ರಾಜ್ಯ ಕಾಂಗ್ರೆಸ್ಸಿನಲ್ಲಿ ಪದೇ ಪದೇ ಭಿನ್ನಧ್ವನಿ ಮೊಳಗುತ್ತಿದೆ. ಜಾತಿಗೊಂದು ಡಿಸಿಎಂ ಬೇಕು ಎಂಬ ವಾದ ಒಂದು ಕಡೆಯಾದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಎನ್ನುವ ವಾದ ಇನ್ನೊಂದು ಕಡೆ ಇದೆ. ಈ ಎರಡೂ ವಾದ ಮುಂದಿಟ್ಟಿರುವವರು ಸಿಎಂ ಸಿದ್ದರಾಮಯ್ಯ ಬಣದ ಆಪ್ತ ಶಾಸಕರು ಅನ್ನೋದರಲ್ಲಿ ಅನುಮಾನವೇನೂ ಇಲ್ಲ. ಕೆ.ಎನ್.ರಾಜಣ್ಣ, ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ.. ಮೊದಲಾದವರೆಲ್ಲ ಬೆನ್ನ ಬೆನ್ನಿಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆಯೇ ಇಂತಹವರಿಗೆಲ್ಲ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನನ್ನ ಜಾಗ ಖಾಲಿ ಮಾಡಿಸಲು ಕೆಲವರು ಪ್ರಯತ್ನ ಮಾಡಿದ್ದಾರೆ. ಆದರೆ, ಅದು ಯಶಸ್ವಿಯಾಗುವುದಿಲ್ಲ. ಪಕ್ಷಕ್ಕಾಗಿ ದುಡಿದ ನನ್ನನ್ನು ಖಾಲಿ ಮಾಡಿಸಲು ಆಗುವುದಿಲ್ಲ. ನಾನೇ ಅವರನ್ನು ಖಾಲಿ ಮಾಡಿಸುತ್ತೇನೆ… ನಾನು ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ನೋಡಬೇಕು. ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಹೊಣೆ ನನ್ನ ಮೇಲಿದೆ. ನನ್ನನ್ನು ಯಾರಾದರೂ ಬಗ್ಗಿಸಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವ ಈ ಮಾತು ಎಲ್ಲರಿಗೂ ಒಂದು ಎಚ್ಚರಿಕೆಯಂತೆಯೇ ಇದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆ ಹಾಗೂ ಸರ್ಕಾರದ ನಿರ್ಧಾರಗಳ ವಿರುದ್ಧ ಮಾತನಾಡುವ ಸಚಿವರು ಹಾಗೂ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದಿರುವ ಡಿಕೆಶಿ ಕೆಲವರಿಗೆ ಮಾಧ್ಯಮಗಳನ್ನು ನೋಡಿದರೆ ಮಾತನಾಡುವ ಚಟ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಅನಗತ್ಯ ಹೇಳಿಕೆ ನೀಡುವವರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ಇನ್ನು ಯಾರೇ ಮಾತನಾಡಿದರೂ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ಸಚಿವರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಗೌರವ ನೀಡುತ್ತಿಲ್ಲ ಎಂಬ ವಿಚಾರ ಸಭೆಯಲ್ಲಿ ಮತ್ತೆ ಚರ್ಚೆಗೆ ಬಂದಿದೆ.. ಸಭೆಯಲ್ಲಿ ಮಾತನಾಡಿದ ಕೆಲ ಕಾರ್ಯಕರ್ತರು ಸಚಿವರು ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುವ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ದೂರಿದ್ದಾರೆ. ಶಾಸಕ ಹಾಗೂ ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್ ಕುಲಕರ್ಣಿ, ಸಚಿವರು ಕಾರ್ಯಕರ್ತರು, ನಾಯಕರು ಮಾತ್ರವಲ್ಲ, ಶಾಸಕರಿಗೂ ಗೌರವ ಕೊಡುವುದಿಲ್ಲ. ಹೀಗಾದರೆ ಪಕ್ಷ ಸಂಘಟನೆ ಹೇಗೆ ಆಗುತ್ತದೆ. ಮೊದಲು ಇದು ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ.ಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವೆಲ್ಲರೂ ಸೇರಿದರೆ ಅವರು ಸಚಿವರು, ಅವರೇನು ಮೇಲಿಂದ ಬಂದಿಲ್ಲ. ನಾನು ಭಯಪಡುವುದಿಲ್ಲ. ಪ್ರಸಂಗ ಬಂದರೆ ಎಲ್ಲಾ ದಾಖಲೆ ಕೊಡುತ್ತೇನೆ. ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು?’ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.



