ಕನ್ನಡ ಚಿತ್ರರಂಗ ಬಾಗಿಲು ಮುಚ್ಚಲಿದೆ ಎಂಬ ಆತಂಕ ಇತ್ತೀಚೆಗೆ ಭಾರಿ ಜೋರಾಗಿ ಸದ್ದು ಮಾಡ್ತಿದೆ. ಕಾರಣ ಬೇರೇನಿಲ್ಲ, ರಾಜ್ಯದಲ್ಲಿ ಇತ್ತೀಚೆಗೆ ಬಂದ್ ಆಗಿರುವ ಚಿತ್ರಮಂದಿರಗಳ ಸಂಖ್ಯೆ ೨೦೦ಕ್ಕೂ ಹೆಚ್ಚು. ಎಷ್ಟೋ ತಾಲೂಕು ಕೇಂದ್ರಗಳಲ್ಲಿ ಒಂದು ಚಿತ್ರಮಂದಿರವೂ ಇಲ್ಲದಂತೆ ಬಂದ್ ಆಗಿವೆ. ಡಬಲ್ ಡಿಜಿಟ್ ಇದ್ದ ಜಿಲ್ಲಾ ಕೇಂದ್ರಗಳಲ್ಲಿ ಎರಡು ಮೂರು ಸಂಖ್ಯೆಗೆ ಇಳಿದಿದೆ ಚಿತ್ರಮಂದಿರಗಳ ಸಂಖ್ಯೆ.
ಸೂಪರ್ ಸ್ಟಾರ್ʻಗಳು ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಬೇಕು. ಆಗ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ಹಲವು ಚಿತ್ರ ನಿರ್ಮಾಪಕರ ಹಾಗೂ ವಾಣಿಜ್ಯ ಮಂಡಳಿಯವರ ವಾದ. ಆದರೆ.. ಈ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ಧಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಇವರ ಮಾತು ಕೇಳಿಕೊಂಡು.. ಇವರು ಹೇಳಿದಂತೆ ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಿದ್ರೆ.. ಯಶ್, ದರ್ಶನ್ ಅವರೆಲ್ಲರ ಕಥೆ ಮುಗಿದಂತೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ರವಿಚಂದ್ರನ್.
ಇಷ್ಟಕ್ಕೂ ರವಿಚಂದ್ರನ್ ಹೇಳಿರೋದಾದ್ರೂ ಏನು..?
ಯಶ್, ದರ್ಶನ್ ಅವರೆಲ್ಲ ವರ್ಷಕ್ಕೆ 2-3 ಸಿನಿಮಾ ಮಾಡ್ತಾ ಹೋದ್ರೆ, ಎರಡೇ ವರ್ಷಕ್ಕೆ ಮನೆಗೆ ಕಳಿಸಿಬಿಡ್ತಿರಾ. ಅವರಿಗೀಗ ಅವರದ್ದೇ ಒಂದು ತಾಕತ್ತು, ಬಜೆಟ್, ಲೆವೆಲ್ ಇದೆ. ಇಷ್ಟೇ ಸಿನಿಮಾ ಮಾಡಿ ಅಂತ ಯಾರೂ ಫೋರ್ಸ್ ಮಾಡೋಕ್ ಆಗಲ್ಲ. ಅದು ಅವರ ಚಾಯ್ಸ್. ಒಬ್ಬ ಹೀರೋಗೆ ಕಥೆ ಮುಖ್ಯ ಅಲ್ವಾ? ಅವನಿಗೆ ಅವನದ್ದೇ ಒಂದು ಬ್ರ್ಯಾಂಡ್ ಇರುತ್ತದೆ. ಅದನ್ನು ಅವನು ಉಳಿಸಿಕೊಳ್ಳಬೇಕು ಅಲ್ವಾ ಎನ್ನುವ ರವಿಚಂದ್ರನ್ ʻಒಂದು ಸಿನಿಮಾಗೆ ದುಡ್ಡು ಕೊಟ್ಟರೆ ಎಲ್ಲ ಓಕೆ ಆಗಲ್ಲ. ಕಥೆ ಸಿಕ್ಕರೆ ಓಕೆ ಆಗುತ್ತೆ. ನಮಗೀಗ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ ದುಡ್ಡು ಕೊಟ್ಟರೆ ಎಲ್ಲ ಸಿನಿಮಾ ಮಾಡ್ತಾ ಹೋಗ್ತಿವಿ. ಆದರೆ ಅವರಿಗೆ ಪಾಕೆಟ್ ತುಂಬಿದೆ, ಅವರು ಕಥೆ ಕೇಳ್ತಾರೆ ಎನ್ನುವುದು ರವಿಚಂದ್ರನ್ ಮಾತು.
ಸಹಜವೇ. ಕಥೆ ಚೆನ್ನಾಗಿದ್ದರೆ ಮಾತ್ರ ಸ್ಟಾರ್ʻಗಳು ಗೆಲ್ಲೋದಿಕ್ಕೆ ಸಾಧ್ಯ. ಕೇವಲ ಕಥೆ ಅಲ್ಲ, ಎಲ್ಲವೂ ಸರಿಸಮವಾಗಿ ಬೆರೆತಿರಬೇಕು. ಕಾಟೇರಕ್ಕೆ ಮುನ್ನ ದರ್ಶನ್ ಅವರ ಕ್ರಾಂತಿ ಮಕಾಡೆ ಮಲಗಿದ್ದನ್ನು ನೋಡಿದ್ದಾರೆ. ಕೆಜಿಎಫ್ ಚಿತ್ರಕ್ಕೂ ಮುನ್ನ ಯಶ್ ಅವರ ಮಿಸ್ಟರ್ & ಮಿಸಸ್ ರಾಮಾಚಾರಿಯೂ ದಬ್ಬಾಕ್ಕೊಂಡಿತ್ತು. ಅವರಷ್ಟೇ ಅಲ್ಲ, ಸುದೀಪ್, ಗಣೇಶ್, ಶಿವಣ್ಣ, ಉಪೇಂದ್ರ, ಧ್ರುವ ಸರ್ಜಾ (ಇವರ ವಿಷಯ ಬೇರೆ. ಬರೋದೇ 3 ವರ್ಷಕ್ಕೊಮ್ಮೆ), ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ.. ಇವರೆಲ್ಲರೂ ಸೋಲು ಕಂಡವರೇ. ಯಾವುದೇ ಚಿತ್ರಕ್ಕೆ ಕಥೆ ಆತ್ಮವಾದರೆ.. ಮೇಕಿಂಗ್ ಕಿಂಗ್. ಪ್ರಚಾರವೂ ಅಷ್ಟೇ ಮುಖ್ಯ.
ಕೆಜಿಎಫ್ ಆದ್ಮೇಲೆ ಯಶ್ ಏನು ಮಾಡಬೇಕು? ಕಾಟೇರ ಆದಮೇಲೆ ದರ್ಶನ್ ಏನು ಮಾಡಬೇಕು? ಪ್ರೇಕ್ಷಕರ ನಿರೀಕ್ಷೆಗಳು ಏನಿರ್ತವೆ? ಇವನ್ನೆಲ್ಲ ಲೆಕ್ಕ ಹಾಕ್ಕೊಂಡು ಸಿನಿಮಾ ಮಾಡ್ಬೇಕಾಗುತ್ತೆ. ಎಲ್ಲರಿಗೂ ಯಶ್, ದರ್ಶನ್ ಬೇಕು ಅಂದ್ರೆ ಏನ್ ಮಾಡೋಕ್ ಆಗುತ್ತೆ ಎಂದು ಪ್ರಶ್ನೆ ಮಾಡೋ ರವಿಚಂದ್ರನ್.. ಮಾತೆತ್ತಿದ್ರೆ ಮಲಯಾಳಂ ಸಿನಿಮಾ ಅಂತೀರ. ಅಲ್ಲಿಗೇ ಹೋಗಿ ಕಥೆ ಮಾಡ್ಕೊಂಡ್ ಬನ್ನಿ. ಯಾರ್ ಬೇಡ ಅಂತಾರೆ. ಸಿನಿಮಾ ಜನ ಬರ್ತಿಲ್ಲ ಅಂತ ಹೇಳೋದೇ ತಪ್ಪು. ಒಳ್ಳೆ ಸಿನಿಮಾ ಮಾಡಿ, ಜನ ಯಾಕ್ ಬರಲ್ಲ ನೋಡ್ತೀನಿ. ಜನ ಯಾವತ್ತೂ ಒಳ್ಳೆಯ ಸಿನಿಮಾವನ್ನು ಬಿಟ್ಟಿಲ್ಲ ಎನ್ನುತ್ತಾರೆ.
ರವಿಚಂದ್ರನ್ ಪ್ರಕಾರ ಇದೊಂದು ಕೆಟ್ಟ ಟೈಂ ಅಷ್ಟೆ. ಈ ಹಿಂದೆಯೂ ಇಂತಹ ಸ್ಥಿತಿ ಎದುರಾಗಿತ್ತು. ನಮ್ಮ ಇಂಡಸ್ಟ್ರಿಯಲ್ಲಿ ಒಳ್ಳೆಯ ದೊಡ್ಡ ದೊಡ್ಡ ಸಿನಿಮಾಗಳೂ ಬಂದಿವೆ. ಒಳ್ಳೆಯ ಸಮಯ ಬರುತ್ತೆ. ಕೆಲಸ ನಿಲ್ಲಿಸ್ತೀವಿ ಅನ್ನೋದು ಪರಿಹಾರ ಅಲ್ಲ ಎಂದು ರವಿಚಂದ್ರನ್ ಬುದ್ದಿವಾದ ಹೇಳಿದ್ಧಾರೆ.
ರವಿಚಂದ್ರನ್ ಕೇವಲ ನಟ ಅಲ್ಲ, ನಿರ್ದೇಶಕ ಹಾಗೂ ನಿರ್ಮಾಪಕರೂ ಹೌದು. ಅನುಭವಿ ಕಸುಬುದಾರ. ಹತ್ತಿರ ಹತ್ತಿರ ನೂರು ಸಿನಿಮಾ ಮಾಡಿರೋ ರವಿಚಂದ್ರನ್, ಚಿತ್ರರಂಗದಲ್ಲಿ ಗೆದ್ದಿದ್ದಾರೆ. ಸೋತಿದ್ದಾರೆ. ಅದ್ಭುತ ಗೆಲುವು ಹಾಗೂ ಅನಿರೀಕ್ಷಿತ ಫ್ಲಾಪ್ ಎರಡನ್ನೂ ಕಂಡಿದ್ಧಾರೆ. ವಿತರಕರೂ ಹೌದು. ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಕುಟುಂಬಗಳಲ್ಲಿ ರವಿಚಂದ್ರನ್ ಕುಟುಂಬವೂ ಒಂದು. ಹೀಗಾಗಿ ರವಿಚಂದ್ರನ್ ಮಾತುಗಳಿಗೆ ವಿಶೇಷ ತೂಕವಿದೆ.
ಸ್ವತಃ ರವಿಚಂದ್ರನ್ ಅವರೂ ಕೂಡಾ.. ಒಂದು ಕಾಲಕ್ಕೆ ಸ್ಟಾರ್ ಆಗಿದ್ದವರು. ಇವತ್ತಿಗೆ ಕ್ರೇಜಿ ಸ್ಟಾರ್ ಅನ್ನೋ ಬಿರುದಿನ ಪಳೆಯುಳಿಕೆಯಾಗಿದ್ಧಾರೆ. ಮಲ್ಲ ನಂತರ ಅವರಿಗೂ ಯಶಸ್ಸು ಸಿಕ್ಕಿಲ್ಲ. ಒಂದು ಕಾಲಕ್ಕೆ ರವಿಚಂದ್ರನ್ ಚಿತ್ರಗಳು ಸಾಲು ಸಾಲಾಗಿ ಬರುತ್ತಿದ್ದವು. ಈಗಲೂ ಬರುತ್ತಿವೆಯಾದರೂ.. ಪ್ರೇಕ್ಷಕರಿಗೆ ಗೊತ್ತಾಗುತ್ತಿಲ್ಲ. ಬೇಸರ ಎನಿಸಿದರೂ.. ಇದು ಸ್ವತಃ ರವಿಚಂದ್ರನ್ ಒಪ್ಪಿಕೊಳ್ಳುತ್ತಿರುವ ಕಹಿ ಸತ್ಯ.



