ಕೆಟ್ಟದ್ದನ್ನು ನೋಡಬಾರದು. ಕೆಟ್ಟದ್ದನ್ನು ಕೇಳಬಾರದು. ಕೆಟ್ಟದ್ದನ್ನು ಮಾತನಾಡಬಾರದು. ಅವುಗಳಿಗೆ ಈಗ ಹೊಸ ಸೇರ್ಪಡೆ ಕೆಟ್ಟದ್ದನ್ನು ಮೊಬೈಲಿನಲ್ಲಿ ಇಟ್ಟುಕೊಳ್ಳಬಾರದು. ಕೆಟ್ಟದ್ದನ್ನು ಇನ್ನೊಬ್ಬರಿಗೆ ತೋರಿಸುವ.. ಕಳಿಸುವ ಕೆಲಸಕ್ಕೆ ಕೈ ಹಾಕಬಾರದು. ಇದೆಲ್ಲವನ್ನೂ ಹೇಳ್ತಿರೋದು ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳಿಗೆ. ಒಂದು ಲೆಕ್ಕದ ಪ್ರಕಾರ ಆ ವಿಡಿಯೋಗಳ ಸಂಖ್ಯೆ 2896. ಆದರೆ.. ಕಾನೂನು ಪ್ರಕಾರ ವಿಡಿಯೋಗಳನ್ನು ಇನ್ನೊಬ್ಬರಿಗೆ ಕಳಿಸುವುದು ಕ್ರೈಂ.
ಪ್ರಜ್ವಲ್ ರೇವಣ್ಣ ಕೇಸ್‌ಗೆ ಸಂಬಂಧಿಸಿದ ವಿಡಿಯೋ ವ್ಯಾಟ್ಸಪ್ ಸೇರಿದಂತೆ ಜಾಲತಾಣದಲ್ಲಿ ಹಂಚಿಕೆ ಅಪರಾಧ. ಹಂಚಿಕೆ ಮಾಡುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ʻಐಟಿ ಎಚ್ಚರಿಕೆ ಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳನ್ನು ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ (ವಾಟ್ಸಾಪ್‌ನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ (1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಇದು ಎಸ್ʻಐಟಿ ನೀಡಿರುವ ಮಾಧ್ಯಮ ಪ್ರಕಟಣೆ.
ವಾಟ್ಸಪ್ ಅಷ್ಟೇ ಅಲ್ಲ, ಬ್ಲೂಟೂತ್, ಮೆಸ್ಸೆಂಜರ್, ಶೇರ್ ಚಾಟ್, ಪೆನ್ ಡ್ರೈವ್, ಸಿಡಿ, ಪ್ರೈವೇಟ್ ಮೆಸ್ಸೇಜಿಂಗ್ ಆಪ್.. ಹೀಗೆ ಯಾವುದೇ ಮೀಡಿಯಂ ಮುಖಾಂತರವೂ ವಿಡಿಯೋ ಕಳಿಸಬೇಡಿ. ಸೋಷಿಯಲ್ ಮೀಡಿಯಾಗಳಾದ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ʻಟಾಗ್ರಾಂ.. ಇನ್ನಿತರೆ ಪೇಜುಗಳಲ್ಲಿ ಹಾಕಿದರಂತೂ.. ಪೊಲೀಸರು ಪ್ರತ್ಯಕ್ಷರಾಗೋದು ಗ್ಯಾರಂಟಿ. ಪೇಜ್ ಡಿಲೀಟ್ ಆಗುವ ಮೊದಲು ಅರೆಸ್ಟ್ ಆಗುವ ಅಪಾಯ ಇದೆ.
ಇನ್ನು ವಿಡಿಯೋಗಳಲ್ಲಿ ತಾವು ನೋಡಿರುವ ಯಾವುದೇ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ಕೆಲಸ ಮಾಡಬೇಡಿ. ಇದು ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಅಥವಾ ಇನ್ಯಾರೇ ಆದರೂ ಮಾಡುವುದು ಬೇಡ. ಮಾಧ್ಯಗಳಲ್ಲಂತೂ ವಿಡಿಯೋಗಳಿದ್ದರೂ.. ಎಲ್ಲಿಯೂ ಪ್ರಸಾರ ಮಾಡುತ್ತಿಲ್ಲ. ಈ ಬಾರಿಯ ವಿಶೇಷವೇ ಅದು. ಯಾವುದೇ ನ್ಯೂಸ್ ಚಾನೆಲ್ ಅಶ್ಲೀಲ ವಿಡಿಯೋ ತೋರಿಸುತ್ತಿಲ್ಲ.
ಯಾವುದೇ ಲೈಂಗಿಕ ಹಿಂಸೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ನಾಚಿಕೆ ಪಟ್ಟುಕೊಳ್ಳಬೇಕಾದ್ದು, ಹಿಂಜರಿಯಬೇಕಾದ್ದು, ಅವಮಾನ ಎಂದು ಭಾವಿಸಿ ತಲೆ ತಗ್ಗಿಸಬೇಕಾದ್ದು ಅಪರಾಧ ಎಸಗಿದ ವ್ಯಕ್ತಿಯೇ ಹೊರತು, ಶೋಷಣೆಗೆ ಒಳಗಾದ ವ್ಯಕ್ತಿ ಅಲ್ಲ. ಸೂಕ್ಷ್ಮ ಸಂವೇದನೆಯಿಂದ ವರ್ತಿಸುವುದು ಒಳ್ಳೆಯದು. ಈಗಾಗಲೇ ಇದಕ್ಕೆ ಅಗತ್ಯವಿರುವ ವೃತ್ತಿಪರ ಕೌನ್ಸಿಲರುಗಳು, ವೈದ್ಯರುಗಳು ಎಸ್ʻಐಟಿಗೆ ಸಾರ್ವಜನಿಕರೂ ಈ ವಿಚಾರದಲ್ಲಿ ಸ್ಪಂದಿಸುವುದು ಅಗತ್ಯ ಎಂದು ವಿಶೇಷ ತನಿಖಾ ತಂಡ (ಎಸ್ʻಐಟಿ) ಮನವಿ ಮಾಡಿದೆ.
ಪ್ರಜ್ವಲ್, ರೇವಣ್ಣರಿಂದ ತೊಂದರೆ ಆಗಿದೆಯಾ.. ಕರೆ ಮಾಡಿ.. :
ಸದರಿ ಪ್ರಕರಣದ ಯಾವುದೇ ಸಂತ್ರಸ್ತ ವ್ಯಕ್ತಿಯು ಈಗಾಗಲೇ ಆರಂಭಿಸಲಾಗಿರುವ ನಮ್ಮ ಹೆಲ್ಫ್ ಲೈನ್ 6360938947 ಈ ನಂಬರ್ ಅನ್ನು ಬೆಳಿಗ್ಗೆ 8 ರಿಂದ ರಾತ್ರಿ 8ರ ನಡುವೆ ಯಾವಾಗ ಬೇಕಾದರೂ ಸಂಪರ್ಕಿಸಬಹುದಾಗಿದೆ. ಈ ನಂಬರಿಗೆ ಕರೆ ಮಾಡುವ ಯಾವುದೇ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು. ಅವರು ಎಸ್ ಐ ಟಿ ಕಚೇರಿಗೆ ಬರುವ ಅಗತ್ಯವೂ ಇಲ್ಲ. ಸಂತ್ರಸ್ತರಿಗೆ ಅಗತ್ಯವಿರುವ ನೆರವನ್ನು ಒದಗಿಸಲಾಗುವುದು ಎಂದು ಎಂದು ಭರವಸೆ ನೀಡಲಾಗಿದೆ.



