ಸಿದ್ದರಾಮಯ್ಯ ದೈವಭಕ್ತರಾದರೂ, ಮೂಢನಂಬಿಕೆ ವಿರೋಧಿ. ಅದನ್ನು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಸಿಎಂ ಪಟ್ಟ ಹೋಗುತ್ತೆ ಎಂಬ ಮೂಢನಂಬಿಕೆಯನ್ನು ಪದೇ ಪದೇ ಸುಳ್ಳೆಂದು ಸಾಬೀತು ಮಾಡಿದವರು. ಮೂಢನಂಬಿಕೆ ವಿರೋಧಿ ಕಾಯ್ದೆಯನ್ನೇ ತರಲು ಹೊರಟಿದ್ದ ಸಿದ್ದರಾಮಯ್ಯ, ಮಾಟ ಮಂತ್ರಗಳನ್ನು ನಂಬುವುದು ಸುಳ್ಳು. ಆದರೆ ಅವರ ಬೆಂಬಲಿಗರು ನಂಬುವುದು ಅಷ್ಟೇ ಸತ್ಯ. ಹೀಗಾಗಿಯೇ ಸಿದ್ದರಾಮಯ್ಯಗೆ ಮಾಟ ಮಂತ್ರ ಮಾಡಿಸಿದ್ರೆ ಉಲ್ಟಾ ಹೊಡೆಯುತ್ತೆ ಎಂಬ ಹೇಳಿಕೆ ಬಂದಿರೋದು. ವಿಶೇಷವೆಂದರೆ ಈ ಮಾತು ಹೇಳಿರುವುದು ಜೆಡಿಎಸ್ ಶಾಸಕ, ಕುಮಾರಸ್ವಾಮಿಯವರ ಅಣ್ಣ, ದೇವೇಗೌಡರ ಮಗ ಹೆಚ್.ಡಿ.ರೇವಣ್ಣ.
ವಿಧಾನಸಭೆಯಲ್ಲಿ ಬರ ಸಮಸ್ಯೆ ಕುರಿತ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ” ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲ. ಸಿಎಂ ಕನಸಿನ ಯೋಜನೆಯನ್ನು ಸಚಿವರು ಪಾಲಿಸುತ್ತಿಲ್ಲ.
ಸಿಎಂ ಸಿದ್ದರಾಮಯ್ಯ ಮೊದಲನಂತೆ ಖಡಕ್ ಆಗಿಲ್ಲ. ಹಿಂದೆ ಖಡಕ್ ಆಗಿ ಅಧಿಕಾರಿಗಳಿಗೆ ಚಳಿ ಜ್ವರ ಬಿಡಿಸಿದ್ದ ಸಿದ್ದರಾಮಯ್ಯ ಅವರಿಗೆ ಈಗ ಯಾಕೋ ಗರ ಬಡಿದ ಹಾಗಿದೆ ಎಂದರು.
ನಮ್ಮ ಕಡೆ ಗಾಳಿ ಹೊಡೆದೈತೆ ಅಂತಾರೆ, ರೇವಣ್ಣ ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಸ್ನೇಹಿತರು. ಹಾಗಾಗಿ ರೇವಣ್ಣ ಏನಾದರೂ ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬಿಡಿಸಲು ಆಗುತ್ತಾ ನೋಡಬೇಕು ಎಂದು ರೇವಣ್ಣ ಅವರನ್ನು ಎಳೆದು ತಂದರು.
ಸಿದ್ದರಾಮಯ್ಯಗೆ ದೇವರ ಶಕ್ತಿಯಿದೆ. ಮಾಟಮಂತ್ರ ಮಾಡಿಸಿದರೆ ಮಾಡಿಸವರಿಗೇ ತಿರುಗು ಬಾಣವಾಗುತ್ತದೆ ಎಂದು ತಿರುಗೇಟು ಕೊಟ್ಟರು ರೇವಣ್ಣ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್ ಮಾಟ, ಮಂತ್ರ ತಗಲದಂತೆ ಹೋಮ ಮಾಡಿಸಿದ್ದಾರಂತೆ, ಅದು ಕುಮಾರಸ್ವಾಮಿ ಅವರಿಗೆ ಮಾಡಿಸಬೇಕಿತ್ತು. ಸಿದ್ದರಾಮಯ್ಯ ಗರ ಬಡಿದಂತೆ ಆಗಿದ್ದಾರೆ ಎಂದು ನಾನು ಹೇಳಿಲ್ಲ. ಮಾಜಿ ಸಚಿವ ಆಂಜನೇಯ ಅವರು ಹೇಳಿದ್ದು ಎಂದು ಉತ್ತರ ಕೊಟ್ಟರು.
ಇದಕ್ಕೆ ಯತ್ನಾಳ್ ಅವರೂ ಸಹಮತ ವ್ಯಕ್ತಪಡಿಸಿ . ಮೊದಲಿನ ಸಿದ್ದರಾಮಯ್ಯ ಆಗಿದ್ದರೆ ಉತ್ತಮ ಆಡಳಿತ ಇರುತ್ತಿತ್ತು. ನಾನು ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಅವರೇ ನೀವು ಯಾವುದಕ್ಕೂ ಭಯಪಡಬೇಡಿ. ದೇವರು ನಿಮ್ಮ ಜೊತೆ ಇದ್ದಾನೆ. ನೀವು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಿರಿ ಎಂದು ಸಲಹೆ ಕೊಟ್ಟರು.
ಒಟ್ಟಿನಲ್ಲಿ ಬರ ಪರಿಹಾರ ಚರ್ಚೆ ವೇಳೆ ಚರ್ಚೆಯಾಗಿದ್ದು ಮಾತ್ರ ಮಾಟ ಮಂತ್ರದ ಬಗ್ಗೆ. ಅಂದಹಾಗೆ ರೇವಣ್ಣ ಇಷ್ಟೆಲ್ಲವನ್ನೂ ಹೇಳಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರ ಎದುರಲ್ಲೇ ಎನ್ನುವುದು ವಿಶೇಷ.



