ಆತ ಕೂಡಾ ದರ್ಶನ್ ಅಭಿಮಾನಿ. ಆತ ತನ್ನಂತೆಯೇ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನ ಮಾತು ನಂಬಿದ್ದ. ಹೋದ. ಕೊಲೆಯಲ್ಲೂ.. ಅದನ್ನು ಮುಚ್ಚಿ ಹಾಕುವಲ್ಲಿ ಸಹಕಾರ ಕೊಟ್ಟ. ಈಗ ಅರೆಸ್ಟ್ ಆಗಿದ್ದಾನೆ. ದರ್ಶನ್ ಬಚಾವ್ ಆಗುವುದು ಕಷ್ಟ. ತಾಯಿ ತಂದೆಯನ್ನು ನೋಡಿಕೊಳ್ಳಬೇಕಿದ್ದ, ಸಾಕಬೇಕಿದ್ದ ಜವಾಬ್ದಾರಿ ಹೊತ್ತಿದ್ದವನು ಜೈಲಲ್ಲಿ ಕೂತಿದ್ದಾನೆ. ಅತ್ತ ತಂದೆ ಉಸಿರು ಬಿಟ್ಟಿದ್ದಾರೆ. ಮಗನಿದ್ದಾನೆ ಎಂದು ಧೈರ್ಯವಾಗಿದ್ದ ಆ ತಾಯಿಗೆ, ಹೆತ್ತ ಮಗನೇ ತಾಳಿ ಕಿತ್ತುಕೊಂಡಿದ್ದಾನೆ. ತಾಯಿ ಅನಾಥೆಯಾಗಿದ್ಧಾರೆ.
ಮಕ್ಕಳಿಗೆ ಏನಾದರೂ ಆಗಬಾರದ್ದು ಆದರೆ.. ಹೆತ್ತವರು ತಲ್ಲಣಗೊಳ್ತಾರೆ. ದರ್ಶನ್ ಗ್ಯಾಂಗಿನಲ್ಲಿದ್ದ ಆರೋಪಿ ಅನು ಅವರ ತಂದೆಯ ಪರಿಸ್ಥಿತಿಯೂ ಇದೇ ಆಗಿದೆ. ಅನು, ರೇಣುಕಾಸ್ವಾಮಿ ಕಿಡ್ನಾಪ್ & ಮರ್ಡರ್ ಕೇಸಿನಲ್ಲಿ 8ನೇ ಆರೋಪಿ. ಮಗ ಅರೆಸ್ಟ್ ಆದ ಸುದ್ದಿ ತಿಳಿದ ಕೆಲವೇ ಗಂಟೆಗಳಲ್ಲಿ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಆರೋಪಿ ಅನು ತಂದೆ ಚಂದ್ರಣ್ಣ.
ಚಿತ್ರದುರ್ಗದ ಸಿಹಿನೀರು ಹೊಂಡ ಬಳಿಯಿರುವ ನಿವಾಸದಲ್ಲಿ ಚಂದ್ರಣ್ಣ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಹೀನಾಯ ಕೃತ್ಯದಲ್ಲಿ ಮಗ ಭಾಗಿ ಆಗಿದ್ದಾನೆ ಎಂಬ ಆರೋಪ ಎದುರಾಗಿದ್ದರಿಂದ ಚಂದ್ರಣ್ಣ ಮಾನಸಿಕವಾಗಿ ನೊಂದಿದ್ದರು. ಮಗ ಇಂಥ ಕೆಲಸ ಮಾಡಿದ್ದಾನೆ ಅಂತಾ ಹೇಳ್ಕೊಂಡ್ರೆ ನೆರೆಹೊರೆಯವರ ಹತ್ತಿರ ಮರ್ಯಾದೆ ಇರುತ್ತಾ.. ತಲೆ ಎತ್ಕೊಂಡು ಓಡಾಡೋಕ್ ಆಗುತ್ತಾ.. ಎಂದು ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದರು. ತಾಯಿಯೂ ಅಷ್ಟೆ, ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದರು. ಆಗಿನ್ನೂ ಅನು ಅರೆಸ್ಟ್ ಆಗಿರಲಿಲ್ಲ.
ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಾಗ ಕೇವಲ 13 ಜನರನ್ನು ಮಾತ್ರ ಅರೆಸ್ಟ್ ಮಾಡಲಾಗಿತ್ತು. ದರ್ಶನ್, ಪವಿತ್ರಾ ಗೌಡ, ಪವನ್, ವಿನಯ್, ದೀಪಕ್ ಕುಮಾರ್ ಮುಂತಾದವರು ಬಂಧನ ಆಗಿತ್ತು. ನಂತರದಲ್ಲಿ ಇನ್ನೂ ನಾಲ್ಕು ಮಂದಿಯ ಹೆಸರು ಹೊರಬಿತ್ತು. ಆಗ ಅನು ಅಲಿಯಾಸ್ ಅನುಕುಮಾರ್ ಕೂಡ ಈ ಕೃತ್ಯದಲ್ಲಿ ಭಾಗಿ ಆಗಿರುವುದು ಬೆಳಕಿಗೆ ಬಂದಿತ್ತು.
ಅರೆಸ್ಟ್ ಆಗಿರುವುದು ಖಚಿತವಾಗುವ ಮುನ್ನ ಮಾತನಾಡಿದ್ದ ಚಂದ್ರಣ್ಣ ದಂಪತಿ ‘ನನ್ನ ಮಗ ಅಂಥವನಲ್ಲ. ನಾನು ತಿಳಿದಿದ್ದನ್ನು ಹೇಳುತ್ತಿದ್ದೇನೆ. ಈ ಹಟ್ಟಿಯಲ್ಲಿ ಬೆಳೆದವನು ಅವನು. ಯಾರನ್ನು ಬೇಕಿದ್ದರೂ ಕೇಳಿ. ಏನಾದರೂ ತಪ್ಪಿದ್ದರೆ ನೀವೇ ಹೇಳಿ. ಅವನ ಈಗ ಎಲ್ಲಿ ಇದ್ದಾನೆ ಅಂತಲೂ ಗೊತ್ತಿಲ್ಲ. ಅವನು ನನಗೆ ಸಿಕ್ಕರೆ ನಾನೇ ಕರೆದುಕೊಂಡು ಪೊಲೀಸರಿಗೆ ಒಪ್ಪಿಸುತ್ತೇನೆ. ಆದರೆ, ಅವನು ತಪ್ಪು ಮಾಡಿಲ್ಲʼ ಎಂದಿದ್ದರು. ಅದಾದ ಸ್ವಲ್ಪ ಹೊತ್ತಿಗೇ ಮಗ ಅರೆಸ್ಟ್ ಆದ ಸುದ್ದಿ ಬಂದು, ಆಘಾತದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.



