ಪೊಗರು ಚಿತ್ರದಲ್ಲಿ ನಟೋರಿಯಸ್ ರೌಡಿಯ ಪಾತ್ರಕ್ಕಾಗಿ ಧ್ರುವ ಸರ್ಜಾ 30 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದು. ಅದ್ಧೂರಿ, ಭರ್ಜರಿ, ಬಹದ್ದೂರ್‍ಗಳಲ್ಲಿ ಕಟ್ಟುಮಸ್ತಾಗಿದ್ದ ಧ್ರುವ ಸರ್ಜಾ, ಪೊಗರುನಲ್ಲಿ ಬೇರೆಯದೇ ಲುಕ್‍ನಲ್ಲಿದ್ದರು. ಬೈಸಪ್ಸ್ ಫಿಟ್ ಆಗಿದ್ದರೂ, ಪೊಗರುನಲ್ಲಿ
ಬೈಸಪ್ಸ್ ಎಗರೆಗರಿ ಬೀಳುವಂತೆ ಕಟ್ಟುಮಸ್ತಾಗಿಸಿದ್ದರು. 



ಏನೇ ಫಿಟ್‍ನೆಸ್ ಇದ್ದರೂ, ಪ್ರತಿದಿನ ಕಸರತ್ತು ಮಾಡಿದರೂ ದೇಹ ಎಲ್ಲವನ್ನೂ ತಡೆದುಕೊಳ್ಳಲ್ಲ. ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡೆ ಎಂದು ಎಂದು ಪೋಸ್ಟ್ ಹಾಕಿದ್ದೇ ತಡ, ಅಭಿಮಾನಿಗಳು ಮೆಚ್ಚುಗೆಯ ಜೊತೆ ಜೊತೆಗೆ ಎಚ್ಚರಿಕೆ ಮಾತನ್ನೂ ಹೇಳಿದ್ದಾರೆ. ಪ್ರೀತಿ ಜೊತೆ ಕಾಳಜಿ ತೋರಿಸಿದ್ದಾರೆ. ಅಭಿಮಾನಿಗಳ ಆತಂಕ ಏಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಪುನೀತ್ ರಾಜಕುಮಾರ್ ಹಾಗೂ ಚಿರಂಜೀವಿ ಸರ್ಜಾ ಅವರ ಆಘಾತಕಾರಿ ಮರಣ ಅಭಿಮಾನಿಗಳನ್ನು ಇಂದಿಗೂ ಕಾಡುತ್ತಿದೆ. ಅಂತಹುದರಲ್ಲಿ ಧ್ರುವ ಅವರ ಈ ಕಸರತ್ತು ಅಭಿಮಾನಿಗಳಿಗೆ ಸಂಭ್ರಮಕ್ಕಿಂತ ಆತಂಕವನ್ನೇ ತಂದೊಡ್ಡಿದೆ ಎನ್ನುವುದು ಸುಳ್ಳಲ್ಲ.

ಚಿತ್ರ ಹಾಗೂ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳೋದು ಮತ್ತು ಇಳಿಸಿಕೊಳ್ಳೋ ಸಂಪ್ರದಾಯ ಶುರುವಾಗಿದ್ದು ನಟ ಕಮಲ್ ಹಾಸನ್ ಅವರಿಂದ. ಅದಾದ ಮೇಲೆ ಘಜನಿ, ದಂಗಲ್ ಚಿತ್ರಗಳಿಗಾಗಿ ಅಮೀರ್ ಖಾನ್, ಐ ಚಿತ್ರಕ್ಕಾಗಿ ವಿಕ್ರಂ, ಬಾಹುಬಲಿಗಾಗಿ ಪ್ರಭಾಸ್, ರಾಣಾ ದಗ್ಗುಬಾಟಿ, ನಟಿಯರಲ್ಲಿ ಝೀರೋ ಸೈಝ್ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ, ಡರ್ಟಿ ಪಿಕ್ಚರ್ ಚಿತ್ರಕ್ಕಾಗಿ ವಿದ್ಯಾ ಬಾಲನ್.. ಹೀಗೆ ಹಲವರು ತೂಕ ಹೆಚ್ಚಿಸಿಕೊಂಡು ನಟಿಸಿದ್ದಾರೆ. ಇದೇ ಅಮೀರ್ ಖಾನ್ ಪಿಕೆ, ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕಾಗಿ, ಸುದೀಪ್ ಮುಸ್ಸಂಜೆ ಮಾತು ಚಿತ್ರಕ್ಕಾಗಿ ತೆಳ್ಳಗೂ ಆಗಿದ್ದಾರೆ. ಲಿಸ್ಟು ಹುಡುಕುತ್ತಾ ದೊಡ್ಡದೇ ಇದೆ.

ಧ್ರುವ ಸರ್ಜಾ ಈ ರೀತಿ ತೂಕ ಇಳಿಸಿಕೊಂಡಿರೋದು ಕೆಡಿ ಚಿತ್ರಕ್ಕಾಗಿ. ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರೋ ಚಿತ್ರವಿದು.



