ಬೆಂಗಳೂರಿನಲ್ಲಿ ಇಂಚಿಂಚು ಭೂಮಿಗೂ ಬಂಗಾರದ ಬೆಲೆ. ಅದರಲ್ಲೂ ಯಲಹಂಕ ನ್ಯೂ ಟೌನ್ʻನಲ್ಲಿ ಅಡಿಗಡಿಗೂ ಲಕ್ಷ ಲಕ್ಷ ಬೆಲೆ ಇದೆ. ಅಂತಹ ಪ್ರದೇಶದಲ್ಲಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿರೋದು ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧ. ದೂರು ನೀಡಿರುವುದು ಬಾಲಿವುಡ್ ನ ಖ್ಯಾತ ಗಾಯಕ, ನಟ ಲಕ್ಕಿ ಅಲಿ. ಅವರೀಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ರೋಹಿಣಿ ಸಿಂಧೂರಿ ಅವರು ಬೆಂಗಳೂರಿನ ನ್ಯೂ ಯಲಹಂಕ ಟೌನ್ ಬಳಿ ಇರುವ ಟ್ರಸ್ಟ್ ಒಂದಕ್ಕೆ ಸೇರಿರುವ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ 2022ರಲ್ಲಿಯೂ ಲಕ್ಕಿ ಅಲಿ ದೂರು ಸಲ್ಲಿಸಿದ್ದರು.
ರೋಹಿಣಿ ಸಿಂಧೂರಿ ಅವರ ಕುಟುಂಬ ಯಲಹಂಕ ಬಳಿಯ ಕೆಂಚೇನಹಳ್ಳಿ ಬಳಿ ಇರುವ ತನ್ನ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದೆ. ಎಸಿಪಿಯವರಿಗೆ ದೂರು ನೀಡಿದ್ರೂ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಸ್ಥಳೀಯ ಪೊಲೀಸರಿಂದ ನನಗೆ ಯಾವುದೇ ಸಹಾಯ ಸಿಗುತ್ತಿಲ್ಲ. ರೋಹಿಣಿ ಸಿಂಧೂರಿ ಕುಟುಂಬದ ಕಡೆಯೇ ನಿಂತಿದ್ದಾರೆ. ನಾವು ಕಳೆದ 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದೇವೆ ಮತ್ತು ಆ ಜಾಗದ ಮೇಲೆ ಹಕ್ಕು ಹೊಂದಿದ್ದೇವೆ ಎನ್ನುವುದು ಲಕ್ಕಿ ಅಲಿ ವಾದ.
ನ್ಯೂ ಯಲಹಂಕ ಟೌನ್ ಬಳಿಯಿರುವ ತಮ್ಮ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಗೆ ರೋಹಿಣಿ ಸಿಂಧೂರಿಯವರು ಸಹಕಾರ ಕೊಟ್ಟಿದ್ದು ಆ ಮೂಲಕ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದ್ದ ಲಕ್ಕಿ ಅಲಿ ಈಗ ಮತ್ತೆ ತಮ್ಮ ಟ್ರಸ್ಟ್ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಹಗರಣದಲ್ಲಿ ಯಲಹಂಕ ಎಸಿಪಿ ಮಂಜುನಾಥ್, ಸರ್ವೇಯರ್ ಮನೋಹನ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ 2022ರಲ್ಲಿಯೂ ಲಕ್ಕಿ ಅಲಿ ದೂರು ಸಲ್ಲಿಸಿದ್ದರು.
ಲಕ್ಕಿ ಅಲಿ ಅವರು ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಹಿಂದಿ ಸಿನಿಮಾ ಹಾಗೂ ತಮಿಳು ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ಸಿನಿಮಾಕ್ಕಿಂತ ಹೆಚ್ಚಾಗಿ ಅವರು ತಮ್ಮದೇ ಸಂಗೀತ ಸಂಯೋಜನೆಯ ಪ್ರೈವೇಟ್ ಆಲ್ಬಂಗಳಿಂದ ಹೆಚ್ಚು ಜನಪ್ರಿಯರಾದವರು. 1996ರಲ್ಲಿ ಅವರು ಬಿಡುಗಡೆ ಮಾಡಿದ್ದ ಸುನೋ ಎಂಬ ಆಲ್ಬಂನಲ್ಲಿದ್ದ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಬಹುಕಾಲದಿಂದ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.
ಇನ್ನು ರೋಹಿಣಿ ಸಿಂಧೂರಿ ಅವರಿಗೆ ಒಂದರ ಹಿಂದೊಂದು ಸಂಕಷ್ಟಗಳು ಎದುರಾಗುತ್ತಿವೆ.
೧. ಐಎಎಸ್ ಅಧಿಕಾರಿ ದಿವಂಗತ ಡಿಕೆ ರವಿ ಪ್ರಕರಣದಲ್ಲಿ ರೋಹಿಣಿ ಸಿಂಧೂರಯವರ ಹೆಸರು ಮೊದಲ ಬಾರಿಗೆ ಕೇಳಿಬಂದಿತ್ತು.
೨. ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರ ವಿರುದ್ಧ ರೋಹಿಣಿ ಸಿಂಧೂರಿ ಅವರು ಪ್ರತ್ಯೇಕವಾಗಿ ಕಾನೂನು ಹೋರಾಟ ನಡೆಸಿದ್ದರು. ತಮ್ಮ ಖಾಸಗಿ ಚಿತ್ರಗಳನ್ನು ಮೌದ್ಗಿಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಸಿಂಧೂರಿ ಆರೋಪಿಸಿದರು. ಈ ವೈಷಮ್ಯದಿಂದಾಗಿ ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳನ್ನು ಅವರು ಸೇವೆ ಸಲ್ಲಿಸುತ್ತಿದ್ದ ಸ್ಥಳದಿಂದ ಬೇರೆ ಕಡೆಗೆ ವರ್ಗಾವಣೆ ಮಾಡಿತ್ತು. ಈ ಪ್ರಕರಣ ಇನ್ನೂ ಸುಪ್ರೀಂಕೋರ್ಟಿನಲ್ಲಿದೆ.
೩. ಇತ್ತೀಚಿನ ವರ್ಷಗಳಲ್ಲಿ ಮೈಸೂರಿನಲ್ಲಿ ಡಿಸಿ ಆಗಿದ್ದಾಗ ಆಗ ಮೈಸೂರು ಸಾ.ರಾ.ಮಹೇಶ್ ಅವರೊಂದಿಗೆ ಅವರು ವಿರಸ ಬೆಳೆಸಿಕೊಂಡಿದ್ದರು. ಅವರ ವಿರುದ್ಧ ಸಾರಾ ಮಹೇಶ್ ಹಲವಾರು ಆರೋಪಗಳನ್ನು ಮಾಡಿದ್ದರು.
೪, ಈ ಹಿಂದಿನ ಮೈಸೂರು ಸಂಸದ ಪ್ರತಾಪ್ ಸಿಂಹ ಅವರೂ ಸಹ ಡಿಸಿ ಕಚೇರಿಯ ಟೆರೆಸ್ ಮೇಲೆ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಂಡಿದ್ದಾರೆಂದು ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ದರು.



