ಪ್ರಜ್ವಲ್ ಪ್ರಕರಣ ಕೇವಲ ಒಂದು ಕುಟುಂಬದ ಪ್ರತಿಷ್ಠೆಯೋ.. ನೂರಾರು ಹೆಣ್ಣು ಮಕ್ಕಳ ಮಾನ ಮರ್ಯಾದೆ ಪ್ರಶ್ನೆಯೋ ಆಗಿ ಉಳಿದಿಲ್ಲ. ಅದೀಗ ಒಕ್ಕಲಿಗ ಯುದ್ಧಕ್ಕೂ ನಾಂದಿ ಹಾಡಿದೆ. ಪ್ರಜ್ವಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಬೇಕು ಎನ್ನುತ್ತಿರುವವರಲ್ಲಿ ಯಾರೂ ಕೂಡಾ..
ವಿಡಿಯೋಗಳಲ್ಲಿ ಬೆತ್ತಲಾದ ಹೆಣ್ಣು ಮಕ್ಕಳ ಮುಖ ತೋರಿಸಿದ್ದನ್ನು ಒಪ್ಪುವುದಿಲ್ಲ. ಪ್ರಜ್ವಲ್ʻನನ್ನು ಬೆತ್ತಲು ಮಾಡುವ ನೆಪದಲ್ಲಿ ಆ ಹೆಣ್ಣು ಮಕ್ಕಳ ಮಾನ ಮರ್ಯಾದೆ ಹರಾಜು ಹಾಕಿದ್ಧೇಕೆ ಎಂಬ ಪ್ರಶ್ನೆಗೆ ವಿಡಿಯೋ ಲೀಕ್ ಮಾಡಿದ್ದಾರೆ ಎನ್ನಲಾದವರಿಂದಲೂ ಉತ್ತರ ಇಲ್ಲ. ಅದೀಗ ಜಾತಿ ಯುದ್ಧಕ್ಕೆ ತಿರುಗಿದೆ.
ಕುಮಾರಸ್ವಾಮಿ ಅವರು ಒಕ್ಕಲಿಗರ ಸಮುದಾಯದ ಬ್ರಾಂಡ್. ಮಂಡ್ಯ ಭಾಗದಲ್ಲಿ ಜೆಡಿಎಸ್ ಗೆಲ್ಲುತ್ತಿರುವುದೇ ಒಕ್ಕಲಿಗರ ಬೆಂಬಲದಿಂದ ಎನ್ನುವುದು ಗುಟ್ಟೇನಲ್ಲ. ಓಪನ್ ಸೀಕ್ರೆಟ್. ರೇವಣ್ಣ ಮತ್ತು ಪ್ರಜ್ವಲ್ ಅವರ ವಿರುದ್ಧದ ಕೇಸಿನಲ್ಲಿ ಕುಮಾರಸ್ವಾಮಿ ಮೇಲೆ ಅಟ್ಯಾಕ್ ಜೋರಾಗುತ್ತಿದ್ದಂತೆ, ಕೌಂಟರ್ ಅಟ್ಯಾಕ್ ಶುರುವಾಯ್ತು. ಇತ್ತ ಕಾಂಗ್ರೆಸ್ ಕೂಡಾ ಉತ್ತರ ಕೊಟ್ಟಿದ್ದು ಒಕ್ಕಲಿಗ ಶಾಸಕರು, ಮಂತ್ರಿಗಳ ಮೂಲಕವೇ.
‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದವರು ಎಂಬ ಕಾರಣಕ್ಕೆ ಪ್ರಪಂಚದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಎಸಗಿದವರನ್ನು ಸಮರ್ಥಿಸಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವ ಅಗತ್ಯವಿಲ್ಲ. ಮಾಡಬಾರದ್ದನ್ನು ಮಾಡಿ ಜಾತಿ, ಧರ್ಮ ಹಾಗೂ ಮನೆಯ ಹೆಸರಿನಲ್ಲಿ ರಕ್ಷಣೆ ಪಡೆಯುವುದು ಇನ್ನೂ ಹೀನಾಯ ಎಂದು ಕೌಂಟರ್ ಕೊಟ್ಟಿದ್ದಾರೆ ಕೃಷ್ಣ ಬೈರೇಗೌಡ.
ಇದು ಪ್ರಪಂಚದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ. ಕುಮಾರಸ್ವಾಮಿ ಅವರು ರೇವಣ್ಣ ಅವರನ್ನು ವಿಚಾರಣೆ ಮಾಡಬಾರದಿತ್ತು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ರೇವಣ್ಣ, ಪ್ರಜ್ವಲ್‌ರನ್ನು ವಿಚಾರಿಸದೆ ದಾರಿಯಲ್ಲಿರುವ ಸಂತ್ರಸ್ತರನ್ನು ವಿಚಾರಣೆ ಮಾಡಬೇಕಾ ಎಂದು ಕಿಡಿಕಾರಿದ್ದಾರೆ. ಇವರು ಮಾಡಿರುವ ಕೃತ್ಯ ಒಕ್ಕಲಿಗ ಸಮಾಜಕ್ಕೆ ಕಳಂಕ. ಒಕ್ಕಲಿಗ ಸಮಾಜವನ್ನು ಅಡ್ಡ ಇಟ್ಟು ಕೊಂಡು ರಕ್ಷಣೆ ಪಡೆಯಲು ಮುಂದಾಗಿದ್ದಾರೆ ಎನ್ನುವುದು ಕೃಷ್ಣ ಭೈರೇಗೌಡ ಕೌಂಟರ್.
ಇದಕ್ಕೆ ಕೌಂಟರ್ ಕೊಟ್ಟಿರುವ ಕುಮಾರಸ್ವಾಮಿ ಒಕ್ಕಲಿಗ ಸಚಿವರು, ಸಂಸದರು, ಶಾಸಕರು ನನ್ನ ವಿರುದ್ಧ ಮಾತನಾಡಿದ್ದು, ಅವರ ಉದ್ದೇಶ ಇರುವುದು ನೊಂದವರಿಗೆ ನ್ಯಾಯ ಕೊಡಿಸುವು ದಲ್ಲ. ನನ್ನ ವಿರುದ್ಧ ದಾಳಿ ಮಾಡುವುದಷ್ಟೇ ಅವರ ಗುರಿಯಾಗಿದೆ. ಅವರು ಪೆನ್‌ಡ್ರೈವ್ ಗಳನ್ನು ಹಂಚಿಕೆ ಮಾಡಿದ ತಮ್ಮ ಪಕ್ಷದ, ಸರ್ಕಾರದ ‘ಖಳನಾಯಕ’ ನನ್ನು ರಕ್ಷಣೆ ಮಾಡಿಕೊಳ್ಳಲು ಜಾತಿ ಅಸ್ತ ಬಳಕೆ ಮಾಡಿದ್ದಾರೆ. ನಾನು ಅಂತಹ ಕೆಲಸ ಮಾಡಲ್ಲ. ಇಲ್ಲಿ ನಾನು ಜಾತಿಯನ್ನು ಎಳೆದು ತರುವುದಿಲ್ಲ. ಏಕಾಂಗಿ ಯಾಗಿಯೇ ಇದೆಲ್ಲವನ್ನೂ ಎದುರಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ನೊಂದ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಪೆನ್‌ಡ್ರೈವ್ ಗಳಲ್ಲಿ ತುಂಬಿಸಿ ಹಾದಿಬೀದಿಯಲ್ಲಿ ಹಂಚಬಾರದು ಎನ್ನುವುದು ಡಿ.ಕೆ.ಶಿವಕುಮಾರ್ ಅವರೊಗೆ ಗೊತ್ತಿರಲಿಲ್ಲವೇ? ವಿದೇಶದಲ್ಲಿ ಓದಿಕೊಂಡು ಬಂದ ಅವರಿಗೆ ಇನ್ನೂ ಸಾಮಾನ್ಯ ತಿಳಿವಳಿಕೆ ಇಲ್ಲವೇ? ಪೆನ್‌ಡ್ರೈವ್ ಗಳನ್ನು ಹಂಚಿದ್ದನ್ನು ಅವರು ಸಮರ್ಥನೆ ಮಾಡುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಉಪಮುಖ್ಯಮಂತ್ರಿ ಮತ್ತು ನನ್ನ ನಡುವೆ ಒಕ್ಕಲಿಗ ನಾಯಕತ್ವಕ್ಕೆ ನಡೆಯುತ್ತಿರುವ ಹೋರಾಟ ಎಂದು ಬಿಂಬಿಸಲು ನಾನು ಹೊರಟಿದ್ದಾರೆ. ಮೊದಲಿನಿಂದಲೂ ಏಕಾಂಗಿಯಾಗಿಯೇ ಹೋರಾಟ ಮಾಡಿದ್ದು, ಈಗಲೂ ಮಾಡುತ್ತಿದ್ದೇನೆ. ನಾವು ಹೆದರೋದು ಇಲ್ಲ. ಪರಾರಿಯಾಗೋದೂ ಇಲ್ಲ ಎಂದು ಸವಾಲು ಹಾಕಿದ್ಧಾರೆ.



