಾವ ಅರ್ಚಕರೂ ಒಪ್ಪಿಲ್ಲ. ಇದೊಂದು ಆಧಾರವಿಲ್ಲದ, ಟಿಟಿಡಿಗೆ ಕೆಟ್ಟ ಹೆಸರು ತರುವ ಸಂಚು ಎಂದು ಹೇಳಿದ್ಧಾರೆ.
ದೂರು ದಾಖಲಾದ ಮೇಲೆ..
ಈ ವಿಡಿಯೋದಲ್ಲಿ ನಾನು ಹೇಳಿದ್ದುದೇ ಒಂದು. ಆಗಿದ್ದೇ ಇನ್ನೊಂದು. ವಿಡಿಯೋವನ್ನು ತಿರುಚಲಾಗಿದೆ ಎಂದು ನಿಧಿಯ ಕಥೆ ಹೇಳಿದ್ದ ರಮಣ ದೀಕ್ಷಿತುಲು ಹೇಳಿದ್ಧಾರೆ.ವಿಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎನ್ನುವುದು ರಮಣ ದೀಕ್ಷಿತರ ಮಾತು.



