ದೊಡ್ಡ ದೊಡ್ಡ ನಾಯಕರು ಮಾಡೋ ಸಣ್ಣ ಸಣ್ಣ ತಪ್ಪುಗಳು ಅವರ ಜೀವನವನ್ನೇ ಹಾಳು ಮಾಡಿಬಿಡುತ್ತವೆ. ಇದೀಗ ಪ್ರಜ್ವಲ್ ರೇವಣ್ಣ ಸಣ್ಣತನದ ಹೊಲಸು ಕೆಲಸ ಮಾಡಿ ಮಾನ ಮರ್ಯಾದೆ ಭವಿಷ್ಯ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ನೋಡಿದವರಿಗೆ.. ಪ್ರಜ್ವಲ್ ಮಾಡಿದ್ದು ಸುಳ್ಳು ಎಂದಾಗಲೀ.. ನೂರಾರು ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದು ಸುಳ್ಳು ಎಂದಾಗಲೀ.. ಯಾರೂ ಹೇಳುತ್ತಿಲ್ಲ.
ಹೊರಗಿನವರಿಗೆ ಇದು ಅಚಾನಕ್ ಸುದ್ದಿಯಾದರೂ.. ಅವರ ಕುಟುಂಬದವರಿಗೆ.. ಆಪ್ತರಿಗೆ ಇದು ಗೊತ್ತಿಲ್ಲದೇ ಇದ್ದದ್ದೇನಲ್ಲ. ಹುಡುಗ ಹಾದಿ ತಪ್ಪಿದ್ಧಾನೆ ಎಂದು ಪ್ರಜ್ವಲ್ ರೇವಣ್ಣ ಆಪ್ತರನೇಕರಿಗೆ ಮೊದಲೇ ಗೊತ್ತಿತ್ತು. ಆದರೆ.. ಅದನ್ನು ದೊಡ್ಡ ಗೌಡರೂ ಸೇರಿದಂತೆ ಕುಟುಂಬದ ಹಿರಿಯರಿಗೆ ಹೇಳುವ ಧೈರ್ಯ ಬರಲಿಲ್ಲ ಎನ್ನುತ್ತಾರೆ ಜೆಡಿಎಸ್ʻನಲ್ಲಿಯೇ ಇರುವ ಕೆಲವು ನಾಯಕರು. ಹೇಗೆ ತಾನೇ ಹೇಳಿಯಾರು..ಎನ್ನುವ ಪ್ರಶ್ನೆಗೆ ಉತ್ತರ ಅವರು ನಡೆಸಿದ ಮತ್ತೊಂದು ದರ್ಪ. ಅಂದಹಾಗೆ ಇದು ಬೆಳಕಿಗೆ ಬಂದಿರುವ ಕೆಲವೇ ಕೆಲವು ಪ್ರಕರಣಗಳಲ್ಲಿ ಒಂದಷ್ಟೆ.
ಈಗ ವಿಡಿಯೋ ಲೀಕ್ ಮಾಡಿರುವವರು ಯಾರಾದರೂ ಆಗಿರಲಿ.. ಆದರೆ.. ಆ ವಿಡಿಯೋಗಳು ಇದ್ದದ್ದು ಡ್ರೈವರ್ ಕಾರ್ತಿಕ್ ಅವರ ಬಳಿ. ಆತ ಪ್ರಜ್ವಲ್ ರೇವಣ್ಣ ಬಳಿ ಕಾರ್ ಡ್ರೈವರ್ ಆಗಿದ್ದವರು. ಹಲವು ವರ್ಷ 14 ವರ್ಷಕ್ಕೂ ಹೆಚ್ಚು ರೇವಣ್ಣ ಅವರ ಕುಟುಂಬ ಹಾಗೂ ಪ್ರಜ್ವಲ್ ಬಳಿ ಡ್ರೈವರ್ ಆಗಿದ್ದ ಕಾರ್ತಿಕ್ ವಿಶ್ವಾಸ ಗಳಿಸಿಕೊಂಡಿದ್ದರು. ಆ ಕಾರ್ತಿಕ್ ಒಮ್ಮೆ 13 ಎಕರೆ ಜಮೀನು ತಗೊಂಡ್ರು. ಆ ಜಮೀನನ್ನು ತಮ್ಮದು ಎಂದು ಕಬ್ಜ ಮಾಡಿಕೊಂಡರು ರೇವಣ್ಣ ಫ್ಯಾಮಿಲಿ.
13 ಎಕರೆ ಜಮೀನಿನಲ್ಲಿ ಪುಟ್ಟದೊಂದು ಫಾರ್ಮ್ ಹೌಸ್ ಮಾಡಿ, ಅದರ ಪೂಜೆಗೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಆಹ್ವಾನ ನೀಡಿದ್ದೇ ಆತ ಮಾಡಿದ್ದ ತಪ್ಪು. ಭೂಮಿ ಪೂಜೆಗೆ ಬಂದಿದ್ದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ನಮ್ಮ ಜೊತೆ ಇದ್ದು ಇಷ್ಟೊಂದು ಆಸ್ತಿ ಮಾಡಿದ್ದಾನೆಂದು ಕೆಂಗಣ್ಣು ಬೀರಿದ್ರಂತೆ. ತಮ್ಮ ಹೆಸರು ಬಳಸಿಕೊಂಡೇ ಇಷ್ಟೆಲ್ಲ ಆಸ್ತಿ ಮಾಡಿಕೊಂಡಿದ್ಧಾನೆ ಎಂದು ರೊಚ್ಚಿಗೆದ್ದರಂತೆ. ಚಾಲಕ ಕಾರ್ತಿಕ್ ಹಾಗೂ ಆತನ ಪತ್ನಿಯನ್ನ ಕಿಡ್ನಾಪ್ ಮಾಡಿ ಆಸ್ತಿ ಬರೆಸಿಕೊಂಡರಂತೆ.
ಆ ವೇಳೆ ಕಾರ್ತಿಕ್ ಅವರನ್ನು ಪ್ರಜ್ವಲ್ ಮನಸ್ಸಿಗೆ ಬಂದಂತೆ ಹೊಡೆದರೆ, ಭವಾನಿ ರೇವಣ್ಣ ಅವರು ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ಮಾಡಿದ್ರಂತೆ. ಆಗ ಕಾರ್ತಿಕ್ ಪತ್ನಿ ಗರ್ಭಿಣಿಯಾಗಿದ್ದರು. ಭವಾನಿ ಹೊಡೆದ ಹೊಡೆತದ ರಭಸಕ್ಕೆ ಕಾರ್ತಿಕ್ ಪತ್ನಿಗೆ ಅಬಾರ್ಷನ್ ಆಯ್ತು. ಅತ್ತ ಜಮೀನೂ ಹೋಯ್ತು. ಇತ್ತ ಕನಸು ಕಟ್ಟಿಕೊಂಡಿದ್ದ ಮಗುವೂ ಇಲ್ಲವಾಯ್ತು. ಕಾರ್ತಿಕ್ ಪತ್ನಿ ಮತ್ತೊಮ್ಮೆ ಗರ್ಭಿಣಿಯಾಗಲಿಲ್ಲ.
ಇಡೀ ಪ್ರಕರಣದಲ್ಲಿ ಕಾರ್ತಿಕ್ ಸಿಸಿಟಿವಿ ವಿಡಿಯೋಗಳನ್ನೂ ಕೊಟ್ಟರು. ಆ ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ. ಅದೇ ಕಾರ್ತಿಕ್ ಅವರಿಂದ ಲೀಕ್ ಆದ ವಿಡಿಯೋಗಳಿವು.
ಇಡೀ ಪ್ರಕರಣ ನೋಡಿದವರು ಹೇಳ್ತಿರೋದು ಅದೇ ಮಾತು. ಆವತ್ತು ಆ 13 ಎಕರೆ ಜಮೀನಿನ ಮೇಲೆ ಚಿಲ್ಲರೆ ಆಸೆಯನ್ನು ಬಿಟ್ಟಿದ್ದರೆ.. ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇವೇಗೌಡರ ಮಾನ ಮರ್ಯಾದೆ ಹರಾಜು ಹಾಕುವ ಪ್ರಸಂಗ ಬರುತ್ತಿರಲಿಲ್ಲ. ತಾವೇ ಕಟ್ಟಿಕೊಂಡಿದ್ದ ಕೋಟೆಯೊಳಗೆ ತಾವೇ ಬಂಧಿಯಾಗುವ, ಅರೆಸ್ಟ್ ಆಗುವ, ಹೆಸರು, ಹುದ್ದೆ ಇದ್ದೂ.. ಏನೂ ಇಲ್ಲದವರಂತೆ.. ಸಮಾಜದ ಎದುರು ಬೆತ್ತಲಾಗುವ ಪ್ರಸಂಗವೇ ಎದುರಾಗುತ್ತಿರಲಿಲ್ಲ.
ಈಗ ಅವರ ಬಳಿ ಎಲ್ಲವೂ ಇದೆ. ಆದರೆ.. 13 ಎಕರೆ ಜಮೀನಿನ ಮೇಲಿನ ಆಸೆ.. ಹೊಟ್ಟೆಕಿಚ್ಚು ಎಲ್ಲವನ್ನೂ ನುಂಗಿ ಹಾಕಿದೆ.



