ಶಿವಣ್ಣ (Shiva rajkumar) ಎಲ್ಲೇ ಹೋದ್ರೂ ಫ್ಯಾನ್ಸ್ ಮುತ್ತಿಕೊಳ್ತಾರೆ. ಸಾಮಾನ್ಯವಾಗಿ (Shivanna fans) ಅಭಿಮಾನಿಗಳ ಜೊತೆ ಶಿವಣ್ಣ ಪ್ರೀತಿಯಿಂದನೇ ನಡೆದುಕೊಳ್ತಾರೆ. ಕೆಲವು ಬಾರಿ ಅರ್ಜೆಂಟ್ ಕೆಲಸ ಇದ್ದಾಗ, ಹಸಿವು ಹೆಚ್ಚಾಗಿದ್ದಾಗ, ಅಭಿಮಾನಿಗಳ ಹೆಸರಲ್ಲಿ ಕೆಲವರು ಅತಿರೇಕವಾಗಿ ವರ್ತಿಸಿದಾಗ ಶಿವಣ್ಣ ಕೆರಳುವುದೂ ಉಂಟು. ಅಂತಹ ಶಿವಣ್ಣ ಕೂಡಾ ಯಾರೋ ಒಬ್ಬರ ಅಭಿಮಾನಿ ತಾನೇ. ಹಾಗೆ ಶಿವಣ್ಣ ಕೂಡಾ ಅಭಿಮಾನಿಯಾಗಿರೋದು ಕಮಲ್ ಹಾಸನ್ ಅವರಿಗೆ. ಅಂತಹ ಕಮಲ್ ಹಾಸನ್ (kamal Hassan) ಅವರನ್ನ ಅನಿರೀಕ್ಷಿತವಾಗಿ ಭೇಟಿ ಮಾಡಿದ ಕಥೆ ಇದು.
ಘೋಸ್ಟ್ (ghost) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರೋ ಶಿವಣ್ಣ ಎಲ್ಲ ಕಡೆಯಲ್ಲೂ ಉತ್ಸಾಹದಿಂದ ಓಡಾಡುತ್ತಿದ್ಧಾರೆ. ಘೋಸ್ಟ್ ಹಿಂದಿಯಲ್ಲೂ ಬಿಡುಗಡೆಯಾಗಲಿದ್ದು, ನಟ ಶಿವಣ್ಣ ಮತ್ತು ನಿರ್ದೇಶಕ ಶ್ರೀನಿವಾಸ್ ಮುಂಬೈನಲ್ಲಿ , ಚೆನ್ನೈನಲ್ಲಿ ಎಲ್ಲೆಲ್ಲೂ ಅವರೇ ಕಾಣಿಸ್ತಿದ್ದಾರೆ. ಘೋಸ್ಟ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಶಿವಣ್ಣ ತಾವು ಸಲ್ಮಾನ್ ಖಾನ್ (salman khan) ಮತ್ತು ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದನ್ನು ಹೇಳಿಕೊಂಡಿದ್ದಾರೆ.
ಕಮಲ್ ಹಾಸನ್ ಅವರನ್ನು ಭೇಟಿ ಮಾಡುವುದಕ್ಕೆ ಪ್ಲಾನ್ ಏನೂ ಮಾಡಿಕೊಂಡಿರಲಿಲ್ಲ. ನಾವು ಇದ್ದ ಹೋಟೆಲ್ಲಿನಲ್ಲಿಯೇ ಕಮಲ್ ಹಾಸನ್ ಇದ್ದರು. ಆಗ ಅವರಿದ್ದ ವಿಷಯ ತಿಳ್ಕೊಂಡು ನಾನು ನಿಮ್ಮನ್ನು ಮೀಟ್ ಮಾಡಲೇ ಎಂದೆ. ನೀವೇನು ಹಾಗೆ ಕೇಳ್ತಿರಿ ಮೀಟ್ ಮಾಡಿ ಅಂದರು ಅಷ್ಟೇ. ಹೇಗೆ ನನ್ನನ್ನು ಫ್ಯಾನ್ಸ್ ಮೀಟ್ ಮಾಡೋಕೆ ಬರ್ತಾರೋ.. ನಾನೂ ಹಾಗೆ ಅವರನ್ನು ಭೇಟಿ ಮಾಡಿದೆ ಅಷ್ಟೇ ಎಂದಿದ್ದಾರೆ.
ಅಂದಹಾಗೆ ಶಿವಣ್ಣ ಮತ್ತು ಕಮಲ್ ಹಾಸನ್ ಅವರ ಕುಟುಂಬ ದಶಕಗಳಿಂದಲೂ ಆತ್ಮೀಯರೇ. ಅವರ ಮನೆಗೆ ಇವರು, ಇವರ ಮನೆಗೆ ಅವರು ಬರೋದು ಹೋಗೋದು ಕಾಮನ್. ಕಮಲ್ ಹಾಸನ್ ಡಾ.ರಾಜ್ ಅವರ ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು. ಹೀಗಿದ್ದರೂ.. ಅವರನ್ನು ಮೀಟ್ ಮಾಡೋಕೆ ಆಗುತ್ತಾ ಎಂದು ಕೇಳಿದ್ದಾದರೂ ಏಕೆ, ಕಮಲ್ ಹಾಸನ್ ಗೊತ್ತಿಲ್ಲವಾ ಎಂದಿದ್ದಕ್ಕೂ ಉತ್ತರ ಕೊಟ್ಟಿದ್ಧಾರೆ. ಅವರ ಜೊತೆ ಮಾತನಾಡಬೇಕಿತ್ತು ಅಷ್ಟೇ. ಅವರ ಪರಿಸ್ಥಿತಿ ಹೇಗಿರುತ್ತದೋ. ಏನೋ.. ಗೊತ್ತು ಅಂದ ಮಾತ್ರಕ್ಕೆ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅವರಿಗೆ ಸಮಯವಾದಾಗ ಸಿನಿಮಾ ನೋಡುತ್ತಾರೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಾವಳಿ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಶಿವರಾಜ್ ಕುಮಾರ್ ಭೇಟಿಯಾಗಿದ್ದರು. ಜೊತೆಗೆ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ಟೈಗರ್ ಭಾಗ ಮೂರಕ್ಕೆ ಶುಭಾಶಯ ಹೇಳಿದ್ದರು. ಇದು ಕೂಡ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿತ್ತು. ಶಿವರಾಜ್ಕುಮಾರ್ ಅಭಿನಯದ ಘೋಸ್ಟ್ ಅಕ್ಟೋಬರ್ 19 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ಮತ್ತು ನಿರ್ದೇಶಕ ಶ್ರೀನಿವಾಸ್ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಅನುಪಮ್ ಕೇರ್, ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.



