ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಕಡೆಗಣಿಸಲಾಗುತ್ತಿದೆಯೇ? ಇದು ಜನಸಾಮಾನ್ಯರನ್ನೂ ಕಾಡುತ್ತಿರುವ ಪ್ರಶ್ನೆ. ಬೇರೆ ರಾಜ್ಯಗಳ ಕಥೆ ಏನೇ ಇರಲಿ, ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಬಿಜೆಪಿಯನ್ನು ಊಹೆ ಮಾಡಿಕೊಳ್ಳೋಕೂ ಸಾಧ್ಯವಿಲ್ಲ. ಇದು ಹೈಕಮಾಂಡ್ ಎಂದರೆ ಮೋದಿ, ಅಮಿತ್ ಶಾ ರಂತಹವರಿಗೂ ಗೊತ್ತು.



ವಿಜಯೇಂದ್ರ ಅವರಿಗೆ ಶಿಕಾರಿಪುರದ ಟಿಕೆಟ್ ಘೋಷಿಸಿ, ಮಾರನೇ ದಿನವೇ ಇದು ಹೈಕಮಾಂಡ್‍ಗೆ ಬಿಟ್ಟಿದ್ದು ಎಂಬ ಯಡಿಯೂರಪ್ಪನವರ ಹೇಳಿಕೆ, ಬಿಜೆಪಿಯಲ್ಲಿ ಯಡಿಯೂರಪ್ಪ ಮಾತು ನಡೆಯುತ್ತಿಲ್ಲವೇ ಎಂಬ ಅನುಮಾನ ಮೂಡಿಸಿತ್ತು. ಯಡಿಯೂರಪ್ಪ ಕೆಳಗಿಳಿದು ವರ್ಷವಾಗಿದ್ದರೂ ವಿಜಯೇಂದ್ರ ಅವರಿಗೆ ಟಿಕೆಟ್, ಹುದ್ದೆ ಸೇರಿದಂತೆ ಏನನ್ನೂ ನೀಡಿಲ್ಲ ಎಂಬ ಮಾತು ಕೂಡಾ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ಕೊಟ್ಟಿತ್ತು. ಕಳೆದ ಬಾರಿ ಕಡೆಯ ಕ್ಷಣದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿದ್ದನ್ನು ರಾಜ್ಯದ ಜನತೆ ನೋಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ವಿಜಯೇಂದ್ರ ಅವರಿಗೆ ಹೋದಲ್ಲಿ ಬಂದಲ್ಲಿ ಈ ಪ್ರಶ್ನೆ ಎದುರಾಗುತ್ತಿದೆ.
ಯಡಿಯೂರಪ್ಪರನ್ನು ಬಿಜೆಪಿಯಲ್ಲಿ ನಿರ್ಲಕ್ಷ್ಯ ಮಾಡಿಲ್ಲ. ಮಾಡುವುದೂ ಇಲ್ಲ.
ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯ ಒಂದು ಶಕ್ತಿ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ನನ್ನ ಬಳಿಯೂ ಹೇಳಿದ್ದಾರೆ. ಬಹಿರಂಗವಾಗಿಯೂ ಹೇಳಿದ್ದಾರೆ. ಯಡಿಯೂರಪ್ಪ ಸಕ್ರಿಯವಾಗಿದ್ದು ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತಾರೆ ಎಂದಿದ್ದಾರೆ ವಿಜಯೇಂದ್ರ.

ಇವೆಲ್ಲದರ ನಡುವೆ ಎಂದಿನಂತೆ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ 140ರಿಂದ 150 ಸ್ಥಾನ ಗೆಲ್ಲಲಿದೆ. ಎದುರಾಳಿಗಳು ತಿರುಕನ ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ. ಕ್ಯಾಬಿನೆಟ್ ವಿಸ್ತರಣೆ ಶೀಘ್ರದಲ್ಲೇ ಆಗಲಿದ್ದು, ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದಿದ್ದಾರೆ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ವಿಷಯದಲ್ಲೂ ಅಷ್ಟೆ, ಅದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದಿದ್ದಾರೆ.



