ದರ್ಶನ್ & ಗ್ಯಾಂಗ್ ವಿರುದ್ಧದ ಅನುಮಾನಗಳಲ್ಲಿ ಎಲ್ಲರಿಗೂ ಕಾಡುವ ಅಂಶ ಒಂದು. ಆರೋಪಿಗಳ ಸಂಖ್ಯೆ 17 ಅಲ್ಲ, 18ಕ್ಕೆ ಏರಿದೆ. ಆ ಆರೋಪಿಗಳಲ್ಲಿ ಯಾರಾದರೂ ನಾವೇ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡರೆ.. ದರ್ಶನ್ನು, ಪವಿತ್ರಾ ಗೌಡ ಇಬ್ಬರೂ ಬಚಾವ್ ಆಗಬಹುದಲ್ವಾ.. ಅನ್ನೋದು. ಆದರೆ, ಒಂದು ನೆನಪಿರಲಿ.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಎ2 ಆರೋಪಿಯಾಗಿದ್ದರೆ, ಪವಿತ್ರಾ ಗೌಡ ಎ1 ಆರೋಪಿ. ಯಾವುದೇ ಕೊಲೆಗೆ ಸಾಕ್ಷಿ ಹಾಗೂ ಮೋಟಿವ್ ಅಂದ್ರೆ ಕೊಲೆಯ ಕಾರಣ ಸಾಬೀತು ಪಡಿಸಬೇಕಿರುವುದು ಪೊಲೀಸರ ಎದುರು ಇರುವ ಸವಾಲುಗಳು. ದರ್ಶನ್ & ಗ್ಯಾಂಗ್ ವಿರುದ್ಧ ಪೊಲೀಸರಿಗೆ 21 ಸಾಕ್ಷ್ಯಗಳು ಲಭ್ಯವಾಗಿವೆ. ಅವುಗಳ ಸಂಖ್ಯೆ ಇನ್ನಷ್ಟು ಏರುವುದು ಖಚಿತ. ಏಕೆಂದರೆ ತನಿಖೆಯ ಆರಂಭದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಕ್ಕಿರುವ ಸಾಕ್ಷಿಗಳು ದರ್ಶನ್ & ಗ್ಯಾಂಗ್ʻನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡುವ ಸಾಧ್ಯತೆಗಳಿವೆ. ಜೊತೆಗೆ ಮೋಟಿವ್ ಅಂದ್ರೆ ಉದ್ದೇಶ ಕೂಡಾ ಪವಿತ್ರ ಗೌಡ ಎನ್ನುವ ಅಂಶವೂ ಇದೆ.
ಸಾಕ್ಷ್ಯ 1 – ಟವರ್ ಡಂಪ್
ಕೊಲೆ ನಡೆದ ಪಟ್ಟಣಗೆರೆ ಶೆಡ್ʻನಲ್ಲಿ ಕೊಲೆ ನಡೆದ ದಿನ ದರ್ಶನ್ ಸೇರಿ 6 ಆರೋಪಿಗಳು ಇದ್ದರು. ಟವರ್ ಡಂಪ್ ಸಾಕ್ಷ್ಯದಿಂದ ಅದು ಸಾಬೀತಾಗಿದೆ.
ಸಾಕ್ಷ್ಯ 2 – ಕಾಲ್ ಡೀಟೈಲ್ಸ್
ಕೊಲೆ ನಡೆದ ನಂತರ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚೆ ಮಾಡಿದ್ದಾರೆ. ಅಂದರೆ ಎಸ್ʻಐ ಒಬ್ಬರಿಗೆ ಮಾತನಾಡಿರುವ ಕರೆ ವಿವರ ಸಿಕ್ಕಿದೆ.
ಸಾಕ್ಷ್ಯ 3 – ಆರೋಪಿಗಳ ಶರಣಾಗತಿ
ಕೊಲೆ ನಡೆದ ಬಳಿಕ, ಶವ ಬಿಸಾಕಿ ಬಂದ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಿದ್ದಾರೆ.
ಸಾಕ್ಷ್ಯ 4 – 30 ಲಕ್ಷ ಹಣ ಸೀಝ್
ರೇಣುಕಾಸ್ವಾಮಿ ಮೃತದೇಹವನ್ನ ಬಿಸಾಡಲು ದೀಪಕ್ ನೀಡಿದ್ದ ತಲಾ 5 ಲಕ್ಷ ರೂಪಾಯಿ ಹಣವನ್ನ ತನಿಖಾಧಿಕಾರಿ ಜಪ್ತಿ ಮಾಡಿದ್ದಾರೆ. ಒಟ್ಟಾರೆ 30 ಲಕ್ಷ ರೂ. ಹಣವನ್ನೂ ಸೀಝ್ ಮಾಡಲಾಗಿದೆ.
ಸಾಕ್ಷ್ಯ 5 – ಇನ್ನಿತರ ಆರೋಪಿಗಳ ಹೆಸರು ಬಹಿರಂಗ
ಸರೆಂಡರ್ ಆದವರ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗಗೊಂಡಿದೆ. ಅಂದರೆ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡವರು ಹೇಳಿದ್ದ ಹೆಸರುಗಳು.
ಸಾಕ್ಷ್ಯ 6 – ಆರೋಪಿಗಳಿಂದ ದರ್ಶನ್, ಪವಿತ್ರ ಗೌಡ ಹೆಸರು ಬೆಳಕಿಗೆ
ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್, ಪವಿತ್ರಾ ಗೌಡ ಹೆಸರು ಬಹಿರಂಗಗೊಂಡಿದೆ. ಇದನ್ನೆಲ್ಲಾ ಸಾಕ್ಷ್ಯವಾಗಿ ಪೊಲೀಸರು ಪರಿಗಣಿಸಿದ್ದಾರೆ. ಅಂದರೆ ಕೊಲೆಯ ಉದ್ದೇಶ ಮತ್ತು ಮಾಡಿಸಿದವರ ಹೆಸರು ಬಹಿರಂಗವಾಗಿದೆ.
ಸಾಕ್ಷ್ಯ 7 – ಪವಿತ್ರಾ ಗೌಡ ಹೇಳಿಕೆ
ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡ್ತಿದ್ದ ಬಗ್ಗೆ ದರ್ಶನ್‌ಗೆ ತಿಳಿಸಿದ್ದಾಗಿ ಪವಿತ್ರಾ ಹೇಳಿಕೆ ಕೊಟ್ಟಿದ್ದಾರಂತೆ.
ಸಾಕ್ಷ್ಯ 8 – ಕಿಡ್ನಾಪ್ ಸಾಕ್ಷ್ಯ
ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಂದ ರೇಣುಕಾಸ್ವಾಮಿ ಕಿಡ್ನ್ಯಾಪ್ ನಡೆದಿದೆ. ಕೃತ್ಯದಲ್ಲಿ ಭಾಗಿಯಾಗಿದಕ್ಕೆ ಸಿಸಿಟಿವಿ ಸಾಕ್ಷಿಗಳು ಹಾಗೂ ಡ್ರೈವರ್ ಹೇಳಿಕೆಗಳು ಸಿಕ್ಕಿವೆ.
ಸಾಕ್ಷ್ಯ 9 – ರಾಘವೇಂದ್ರ ಹೇಳಿಕೆ
ಪವನ್, ದರ್ಶನ್, ಪವಿತ್ರಾಗೌಡ ಹೇಳಿದಂತೆ ರೇಣುಕಾಸ್ವಾಮಿನ ಕರೆತಂದಿರೋದಾಗಿ ರಾಘವೇಂದ್ರ ಸ್ಟೇಟ್‌ಮೆಂಟ್ ಕೊಟ್ಟಿದ್ದಾನಂತೆ. ಅಂದರೆ ಯಾರು ಹೇಳಿದರು ಅನ್ನೋದು ದಾಖಲಾಗಿದೆ.
ಸಾಕ್ಷ್ಯ 10 – ಶೆಡ್ʻನಲ್ಲಿ ರಕ್ತ ಕಲೆ ಸಾಕ್ಷಿ
ಆರ್‌ಆರ್ ನಗರ ಶೆಡ್‌ನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ, ಕೂದಲು, ಬೆವರಿನ ಸ್ಯಾಂಪಲ್ಸ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಸಾಕ್ಷ್ಯ 11 – ಫೊರೆನ್ಸಿಕ್ ಸಾಕ್ಷ್ಯ
ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಬ್ಲಡ್ ಸ್ಯಾಂಪಲ್‌ಗಳನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ. ಈ ಸಾಕ್ಷ್ಯಗಳು ಬಹುತೇಕ ಮ್ಯಾಚ್ ಆಗುತ್ತಿವೆ ಎನ್ನಲಾಗಿದೆ. ಆದರೆ, ಅಂತಿಮ ವರದಿ ಇನ್ನೂ ಬರಬೇಕಿದೆ.
ಸಾಕ್ಷ್ಯ 12 – ಬ್ಲಡ್ ಸ್ಯಾಂಪಲ್ಸ್
ರೇಣುಕಾಸ್ವಾಮಿ ಹಾಗೂ ಆರೋಪಿಗಳ ಸ್ಯಾಂಪಲ್ಸ್ ಮ್ಯಾಚ್ ಮಾಡುವ ಸಾಧ್ಯತೆ ಇದೆ. ಅಂದರೆ ಕೊಲೆಯಾದ ರೇಣುಕಾಸ್ವಾಮಿ ದೇಹದ ಮೇಲೆ ಪತ್ತೆಯಾಗಿರುವ ಸ್ಯಾಂಪಲ್ಸ್ ಮತ್ತು ಆರೋಪಿಗಳಲ್ಲಿ ಕೆಲವರ ಸ್ಯಾಂಪಲ್ಸ್ ಹೋಲಿಕೆಯಾಗುವ ಸಾಧ್ಯತೆ
ಸಾಕ್ಷ್ಯ 13 – ದರ್ಶನ್ ಸಂಪರ್ಕದಲ್ಲಿರುವುದಕ್ಕೆ ಸಾಕ್ಷಿ
ಕೊಲೆ ನಡೆದ ಬಳಿಕ ದೀಪಕ್, ವಿನಯ್ ಕಡೆಯಿಂದ ದರ್ಶನ್‌ಗೆ ಪದೇ ಪದೇ ಕಾಲ್ ಹೋಗಿದ್ಯಂತೆ. ಆ ಮೂಲಕ ದರ್ಶನ್ ಕೊಲೆ ಹಾಗೂ ಮುಚ್ಚಿಹಾಕುವ ಹಂತದಲ್ಲಿ ರೆಗ್ಯುಲರ್ ಸಂಪರ್ಕದಲ್ಲಿದ್ದದಕ್ಕೆ ಸಾಕ್ಷಿಗಳಿವೆ.
ಸಾಕ್ಷ್ಯ 14 – ಮೊಬೈಲ್ ಸಿಡಿಆರ್ ಡಂಪ್
ಮೊಬೈಲ್ ಸಿಡಿಆರ್ ಟವರ್ ಡಂಪ್ ಮೂಲಕ ಆರೋಪಿಗಳು ಒಂದೇ ಕಡೆ ಇದ್ದಿದ್ದು ಪತ್ತೆಯಾಗಿದೆ. ಅಂದರೆ ಎಲ್ಲ ಆರೋಪಿಗಳ ಟವರ್ ಲೊಕೇಷನ್ ಸಿಗ್ನಲ್ ಮ್ಯಾಚ್ ಆಗುತ್ತಿದೆ.
ಸಾಕ್ಷ್ಯ 15 – ದೊಣ್ಣೆ ಪತ್ತೆ
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ ಕಟ್ಟಿಗೆ ಶೆಡ್‌ನಲ್ಲಿ ಪತ್ತೆಯಾಗಿದ್ದು, ಲ್ಯಾಬ್ʻಗೆ ಕಳಿಸಲಾಗಿದೆ.
ಸಾಕ್ಷ್ಯ 16 – ಕಟ್ಟಲು ಬಳಸಿದ್ದ ಹಗ್ಗ
ಹತ್ಯೆಗೂ ಮುನ್ನ ರೇಣುಕಾಸ್ವಾಮಿ ಕಟ್ಟಿಹಾಕಲು ಬಳಸಿರುವ ಹಗ್ಗ ಸಿಕ್ಕಿದ್ಯಂತೆ.
ಸಾಕ್ಷ್ಯ 17 – ಕಬ್ಬಿಣದ ರಾಡ್.. ಇತರೆ ವಸ್ತುಗಳು ಸಿಕ್ಕಿವೆ
ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಬಳಸಿರುವ ಕಬ್ಬಿಣದ ವಸ್ತುಗಳು ಶೆಡ್‌ನಲ್ಲೇ ಪತ್ತೆಯಾಗಿದೆ.
ಸಾಕ್ಷ್ಯ 18 – ಶೆಡ್ ಸಿಸಿಟಿವಿ
ಆರೋಪಿಗಳು ಶೆಡ್‌ಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬರುವ ದೃಶ್ಯಗಳೂ ಇವೆ.
ಸಾಕ್ಷ್ಯ 19 – ಚಿತ್ರದುರ್ಗದಿಂದ ಬಂದ ಕಾರು
ರೇಣುಕಾಸ್ವಾಮಿ ಅವರನ್ನ ಚಿತ್ರದುರ್ಗದಿಂದ ಕರೆದುಕೊಂಡು ಬಂದ ಕಾರು, ಕಾರಿನ ಸಿಸಿಟಿವಿ, ರೇಣುಕಾಸ್ವಾಮಿಯನ್ನು ಆರೋಪಿ ಜಗ್ಗ ಕಾರಿಗೆ ಹತ್ತಿಸಿಕೊಳ್ಳುವ ಸಿಸಿಟಿವಿ ದೃಶ್ಯ ಸಿಕ್ಕಿವೆ.
ಸಾಕ್ಷ್ಯ 20 – ಶವ ಸಾಗಿಸಿದ್ದ ವಾಹನ ಜಪ್ತಿ
ರೇಣುಕಾಸ್ವಾಮಿ ಶವವನ್ನ ಸಾಗಾಟ ಮಾಡಲು ಬಳಸಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪುನೀತ್ ಎಂಬುವವರಿಗೆ ಸೇರಿದ ಕಾರ್ ಅದು.
ಸಾಕ್ಷ್ಯ 21 – ಆರೋಪಿಗಳು ಬಳಸಿದ್ದ ವಸ್ತುಗಳು ಪತ್ತೆ
ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳು ಬಳಸಿರುವ ನೀರಿನ ಬಾಟಲ್, ಮದ್ಯದ ಬಾಟಲಿಗಳು ಪತ್ತೆ.



