ಒಬ್ಬರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡೋದು.. ಆಮೇಲೆ ಅದು ಸೀರಿಯಸ್ ಆಗುತ್ತಿದ್ದಂತೆ ಅದನ್ನು ಬೇರೆಯವರ ತಲೆಗೆ ಕಟ್ಟೋದು.. ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಅಸಭ್ಯ.. ಅಶ್ಲೀಲ.. ಅಸಹ್ಯ ಪೋಸ್ಟ್ ಹಾಕುವವರೂ ಈ ರೀತಿಯ ಪ್ಲಾನ್ ಮಾಡಿದ್ದರಾ..? ಅಚ್ಚರಿ ಎನಿಸುವಂತಿದೆ ಅಪ್ಪು ಹುಡುಗರು ಸಂಘಟನೆಯವರು ಕೊಟ್ಟಿರುವ ಸಾಕ್ಷ್ಯ.
ಅಶ್ವಿನಿ ಪುನೀತ್ ರಾಜಕುಮಾರ್ ಅಸಭ್ಯ.. ಅಸಹ್ಯಕಾರಿ ಪೋಸ್ಟ್ ಮಾಡಿದ್ದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿರುವ ಅಪ್ಪು ಅಭಿಮಾನಿಗಳು ದೂರನ್ನೂ ಕೊಟ್ಟಿದ್ದಾರೆ. ಅಪ್ಪು ಹುಡುಗರು ಕರ್ನಾಟಕ ಸಂಘಟನೆಯವರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಕ್ರಮ ಕೈಗೊಳ್ಳುವಂತೆ ಕೇಳಿರುವುದಷ್ಟೇ ಅಲ್ಲ.. ಕಿಚ್ಚ ಸುದೀಪ್ ಅಭಿಮಾನಿಯ ಹೆಸರು ಎಳೆದು ತಂದಿರುವುದನ್ನೂ ಸಾಕ್ಷ್ಯ ಸಮೇತ ತೋರಿಸಿದ್ಧಾರೆ. ಅಂದರೆ.. ಮೊದಲು ಪೋಸ್ಟ್ ಮಾಡಿದ್ದು ನಟ ದರ್ಶನ್ ಅಭಿಮಾನಿ ಎಂದು ಕೊಂಡ ವ್ಯಕ್ತಿ. ಆದರೆ.. ವಿಷಯ ಗಂಭೀರವಾಗುತ್ತಿದೆ ಎಂದು ಅರಿವಾದ ತಕ್ಷಣ.. ತನ್ನ ಪೇಜ್, ಪ್ರೊಫೈಲ್ ಎಲ್ಲ ಕಡೆ ಸುದೀಪ್ ಅಭಿಮಾನಿ ಎಂದು ಚೇಂಜ್ ಮಾಡಿದ್ಧಾನೆ ಅನ್ನೋದು ಅಪ್ಪು ಹುಡುಗರು ಕೊಟ್ಟಿರುವ ದೂರಿನ ಸಾರಾಂಶ.
ದೂರಿನ ಪ್ರಕಾರವೇ ನೋಡಿದರೆ..
ಕಳೆದ ಮಾರ್ಚ್ ತಿಂಗಳ 19ನೇ ತಾರೀಕಿನಂದು ಬೆಂಗಳೂರಿನ ಆರ್‌ಸಿಬಿ ತಂಡದ ಜೆರ್ಸಿ ಉದ್ಘಾಟನೆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್‌ಸಿಬಿ ತಂಡವು ಕೆಲ ಪಂದ್ಯಗಳಲ್ಲಿ ಸೋತ ಕಾರಣ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ‘ಗಜ ಪಡೆ’ ಎಂಬ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದೇ ಆರ್‌ಸಿಬಿ ತಂಡದ ಸೋಲಿಗೆ ಕಾರಣ ಎಂದು ಅಶ್ವಿನಿ ಅವರನ್ನು ಸೋಲಿನ ಹೊಣೆ ಮಾಡಿದರು. ಜೊತೆ ಅವರನ್ನು ಕೆಟ್ಟದಾಗಿ ನಿಂದಿಸಿ ಪೋಸ್ಟ್ ಮಾಡಲಾಗಿದೆ. ‘ಇದಾದ ನಂತರ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾಗ ಆ ನಕಲಿ ಖಾತೆಯ ಹೆಸರನ್ನು ‘ಸುದೀಪ್ ಅಭಿಮಾನಿ’ ಎಂದು ಬದಲಾಯಿಸಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹಾಗೂ ಸುದೀಪ್ ಅವರ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸಿರುತ್ತಾನೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಅವರಿಗೆ ಅವಮಾನ ಮಾಡಿರುತ್ತಾನೆ. ಈ ಘಟನೆಯಿಂದ ಕರ್ನಾಟಕದ ರಾಜವಂಶದ ಅಭಿಮಾನಿಗಳಿಗೆ ತುಂಬಾ ನೋವು ಉಂಟಾಗಿದೆ. ಹಾಗಾಗಿ ಅವನನ್ನು ಶೀಘ್ರದಲ್ಲಿ ಬಂಧಿಸಿ ಅವನಿಗೆ ತಕ್ಕ ಶಿಕ್ಷೆ ನೀಡಬೇಕಾಗಿ ಕೋರುತ್ತಿದ್ದೇವೆ’ ಎಂದು ದೂರಿನಲ್ಲಿ ಬರೆಯಲಾಗಿದೆ.
ಅಂದರೆ ಮೊದಲು ಮಾಡಿದ್ದ ಟ್ವೀಟ್‌ನಲ್ಲಿ ದರ್ಶನ್ ಅವರ ಅಭಿಮಾನಿ ಎಂದಿದ್ದರೆ, ದೂರು ದಾಖಲಾಗುವ ಸಮಯದಲ್ಲಿ ಅದೇ ಪೇಜ್ ಸುದೀಪ್ ಅಭಿಮಾನಿಯ ಪೇಜ್ ಎಂದು ಬದಲಾಗಿತ್ತು ಎಂಬುದು ಆರೋಪ. ಸೋಷಿಯಲ್ ಮೀಡಿಯಾದಲ್ಲಂತೂ ಪೊಲೀಸ್ ಇಲಾಖೆಯನ್ನು ಹಲವರು ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ವಿಚಿತ್ರವೆಂದರೆ.. ಇಷ್ಟೆಲ್ಲ ಆದ ನಂತರವೂ.. ಹಲವರು ಪೋಸ್ಟ್ ಮತ್ತು ಕಮೆಂಟ್ಸ್ʻಗಳಲ್ಲಿ ಇದೇ ರೀತಿಯ ಅಶ್ಲೀಲ ಪೋಸ್ಟ್ ಮಾಡುತ್ತಿರುವುದು ಇನ್ನೂ ಅಸಹ್ಯವಾಗಿ ಕಾಣಿಸುತ್ತಿದೆ.
ಅಪ್ಪು ಹುಡುಗರು ಸಂಘಟನೆಯವರು ದೂರು ಕೊಡುತ್ತಿದ್ದಂತೆ ಅತ್ತ ದರ್ಶನ್ ಅಭಿಮಾನಿ ಸಂಘಟನೆಯವರೂ ಎಚ್ಚೆತ್ತುಕೊಂಡಿದ್ದಾರೆ. ದರ್ಶನ್ ಅಭಿಮಾನಿ ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ್ ಅವರು ಈ ವಿಷಯ ದರ್ಶನ್ ಅವರಿಗೂ ಗೊತ್ತಾಗಿದೆ. ಬೇಸರಗೊಂಡಿದ್ದಾರೆ ಎಂದಿರುವ ಪುನೀತ್ ಸಿನಿಮಾ ಪ್ರಚಾರಕ್ಕೆ ಮಾತ್ರ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲು ದರ್ಶನ್ ಸೂಚನೆ ನೀಡಿದ್ದಾರೆ. ಹೀಗಾಗಿ ಇದು ಫೇಕ್ ಖಾತೆ. ಆತ ದರ್ಶನ್ ಅಭಿಮಾನಿ ಆಗಿರಲು ಸಾಧ್ಯವೇ ಇಲ್ಲ. ದರ್ಶನ್ ಅವರು ಅಭಿಮಾನಿಗಳಿಗೆ ಈ ರೀತಿ ಹೇಳಿರಲು ಸಾಧ್ಯವೇ ಇಲ್ಲ. ಅವರು ಮಹಿಳೆಯರಿಗೆ ಸಾಕಷ್ಟು ಗೌರವ ನೀಡುತ್ತಾರೆ ಎಂದಿದ್ದಾರೆ.



