ನಯಾಗರ ಜಲಪಾತ. ಅಮೆರಿಕ, ಕೆನಡಾ ಗಡಿಯಲ್ಲಿ ಬರುವ ವಿಶೇಷ ಜಲಪಾತ. ಅಮೆರಿಕನ್, ಬ್ರೈಡಲ್ ಹಾಗೂ ಕೆನಡಿಯನ್ ಎಂಬ ಮೂರು ಜಲಪಾತ ಸೃಷ್ಟಿಸುವ ನಯಾಗರವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು.173 ಅಡಿಯಿಂದ ಧುಮ್ಮಿಕ್ಕುವ ಜಲಪಾತದ ಶಬ್ಧದಲ್ಲಿ ಅಕ್ಕಪಕ್ಕ ನಿಂತು ಮಾತನಾಡಿದರೂ ಕೇಳಿಸುವುದಿಲ್ಲ. ನೀರಿನ ಭೋರ್ಗರೆತದ ಸದ್ದೇ ಅಷ್ಟು ಜೋರಾಗಿರುತ್ತದೆ. ವಿಮಾನದ ಶಬ್ಧ ಕೂಡ ಕೇಳಿಸಲ್ಲ ಎನ್ನುವ ಕಥೆ ಜನಜನಿತವಾಗಿದೆ. ಇಂತಹ ಜಲಪಾತ ಈಗ ಇದ್ದಕ್ಕಿದ್ದಂತೆ ಮರಗಟ್ಟಿದೆ. ಹೆಪ್ಪುಗಟ್ಟಿದೆ. ಸುರಿಯತ್ತಿರುವ ನೀರು ಮಂಜುಗಡ್ಡೆಯಾಗಿ ಬೀಳುತ್ತಿರುವುದು ವಿಶೇಷ. ಹಾಗಂತ ಇದು ಮೊದಲೇನಲ್ಲ.

ಈ ರೀತಿ ಫ್ರೀಜ್ ಆಗಿರುವುದು ಇದೇ ಮೊದಲಲ್ಲ.
1848ರಲ್ಲಿ ಮೊದಲಿಗೆ ಫ್ರೀಜ್ ಆಯಿತೆಂದು ಇತಿಹಾಸ ಹೇಳುತ್ತದೆ. ತದನಂತರ 1902, 1906, 1911, 1932, 2014, 2017, 2018 ಈ ಇಸವಿಗಳಲ್ಲೂ ಫ್ರೀಜ್ ಆಗಿತ್ತು. ಉಷ್ಣಾಂಶ ಬಹಳ ಕಡಿಮೆ ಆದಾಗ ಈ ರೀತಿ ಫ್ರೀಜ್ ಆಗುತ್ತದೆ. ಈ ಬಾರಿ ಈ ರೀತಿ ಫ್ರೀಜ್ ಆಗುವುದಕ್ಕೆ ಕಾರಣ ಬಾಂಬ್ ಸೈಕ್ಲೋನ್.
ಅಮೆರಿಕಾ ಹಿಂದೆಂದೂ ಕಂಡು ಕೇಳರಿಯದ ಬಾಂಬ್ ಹಿಮಪಾತದಿಂದ ಈ ಬಾರಿ ನಲುಗಿದ್ದು, ಡಿಸೆಂಬರ್ 25 ರ ಕ್ರಿಸ್ಮಸ್ ದಿನದಂದು ದೇಶವನ್ನಪ್ಪಳಿಸಿದ ಹಿಮಪಾತಕ್ಕೆ ಸಿಲುಕಿ ಅಮೆರಿಕಾದಲ್ಲಿ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಮಪಾತದ ಕರಾಳತೆಗೆ ಸಿಲುಕಿ ವಿಶ್ವ ವಿಖ್ಯಾತ ನಯಾಗಾರ ಜಾಲಪಾತವೂ ನಲುಗಿದ್ದು, ಹಿಮಪಾತದಿಂದ ಹಿಮದಂತೆ ಗಟ್ಟಿಯಾದ ನಯಾಗಾರ ಪಾಲ್ಸ್ನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಮೆರಿಕಾದ ಭೌಗೋಳಿಕ ತಜ್ಞರು ಇದನ್ನು ಶತಮಾನದ ಅತ್ಯಂತ ದೊಡ್ಡ ಹಿಮಪಾತ ಎಂದು ಕರೆದಿದ್ದಾರೆ. 

ರುದ್ರ ರಮಣೀಯವಾಗಿ ಭೋರ್ಗರೆಯುತ್ತಿದ್ದ ನಯಾಗಾರ ಫಾಲ್ಸ್, ಹಿಮಪಾತ ಹಾಗೂ ಮೈನಸ್ ಡಿಗ್ರಿ ತಾಪಮಾನದಿಂದಾಗಿ ಮಂಜುಗಡ್ಡೆಯಾಗಿದೆ. ಅಪರೂಪದ ಈ ದೃಶ್ಯ ನೋಡುಗರ ಕಣ್ಣಿಗೆ ಚಳಿಗಾಲದ ಅದ್ಭುತಲೋಕವನ್ನೇ ಸೃಷ್ಟಿಸಿದೆ.
ಆದರೆ ಸಂಪೂರ್ಣ ನೀರು ಹೆಪ್ಪುಗಟ್ಟಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರವೂ ನೀರಿನ ಹರಿಯುವಿಕೆಯಲ್ಲೇ ಇದೆ. ಇಲ್ಲಿ ಪ್ರತಿ ಸೆಕೆಂಡಿಗೆ 3160 ಟನ್ ನೀರು ಹರಿಯುತ್ತದೆ. ಧುಮ್ಮಿಕ್ಕುತ್ತದೆ. ಆ ರಭಸಕ್ಕೆ ನೀರು ಸಂಪೂರ್ಣ ಹೆಪ್ಪುಗಟ್ಟುವುದಿಲ್ಲ. ಉಷ್ಣಾಂಶ ಮೈನಸ್ ಡಿಗ್ರಿಗೆ ಇಳಿದಾಗ ನೀರು ಮಂಜಾಗಲು ಶುರುವಾಗುತ್ತದೆ. ಅಲ್ಲಲ್ಲಿ ನೀರು ಹೆಪ್ಪುಗಟ್ಟಿದ್ದು ಒಳಭಾಗದಲ್ಲಿ ನೀರಿನ ಹರಿವಿದೆ. ನಿರ್ದಿಷ್ಟವಾಗಿ ತಂಪಾದ ತಾಪಮಾನದಲ್ಲಿ, ಮಂಜು ಮತ್ತು ಸ್ಪ್ರೇ ಧುಮ್ಮಿಕ್ಕುವ ನೀರಿನ ಮೇಲೆ ಮಂಜುಗಡ್ಡೆಯ ಹೊರಪದರವನ್ನು ರೂಪಿಸಲು ಪ್ರಾರಂಭಿಸುತ್ತದೆ. 




