ಜೆಡಿಎಸ್-ಬಿಜೆಪಿ (BJP JDS) ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯದಲ್ಲೇ ದೆಹಲಿಗೆ ಹೋಗಿ ಸಭೆಯಲ್ಲಿ ಭಾಗವಹಿಸುತ್ತೇವೆ. ಕಾಂಗ್ರೆಸ್ (Congress) ಪಕ್ಷವು ರಾಜ್ಯವನ್ನು ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಯಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದೊಳಗೆ 28ಕ್ಕೆ 28 ಸೀಟುಗಳನ್ನು ಮೈತ್ರಿ ಪಕ್ಷ ಗೆಲ್ಲಲಿದೆ. ಹೀಗಂತ ಹೇಳಿಕೆ ಕೊಟ್ಟಿರುವುದು (HD Kumaraswamy) ಮಾಜಿ ಸಿಎಂ ಕುಮಾರಸ್ವಾಮಿ.
ಖುದ್ದು ದೇವೇಗೌಡರೇ (HD Devegowda) ಬಹಿರಂಗವಾಗಿ ಬಿಜೆಪಿ ಜೊತೆ ಮೈತ್ರಿ ಕುರಿತಂತೆ ಹೇಳಿಕೆ ನೀಡಿರುವಾಗ ಇನ್ಯಾವ ಗೊಂದಲವೂ ಇಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದ್ದರೆ, ಅತ್ತ ಯಡಿಯೂರಪ್ಪ (BS Yeddyurappa) ಬೇರೆಯದೇ ಹೇಳಿಕೆ ಕೊಟ್ಟಿದ್ದಾರೆ.
ಸದ್ಯಕ್ಕೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಬೇರೆ ವಿಷಯದಲ್ಲಿ ಬ್ಯುಸಿಯಾಗಿದ್ದಾರೆ. ಬಹುಶಃ ನಾಳೆ ಅಥವಾ ನಾಡಿದ್ದು ನಂತರ ಮಾತುಕತೆ ಆಗಬಹುದು. ಇದುವರೆಗೆ ಯಾವುದೇ ಮಾತುಕತೆ ಆಗಿಲ್ಲ, ಕಾದು ನೋಡುತ್ತೇವೆ. ಈ ಹಿಂದೆ ನಾನು ಹೇಳುವಾಗಲೂ ಒಂದು ರೂಪಕ್ಕೆ ಬಂದಿರಲಿಲ್ಲ. ಈಗಲೂ ಅಷ್ಟೇ ಮೈತ್ರಿ ವಿಚಾರ ಯಾವುದೇ ರೂಪಕ್ಕೆ ಬಂದಿಲ್ಲ. ಎಲ್ಲವನ್ನೂ ಪ್ರಧಾನಿ ಮೋದಿ (Narendra Modi) , ಅಮಿತ್ ಶಾ (Amith Shaw) ತೀರ್ಮಾನ ಮಾಡುತ್ತಾರೆ. ಈಗಲೇ ಎಲ್ಲವನ್ನೂ ಅಧಿಕೃತ ಎಂದು ಹೇಳೋಕೆ ಸಾಧ್ಯ ಇಲ್ಲ ಎಂದಿದ್ದಾರೆ ಯಡಿಯೂರಪ್ಪ.
ಯಡಿಯೂರಪ್ಪನವರು ಹೇಳಿದ ಮೇಲೆ ಮುಗೀತು. ಅವರು ಹೇಳಿದ್ದಾರೆ ಅಂದ್ರೆ ನಾವೆಲ್ಲ ಶಿರಸಾವಹಿಸಿ ಒಪ್ಪಿಕೊಳ್ತೀವಿ ಎಂದಿದ್ದರು ಪ್ರತಾಪ್ ಸಿಂಹ (Prathap simha), ಸಿಟಿ ರವಿ (CT Ravi) , ಈಶ್ವರಪ್ಪ (KS EShwarappa) , ಮುನಿಸ್ವಾಮಿ, ಬೊಮ್ಮಾಯಿಯಂತಹ (Basaraja bommai) ನಾಯಕರು. ಆದರೆ ಇದೀಗ ಎಲ್ಲವೂ ಉಲ್ಟಾಪಲ್ಟಾ. ಜೆಡಿಎಸ್ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದ್ದು, ಮೈತ್ರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ರವಾನಿಸಿದ್ದು, ಜೆಡಿಎಸ್ ಜೊತೆಗಿನ ಮೈತ್ರಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಖುದ್ದು ಹೇಳಿಕೆ ಕೊಟ್ಟಿದ್ದ ಯಡಿಯೂರಪ್ಪ, ಇದ್ದಕ್ಕಿದ್ದಂತೆ ಯು ಟರ್ನ್ ಆಗಿದ್ದೇಕೆ ಅನ್ನೋದು ಒಂದು ನಿಗೂಢ ಕಥೆ.
ಇನ್ನು ದೇವೇಗೌಡರ ರಣಭೂಮಿ ಹಾಸನದಲ್ಲಿಯೇ ಮೈತ್ರಿಗೆ ವಿರೋಧ ವ್ಯಕ್ತವಾಗಿದೆ. ಹಾಸನದಲ್ಲಿ ಸೋತ ಪ್ರೀತಂ ಗೌಡ ಅವರಂತೂ ಇದನ್ನು ಹೇಗೆ ಒಪ್ಪೋದು. ಯಾರಿಗೋ ಕಷ್ಟ ಆಗ್ತಿದೆ, ಅದಕ್ಕೆ ಪರಿಹಾರ ಕೊಡೋಣ ಅಂತಾ ಮೈತ್ರಿ ಮಾಡಿಕೊಳ್ಳೋಕೆ ಆಗುತ್ತಾ ಅನ್ನೋದು ಪ್ರೀತಂ ಗೌಡ ಅವರ ಮಾತು.ಅಲ್ಲಿಗೆ ಮೈತ್ರಿಗೆ ರಾಜ್ಯ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ಹಲವರು ಹೊರಗೆ ಬಾಯಿಬಿಡುತ್ತಿಲ್ಲ. ಹೀಗಾಗಿಯೇ ಯಡಿಯೂರಪ್ಪ ಮೈತ್ರಿ ಕುರಿತು ಇನ್ನಷ್ಟು ಹೇಳಿಕೆ ನೀಡದೆ, ಹೈಕಮಾಂಡ್ ಮೂಲಕವೇ ಅಧಿಕೃತವಾಗಿ ಬರಲಿ ಎಂದು ವೇಯ್ಟಿಂಗ್ ವೇಯ್ಟಿಂಗ್ ಎನ್ನುತ್ತಿದ್ದಾರೆ. ಪರಿಸ್ಥಿತಿ ಅಷ್ಟು ಸುಲಭವಾಗಿಲ್ಲ.



