ಕುಮಾರಸ್ವಾಮಿ ಕುಟುಂಬದಲ್ಲಿ ಇಬ್ಬರು ಶಾಸಕರಿದ್ದಾರೆ. ಅವರು ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ. ಇಬ್ಬರೂ ಶಾಸಕರೇ. ಅಣ್ಣ ರೇವಣ್ಣ ಎಂಎಲ್‍ಎ, ಅಣ್ಣನ ಮಗ ಪ್ರಜ್ವಲ್ ಸಂಸದ. ಇನ್ನೊಬ್ಬ ಪುತ್ರ ಸೂರಜ್ ರೇವಣ್ಣ ಕೂಡಾ ವಿಧಾನಪರಿಷತ್ ಸದಸ್ಯ. ಹೀಗಿರುವಾಗ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಎಂಎಲ್‍ಎ ಆಗ್ತಾರಾ ಎಂಬ ಪ್ರಶ್ನೆ ಮೂಡುವುದು ಸಹಜ. ನಿಖಿಲ್ ಕಳೆದ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಸುಮಲತಾ ಅಂಬರೀಷ್ ವಿರುದ್ಧ ಸೋಲು ಕಂಡಿದ್ದರು. ಹಾಗೆಂದು ನಿಖಿಲ್ ರಾಜಕೀಯದಿಂದ ದೂರವಾಗಿಯೇನೂ ಇಲ್ಲ. ಅತ್ತ ಮಂಡ್ಯದಲ್ಲಿ ಈಗಲೂ ಆಕ್ಟಿವ್ ಇರುವ ನಿಖಿಲ್, ಇತ್ತ ತಾಯಿಯ ಕ್ಷೇತ್ರ ರಾಮನಗರದಲ್ಲೂ ಆಕ್ಟಿವ್ ಇದ್ದಾರೆ. ವಾರಕ್ಕೊಮ್ಮೆ, ಎರಡು ಬಾರಿ ರಾಮನಗರ ಕ್ಷೇತ್ರದ ಕಾರ್ಯಕ್ರಮಗಳಲ್ಲಿ, ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಮನಗರ ಮತ್ತು ಚೆನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಸಿಎಂ ಕೂಡಾ ಆಗಿದ್ದರು. ಆಗ ತಮ್ಮ ಮೂಲ ಕ್ಷೇತ್ರ ರಾಮನಗರದಲ್ಲಿ ಅನಿತಾ ಅವರನ್ನು ನಿಲ್ಲಿಸಿದ್ದರು. ಚಾಲೆಂಜ್ ಹಾಕಿ ಹೋಗಿದ್ದ ಚೆನ್ನಪಟ್ಟಣವನ್ನು ಉಳಿಸಿಕೊಂಡಿದ್ದರು. ಈ ಬಾರಿಯೂ ಅನಿತಾ ಕುಮಾರಸ್ವಾಮಿಯವರೇ ರಾಮನಗರದಿಂದ ಸ್ಪರ್ಧಿಸ್ತಾರಾ ಅನ್ನೋ ಪ್ರಶ್ನೆಗೆ ಕುಮಾರಸ್ವಾಮಿ ಕೊಟ್ಟಿರುವ ಮಾರ್ಮಿಕ ಉತ್ತರದ ಸಂದೇಶ ಹೀಗಿದೆ.
ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರದ ಜನರೇ ನಿಖಿಲ್ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ.

ಇದೊಂದು ಹೇಳಿಕೆ ಜೆಡಿಎಸ್ ಕಾರ್ಯಕರ್ತರಲ್ಲಿ ಸಂಚಲನ ಸೃಷ್ಟಿಸಿದೆ. ಏಕೆಂದರೆ ಕುಮಾರಸ್ವಾಮಿಯವರಿಗೆ ರಾಮನಗರವೇ ಅದೃಷ್ಟದ ಕ್ಷೇತ್ರ. ಮೊದಲ ಬಾರಿ ಗೆದ್ದು ಸಿಎಂ ಆಗಿದ್ದು ರಾಮನಗರ ಕ್ಷೇತ್ರದಿಂದಲೇ. ನನಗೆ ನಿಖಿಲ್‍ನನ್ನ ದಡ ಸೇರಿಸೋದು ಹೇಗಪ್ಪ ಅನ್ನೋ ಚಿಂತೆ ಇಲ್ಲ. ರಾಮನಗರದಲ್ಲಿ ಯಾವ್ಯಾವ ನಾಯಕರು ಏನೇನು ಅನ್ನೋದು ಅವರಿಗೂ ಗೊತ್ತು. ಅವರ ಹೆಸರು ಘೋಷಣೆ ಮಾಡೋಕೂ ನನಗೆ ಅಂಜಿಕೆಯಿಲ್ಲ ಎಂದಿರೋ ಕುಮಾರಸ್ವಾಮಿ ರಾಮನಗರಕ್ಕೆ ನಿಖಿಲ್ ಅವರಿಗೆ ಟಿಕೆಟ್ ಕೊಡ್ತಾರಾ ಅನ್ನೋ ನಿರೀಕ್ಷೆ ಜನಗಳಲ್ಲಿದೆ. ಕುಮಾರಸ್ವಾಮಿ ಹೇಳಿಕೆಯೇ ಎಲ್ಲದಕ್ಕೂ ಕಾರಣ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ವಿಚಾರಕ್ಕೆ ಕುಮಾರಸ್ವಾಮಿಯವರಾಗಲೀ, ನಿಖಿಲ್ ಅವರಾಗಲೀ ಯೆಸ್ ಅಥವಾ ನೋ ಎಂದು ಸ್ಪಷ್ಟವಾಗಿ ಉತ್ತರ ಹೇಳೋದೂ ಇಲ್ಲ.ರಾಜಕೀಯಾತ್ಮಕವಾಗಿಯೇ ಉತ್ತರ ಕೊಡ್ತಾರೆ.

ಹಾಗಾದರೆ ಅನಿತಾ ಕುಮಾರಸ್ವಾಮಿ ಈ ಬಾರಿ ಎಲೆಕ್ಷನ್ನಿಗೇ ನಿಲ್ಲೋದಿಲ್ವಾ? ಗೊತ್ತಿಲ್ಲ. ಆ ಮೂಲಕ ರೇವಣ್ಣ ಅವರು ಭವಾನಿ ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸುವ ತಂತ್ರಗಾರಿಕೆಗೆ ಪ್ರತಿತಂತ್ರ ಹೂಡಲಿದ್ದಾರಾ..? ಗೊತ್ತಿಲ್ಲ. ಏಕೆಂದರೆ ರಾಜಕೀಯದಲ್ಲಿ.. ಅದರಲ್ಲೂ ಜೆಡಿಎಸ್ ರಾಜಕೀಯದಲ್ಲಿ ಅಂದುಕೊಂಡಿದ್ದೇ ಆಗುವ ಉದಾಹರಣೆ ಕಡಿಮೆ. ಅನಿರೀಕ್ಷಿತಗಳು ಸಂಭವಿಸಿದ್ದೇ ಹೆಚ್ಚು.



