ಕಿಚ್ಚ ಸುದೀಪ್ (Kichcha Sudeep) ಬರೆದಿರುವ ಆ ಪತ್ರ, ಪತ್ರದಲ್ಲಿ ಆರೋಪಿಸಿರುವ ಅಂಶಗಳನ್ನು ನೋಡುತ್ತಿದ್ದರೆ, ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್`ನವರೇ ಸಂಚು ಮಾಡುತ್ತಿದ್ದಾರಾ ಎಂದು ಅನಿಸದೆ ಇರದು.. ಏಕೆಂದರೆ ಅಂತಹ ಅಂಶಗಳನ್ನು ಸ್ವತಃ ಸುದೀಪ್ ಅವರೇ ಎತ್ತಿ ತೋರಿಸಿದ್ದಾರೆ. ಅದರಲ್ಲಿಯೂ ಎನ್.ಕುಮಾರ್ (N.Kumar)ಅವರು ಸುದೀಪ್ ಅವರ ವಿರುದ್ಧ ಮಾಡಿರುವ ಸುದ್ದಿಗೋಷ್ಠಿಯಲ್ಲಿ, ಚೇಂಬರ್ ಎಲ್ಲೆಲ್ಲಿ (Karnataka Film Chamber) ಎಡವಿದೆ ಎಂದು ಬೆರಳು ಮಾಡಿ ತೋರಿಸಿದ್ದಾರೆ ಸುದೀಪ್. ಸುದೀಪ್ ಅವರು ಚೇಂಬರ್`ಗೆ ಬರೆದ ಪತ್ರದಲ್ಲಿ..
ವಾಣಿಜ್ಯ ಮಂಡಳಿಗೆ (Karnataka Film Chamber) ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ ಅಷ್ಟೇ. ಸ್ಪಂದಿಸಬೇಕಾದುದ್ದು ನಿಮ್ಮ ಕರ್ತವ್ಯ ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೂ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತ್ರ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲವೆಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ.
27 ವರ್ಷಗಳ ಕಾಲ ನಾನು ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯೇ ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈ ವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟ ತನಕಲ್ಲ.
ಈ ಮೇಲ್ಕಂಡ ಕಾರಣಕ್ಕೆ ನಾನು ಎರಡು ವಿನಂತಿಗಳನ್ನು ತಮ್ಮಲ್ಲಿ ಮಾಡಿಕೊಳ್ಳುತ್ತೇನೆ. ಯಾರೇ ನಿಮ್ಮಲ್ಲಿ ದೂರಿಟ್ಟರೂ, ಯಾವುದೇ ಕಲಾವಿದರು ಇರಬಹುದು. ತಂತ್ರಜ್ಞರು ಇರಬಹುದು. ಯಾವುದೇ ವಿಭಾಗದವರು ಇರಬಹುದು. ಆ ದೂರಿನ ಕುರಿತಾದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮುಂದುವರೆಯಿರಿ. ಮತ್ತು ಈ ಕೆಟ್ಟ ಪರಂಪರೆಗೆ ನಾಂದಿ ಹೇಳುವುದಕ್ಕೆ ನಾವು ಯಾರು ಹೊಣೆಗಾರರಾಗುವುದು ಬೇಡ.
ದಯಮಾಡಿ ತಾವು ಸಂದಿಗ್ಧತೆಗೆ ಒಳಗಾಗದೆ, ನನ್ನ ಮೇಲೂ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ ನ್ಯಾಯಾಲಯದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿ ಇದ್ದೇನೆ. ನ್ಯಾಯ ಮತ್ತು ಸತ್ಯ ನನ್ನೊಂದಿಗಿದೆ ಎಂದು ಸಾಬೀತು ಮಾಡಿಕೊಳ್ಳಲು ನಂಗೊಂದಿಷ್ಟು ಅವಕಾಶ ಕೊಡಿ ಎಂದು ಪ್ರೀತಿಯಿಂದ ಕೇಳಿಕೊಳ್ಳುತ್ತಾ. ಎಂದೆಂದಿಗೂ ನಿಮ್ಮವ ಎಂದು ಬರೆದಿದ್ದಾರೆ ಕಿಚ್ಚ ಸುದೀಪ್.
ಅಂದರೆ ಸುದೀಪ್ ಅವರ ಪತ್ರದ ಪ್ರಕಾರ ಫಿಲ್ಮ್ ಚೇಂಬರ್ ದಾಖಲೆಗಳನ್ನು ಪರಿಶಿಲಿಸಿಲ್ಲ. ಈ ಮೊದಲು ಫಿಲ್ಮ್ ಚೇಂಬರ್`ಗೆ ಯಾರಾದರೂ ದೂರು ಕೊಟ್ಟಾಗ ಸಾಕ್ಷ್ಯಾಧಾರಗಳ ಪರಿಶೀಲನೆ ಆಗುತ್ತಿತ್ತು. ಈ ಬಾರಿ ಹಾಗಾಗಿಲ್ಲ ಎಂದಿದ್ದಾರೆ ಸುದೀಪ್. ಹಾಗಾದರೆ ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್ ಉದ್ದೇಶಪೂರ್ವಕವಾಗಿ ಆರೋಪ ಮಾಡುವವರಿಗೆ ವೇದಿಕೆ ಒದಗಿಸುತ್ತಿದೆಯೇ.. ಎಂಬ ಅನುಮಾನ ಮೂಡುತ್ತಿದೆ. ಉತ್ತರ ನೀಡಬೇಕಾದ್ದು ಈಗ ಫಿಲ್ಮ್ ಚೇಂಬರ್.
ಕಿಚ್ಚ ಸುದೀಪ್ ವಿರುದ್ಧ ಎನ್.ಕುಮಾರ್ 8 ಕೋಟಿ ಮೋಸದ ಆರೋಪ ಮಾಡಿದ್ದರು. ಇದೀಗ ರೆಹಮಾನ್ ಕೂಡಾ ಆರೋಪ ಮಾಡಿದ್ದಾರೆ. ಎನ್.ಕುಮಾರ್ ಸುದ್ದಿಗೋಷ್ಟಿ ನಂತರ ಹಾಗೂ ರೆಹಮಾನ್ ಸುದ್ದಿಗೋಷ್ಟಿಗೂ ಮೊದಲು ಕಿಚ್ಚ ಸುದೀಪ್ ಫಿಲ್ಮ್ ಚೇಂಬರ್`ಗೆ ಬಹಿರಂಗ ಪತ್ರ ಬರೆದಿದ್ದರು. ಚೇಂಬರ್`ಗೆ ಬರೆದ ಪತ್ರ ನೋಡಿದರೆ ಕಿಚ್ಚ ಸುದೀಪ್ ವಿಚಾರದಲ್ಲಿ ಚೇಂಬರ್`ನವರು ಉದ್ದೇಶಪೂರ್ವಕವಾಗಿ ನಡೆದುಕೊಂಡಿದ್ದಾರೇನೋ ಎಂಬ ಆರ್ಥ ಧ್ವನಿಸುತ್ತಿದೆ.
ಅಂದಹಾಗೆ ಇತ್ತೀಚೆಗೆ ಸುದೀಪ್ ಅವರು ವಿನಾಕಾರಣ ಸುದ್ದಿಯಾಗುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಬಿಜೆಪಿ ಪರ ನಿಲ್ಲುತ್ತಾರೆ ಎಂಬ ಸುದ್ದಿ ಹೊರಬಿದ್ದಾಗ, ಸುದೀಪ್ ಅವರ ವಿಡಿಯೊ ರಿಲೀಸ್ ಆಗುತ್ತಂತೆ ಅನ್ನೋ ಸುದ್ದಿ ಹಬ್ಬಿತ್ತು. ಸುದೀಪ್ ಮನೆಗೆ ಬೆದರಿಕೆ ಪತ್ರಗಳು ಬಂದಿದ್ದವು. ಸುದೀಪ್ ನೇರವಾಗಿ ಸ್ಟೇಷನ್ ಮೆಟ್ಟಿಲೇರಿದ್ದರು. ಅದಾದ ಮೇಲೆ ಎನ್. ಕುಮಾರ್ ಆರೋಪ ಬಂದಿತ್ತು. ಇದೀಗ ರೆಹಮಾನ್ ಆರೋಪ ಕೇಳಿ ಬರುತ್ತಿದೆ. ಸರಣಿ ಆರೋಪಗಳ ಹಿಂದೆ ಇನ್ನೇನೋ ನಡೆಯುತ್ತಿದೆ ಎಂಬ ಅನುಮಾನ ಮೂಡಿರುವುದು ಸುಳ್ಳಲ್ಲ.



