ಯಾವುದೇ ಕೊಲೆ ಕೇಸಿನಲ್ಲಿ ಐ ವಿಟ್ನೆಸ್ ಅಂದ್ರೆ ಪ್ರತ್ಯಕ್ಷಸಾಕ್ಷಿಗಳ ಮಹತ್ವ ಹೆಚ್ಚು. ಪ್ರತ್ಯಕ್ಷದರ್ಶಿಗಳು ಘಟನಾಸ್ಥಳದಲ್ಲಿ ಇದ್ದರು ಎಂದು ಸಾಬೀತಾದರೆ.. ಅರ್ಧ ಕೇಸು ಗೆದ್ದ ಹಾಗೆ. ಈಗ ಆಗಿರುವುದೂ ಅದೇ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ & ಗ್ಯಾಂಗ್ ಮೇಲೆ ಬಂದಿರುವ ಆರೋಪದಲ್ಲಿ ಇಬ್ಬರು ಆರೋಪಿಗಳು ಅಪ್ರೂವರ್ ಆಗಿದ್ದಾರೆ ಎಂಬ ಮಾಹಿತಿ ಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ ಅವರ ಕೊರಳಿಗೆ ನೇಣು ಹಗ್ಗದಂತೆ ಸುತ್ತಿಕೊಳ್ತಿದೆ. ಮೂಲಗಳ ಪ್ರಕಾರ ದರ್ಶನ್ & ಗ್ಯಾಂಗಿನಲ್ಲಿಯೇ ಇದ್ದ ಡ್ರೈವರ್ ಲಕ್ಷ್ಮಣ ಹಾಗೂ ದೀಪಕ್ ಎನ್ನುವವರು ಮಾಫಿ ಸಾಕ್ಷಿಯಾಗಿದ್ದಾರೆ. ಅಂದರೆ ಅಪ್ರೂವರ್ ಆಗಿದ್ದಾರೆ ಎಂಬ ಮಾಹಿತಿ ಇದೆ.
ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದೀಪಕ್ ಎಂಬಾತ ಎ13 ಆರೋಪಿ. ರೇಣುಕಾಸ್ವಾಮಿ ಹತ್ಯೆಯನ್ನ ಕಣ್ಣಾರೆ ಕಂಡಿರುವ, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡದೆ, ಪ್ರಕರಣದಲ್ಲಿ ಸಿಲುಕಿರುವ ಆರೋಪಿ ದೀಪಕ್ ‘ದರ್ಶನ್ ಅವರೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ’ ಎಂದು ಹೇಳಿದ್ದಾನೆ. ದೀಪಕ್ ಕೊಟ್ಟಿರುವ ಹೇಳಿಕೆಗೆ ಪೂರಕವಾಗಿ ‘ಮರ್ಮಾಂಗಕ್ಕೆ ಬಲವಾಗಿ ಬಿದ್ದಿರುವ ಹೊಡೆತದಿಂದಲೇ ಸಾವು ಸಂಭವಿಸಿದೆ’ ಎಂದು ಅಟಾಪ್ಸಿ ರಿಪೋರ್ಟ್‌ನಲ್ಲಿದೆ ಅಂತ ವರದಿಯಾಗಿದೆ. ಮರ್ಮಾಂಗಕ್ಕೆ ಪೆಟ್ಟು ಬಿದ್ದಿರುವುದೂ ಪೋಸ್ಟ್ ಮಾರ್ಟಂ ವರದಿಯಲ್ಲಿ ದೃಢಪಟ್ಟಿದೆ.
ಯಾರು ಈ ದೀಪಕ್..?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಲುಕಿರುವ ದೀಪಕ್ ಪ್ರಭಾವಿ ರಾಜಕಾರಣಿಯೊಬ್ಬರ ತಂಗಿಯ ಮಗಳ ಗಂಡ. ಅಂದರೆ ಅಳಿಯ. ಪ್ರಭಾವಿ ರಾಜಕಾರಣಿ ಕೂಡಾ ರಾಜರಾಜೇಶ್ವರಿ ನಗರ ನಿವಾಸಿಯಾಗಿದ್ದು, ಪ್ರಭಾವಿ ರಾಜಕಾರಣಿಯಾಗಿದ್ದಾರೆ.ಹೀಗಾಗಿ ದೀಪಕ್ ಫೋಟೋ ಹೊರಬಾರದಂತೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಪ್ರಕರಣದಿಂದ ದೀಪಕ್ ಹಾಗೂ ದರ್ಶನ್‌ರನ್ನ ಬಚಾವ್ ಮಾಡಲು 5 ಕೋಟಿ ರೂಪಾಯಿ ಡೀಲ್ ನಡೆದಿತ್ತು ಎಂಬ ಆರೋಪವೂ ಕೇಳಿಬಂದಿದೆ. ದೀಪಕ್‌ನನ್ನು ಅಪ್ರೂವರ್ ಮಾಡಿಕೊಂಡು ಪ್ರಕರಣದಿಂದ ಕೈಬಿಡಲು ಪ್ಲಾನ್ ನಡೆದಿತ್ತು ಎಂದು ಸಹ ವರದಿಯಾಗಿದೆ.
ಇನ್ನು ಲಕ್ಷ್ಮಣ್ ಅವರು ಈ ಹಿಂದೆ ಹಲವು ಬಾರಿ ಸಣ್ಣ ಪುಟ್ಟ ಘಟನೆಗಳಾದಾಗ.. ಹಲ್ಲೆಗಳಾಗಿ ಕೇಸುಗಳಾದಾಗ.. ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದರು. ತೀರಾ ಇತ್ತೀಚೆಗೆ ದರ್ಶನ್ ಅವರ ಮನೆಯ ಬಳಿ ನಾಯಿ ಕಚ್ಚಿಸಿದ ಪ್ರಕರಣದಲ್ಲಿ ಲಕ್ಷ್ಮಣ್ ಅವರ ಹೆಸರು ಕೇಳಿ ಬಂದಿತ್ತು.
ಆರೋಪಿಗಳಲ್ಲಿ ಅಪ್ರೂವರ್ ಆಗಿದ್ದಾರೆ ಎಂದರೆ ಅದು ಪ್ರಬಲ ಸಾಕ್ಷ್ಯವಾಗುತ್ತದೆ. ಏಕೆಂದರೆ ಪೊಲೀಸರು ಅಪ್ರೂವರ್ ಮಾಡಿದವರನ್ನು ಕೋರ್ಟಿನ ಎದುರು ಸ್ವಯಂ ಹೇಳಿಕೆ ಕೊಡಿಸುತ್ತಾರೆ. ಕೇಸಿನಲ್ಲಿ ಅವರು ಭಾಗಿಯಾಗಿದ್ದರೂ.. ಕೃತ್ಯದಲ್ಲಿ ಅವರು ಮಾಡಿದ ಕೃತ್ಯ ಕಡಿಮೆ ಗಂಭೀರವಾಗಿದ್ದರೆ ಅಥವಾ ಒತ್ತಡದಲ್ಲಿ ಮಾಡಿದ್ದರೆ ಅಂತಹವರನ್ನು ಅಪ್ರೂವರ್ ಎಂದು ಪರಿಗಣಿಸಬಹುದು. ಆದರೆ ಇದಕ್ಕೆ ನ್ಯಾಯಾಲಯ ಒಪ್ಪಿಕೊಳ್ಳಬೇಕು. ಹಾಗೆ ಅಪ್ರೂವರ್ ಆದವರಿಗೆ ಶಿಕ್ಷೆಯಿಂದ ಮಾಫಿಯೇನೂ ಸಿಕ್ಕುವುದಿಲ್ಲ. ಆದರೆ.. ವಿನಾಯಿತಿ ಸಿಗುತ್ತದೆ.
ಅಕಸ್ಮಾತ್, ಈ ಪ್ರಕರಣದಲ್ಲಿ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿತು ಎಂದಿಟ್ಟುಕೊಂಡರೆ, ಈ ಅಪ್ರೂವರ್ʻಗಳಿಗೆ ಕೆಲವು ವರ್ಷದ ಸಾಧಾರಣ ಶಿಕ್ಷೆ ವಿಧಿಸಬಹುದು. ಅಪ್ರೂವರ್ʻಗಳಿಗೆ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಹೆಚ್ಚು.



