ಇಡೀ ಪ್ರಕರಣದ ದಿಕ್ಕು ಬದಲಾಗಿದೆ. ಬದಲಾಗುತ್ತಿದೆ. ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದಲ್ಲಿ, ಪ್ರಜ್ವಲ್ ಅವರನ್ನು ಹುಡುಕುತ್ತಿರುವ ಪೊಲೀಸರು.. ಇವಿಷ್ಟೂ ವಿಡಿಯೋಗಳನ್ನು ರಾಜ್ಯಕ್ಕೆ ಬಹಿರಂಗಪಡಿಸಿದ್ದು ಯಾರು ಅನ್ನೋದನ್ನು ಹುಡುಕಬೇಕು. ಆದರೆ.. ಆ ನಿಟ್ಟಿನಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಆದಂತೆ ಕಾಣುತ್ತಿಲ್ಲ.
ವಿಡಿಯೋಗಳು ಡ್ರೈವರ್ ಕಾರ್ತಿಕ್ ಬಳಿ ಇದ್ದವು. ಆತ ಅವನ್ನು ದೇವರಾಜೇಗೌಡರಿಗೆ ಕೊಟ್ಟಿದ್ದ. ಅಲ್ಲಿಂದ ವಿಡಿಯೋ ಲೀಕ್ ಅದವು ಎನ್ನುತ್ತಿವೆ ಒಂದು ಕಥೆ. ಆದರೆ.. ಅದೇ ದೇವರಾಜೇ ಗೌಡ ಕಳೆದ ಬಾರಿ ಬಿಜೆಪಿಯಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆಗಲೂ.. ವಿಷಯ ಗೊತ್ತಿತ್ತು. ಇದೇ ವಿಡಿಯೋಗಳು ಇದ್ದವು. ಆಗ ಮಾಡದ ಕೆಲಸವನ್ನು ಈಗೇಕೇ ಮಾಡಲಿ ಎನ್ನುತ್ತಾರೆ ದೇವರಾಜೇ ಗೌಡ. ಅವರು ವಿಡಿಯೋ ಲೀಕ್ʻನ ಸಂಪೂರ್ಣ ಜವಾಬ್ದಾರಿಯನ್ನು, ಹೊಣೆಗಾರಿಕೆಯನ್ನ, ಎಲ್ಲ ತಪ್ಪುಗಳನ್ನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೇ ವಹಿಸಿದ್ಧಾರೆ.
ದೇವರಾಜೇ ಗೌಡರ ಪ್ರಕಾರ..
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಎಡಿಟ್ ಮಾಡಿ ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಲಾಗಿದೆ. ಆದರೆ, ಈ ಕೇಸಿನಲ್ಲಿ ಸರ್ಕಾರದ ಪರವಾಗಿ ಕೈ ಜೋಡಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಮಿಷವೊಡ್ಡಿದ್ದರು. ಎಸ್‌ಐಟಿ ತನಿಖಾ ಅಧಿಕಾರಿ ಸುಮನ್ ಡಿ. ಪೆನ್ನೇಕರ್ಡಿಸಿಎಂ ಡಿ.ಕೆ. ಶಿವಕುಮಾರ್ ಆಮಿಷವೊಡ್ಡಿದ ಆಡಿಯೋ ಡಿಲೀಟ್ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರನ್ನು ಸಂಧಾನಕ್ಕೆ ಹೋಗಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ ಬರೋಬ್ಬರಿ 2 ಗಂಟೆಗಳ ಕಾಲ ಮಾತನಾಡಿ ಕ್ಯಾಬಿನೆಟ್ ದರ್ಜೆ ಹುದ್ದೆಯ ಆಫರ್ ಕೊಟ್ಟಿದ್ದರು. ಎಸ್‌ಐಟಿ ತನಿಖಾ ತಂಡದ ಮುಂದೆ ಹೇಳಿದ್ದು, ಆನಂತರ ಎಸ್ʻಐಟಿಯವರೇ ಬೆದರಿಕೆ ಹಾಕಿದ್ದರು. ಡಿಕೆ ಶಿವಕುಮಾರ್ ಆಡಿಯೋ ಡಿಲೀಟ್ ಮಾಡದಿದ್ದರೆ.. ದೇವರಾಜೇಗೌಡರನ್ನೇ ಆರೋಪಿ ನಂ.೧ ಮಾಡುವ ಬೆದರಿಕೆ ಹಾಕಿದ್ದಾರೆ.
ಹೀಗೆ ಹೇಳುವ ದೇವರಾಜೇ ಗೌಡ ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಮಿಕ್ಸಿಂಗ್ ಆಗಿದೆ. ಈ ವಿಡಿಯೋ ಅದಕ್ಕೆ ನಾನು ಬಿಡುಗಡೆ ಮಾಡಿಲ್ಲ. ಅದಕ್ಕೆ ನಾನು ಸಿಬಿಐಗೆ ಕೊಡುತ್ತಿದ್ದೇನೆ. ಇನ್ನು ಡಿ.ಕೆ. ಶಿವಕುಮಾರ್ 2 ಗಂಟೆ 31 ನಿಮಿಷ ನನ್ನಜೊತೆ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ. ಇದನ್ನ ಈಗಲೇ ಬಿಡುಗಡೆ ಮಾಡಿದ್ರೆ ಆಡಿಯೋ ಎಲ್ಲವೂ ತಿರುಚುತ್ತಾರೆ. ಹೀಗಾಗಿ ನಾನು ಬಿಡುಗಡೆ ಮಾಡಲ್ಲ. ಸಿಬಿಐ ತನಿಖೆಗೆ ನಾವು ಎಲ್ಲ ದಾಖಲೆ ಕೊಡ್ತೀವಿ ಎಂದಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಹಾಸನ ಲೋಕಸಭೆ ಸ್ಪರ್ಧಿ ಶ್ರೇಯಸ್ ಪಟೇಲ್ ಅವರೇ ದುಡ್ಡು ಕೊಟ್ಟು ಕರೆತರುತ್ತಿದ್ಧಾರೆ ಎನ್ನುವುದು ಅವರ ಆರೋಪ.
ಸಿದ್ದರಾಮಯ್ಯ ಅವರೇ ಐಪಿಎಸ್ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿ, ಪ್ರಕರಣದಲ್ಲಿ ಯಾರು ಯಾರನ್ನು ಅಪರಾಧಿಗಳನ್ನಾಗಿ ಮಾಡಬೇಕು. ಯಾವ್ಯಾವ ರೀತಿ ಸಿಕ್ಕಿಸಬೇಕು ಎಂಬುದರ ಬಗ್ಗೆ ಸೂಚನೆ ಕೊಟ್ಟಿದ್ದಾರೆ ಎಂದೂ ಆರೋಪಿಸಿದ್ಧಾರೆ. ಆದರೆ.. ಇದಕ್ಕೆಲ್ಲ ಡಿಸಿಎಂ ಡಿಕೆ ಶಿವಕುಮಾರ್ ಹೇಳುವುದೇ ಬೇರೆ.
ಡಿಸಿಎಂ ಡಿಕೆ ಶಿವಕುಮಾರ್ ಪ್ರಕಾರ..
ಅವರಿಗೂ ಬಿಜೆಪಿ ಮುಖಂಡ ದೇವರಾಜೇಗೌಡನಿಗೂ ಯಾವುದೇ ಸಂಬಂಧ ಇಲ್ಲ. ಆತ ಮಾತನಾಡಿರೋದು ಸತ್ಯಕ್ಕೆ ದೂರ. ಅವನು ಮಾಡಲಿ ಅವನಿಗೆ ಹೇಳಿ ಕಳಿಸುತ್ತಿದ್ದವನೂ ಮಾಡಲಿ. ಅವನು ಹೇಳಿದ ಕೂಡಲೇ ಟಿವಿ ಚಾನಲ್ ಅವರಿಗೆ ಯಾರು ಕಾಲ್ ಮಾಡಿ ಮಾತನಾಡಿದ್ದಾರೆ ಅನ್ನೋದು ಎಲ್ಲವೂ ನನಗೆ ಗೊತ್ತಿದೆ. ಈ ಬ್ಲಾಕ್ ಮೇಲ್‌ಗೆಲ್ಲ ನಾವು ತಲೆಕೆಡಿಸಿಕೊಳ್ಳಲ್ಲ. ಅಮಿತ್ ಷಾ, ಕುಮಾರಸ್ವಾಮಿಕ ಒಪ್ಪಿಕೊಂಡ ಮೇಲೆ ಯಾಕೆ ಹರ್ಕೋತಾರೆ ಇವರೆಲ್ಲ? ಎಂದಿದ್ದಾರೆ. ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಹಿನ್ನಲೆ ಗಾಯಕರು ಯಾರಿದ್ದಾರೆ ಮ್ಯೂಜಿಕ್ ಯಾರು ಮಾಡ್ತಾರೆ ಅನ್ನೋದು ಗೊತ್ತಿದೆ. ಕುಮಾರಸ್ವಾಮಿ ಹೇಳಿದ್ರು ನಮಗೂ ಅವರಿಗೂ ಸಂಬಂಧ ಇಲ್ಲ ಅಂತಾ, ಮತ್ಯಾಕೆ ಇದೆಲ್ಲ? ಯಾರು ಮಾಡಿಸುತ್ತಿದ್ದಾರೋ ಅವರು ದೈರ್ಯ ಇದ್ದರೆ ಹೊರಗಡೆ ಬಂದು ಹೇಳಲಿ. ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡೋದು ಹಾಗಾಗಿ ಅವರು ನಮ್ಮ ಹೆಸರು ಹೇಳ್ತಾರೆ ಹೇಳಲಿಬಿಡಿ. ಸತ್ಯ ಏನೆಂಬುದು ತನಿಖೆ ಬಳಿಕ ಹೊರಗೆ ಬರುತ್ತೆ ಎಂದಿದ್ದಾರೆ.
ಇನ್ನು ಶಿವರಾಮೇ ಗೌಡರ ಪ್ರಕಾರ.. ಅವರು ದೇವರಾಜೇ ಗೌಡರಿಗೆ ಫೋನ್ ಮಾಡಿದ್ದೂ ನಿಜ. ಡಿಕೆ ಶಿವಕುಮಾರ್ ಜೊತೆ ಮಾತನಾಡಿಸಿದ್ದೂ ಸತ್ಯ. ಆದರೆ.. ಅವರು ಹೇಳ್ತಿರೋ ಮಿಕ್ಕೆಲ್ಲ ಆರೋಪಗಳೂ ಸುಳ್ಳು.
ಇನ್ನು ಶ್ರೇಯಸ್ ಪಟೇಲ್ ಪ್ರಕಾರ.. ದೇವರಾಜೇಗೌಡರು ಹೇಳಿದ್ದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತಗೊಳ್ತಾರೆ. ಮಿಕ್ಕಿದ್ದು.. ಜನರಿಗೆ ಬಿಟ್ಟಿದ್ದು.



