ಸವಿ ಸವಿ ನೆನಪು ಸಾವಿರ ನೆನಪು..
ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಮೆಚ್ಚದ ಹೃದಯಗಳಿಲ್ಲ. ಹಾಡು ಕೇಳುತ್ತಲೇ ನೆನಪಿಗೆ ಜಾರಿ ಹೋಗುವ ಸಾವಿರಾರು ಜನ, ಈಗಲೂ ಇದ್ದಾರೆ. ಅಂತಹ ಹಾಡನ್ನು ಕನ್ನಡಿಗರಿಗೆ ಕೊಟ್ಟ ಸುದೀಪ್ ಪಾಲಿಗೆ ಮರೆಯಲಾಗದ ದಿನ ಯಾವುದು..? ಪ್ರತಿಯೊಬ್ಬರ ಬದುಕಿನಲ್ಲೂ ಕೆಲವು ದಿನಗಳು ಸ್ಪೆಷಲ್ ಆಗಿರುತ್ತವೆ. ಸುದೀಪ್ (Kichcha Sudeep) ಪಾಲಿಗೆ ಜುಲೈ 6 ಹಾಗೆ.
ಸುದೀಪ್ (Kichcha Sudeep)ಸಿನಿಮಾ ರಂಗಕ್ಕೆ ಬಂದು 26 ವರ್ಷಗಳಾಗಿವೆ. ಈ 26 ವರ್ಷಗಳಲ್ಲಿ ಜುಲೈ 6ಗೆ ಸರಿಸಾಟಿಯಾಗುವ ದಿನ ಇನ್ನೊಂದಿಲ್ಲ ಎನ್ನುವುದೇ ವಿಶೇಷ. ಸುದೀಪ್ ಅವರನ್ನು ಕಿಚ್ಚ ಸುದೀಪ್ ಆಗಿಸಿದ ಸಿನಿಮಾ ಹುಚ್ಚ.
2001ರಲ್ಲಿ ಹುಚ್ಚ (Huchcha) ರಿಲೀಸ್ ಆಗಿದ್ದು ಜುಲೈ 6ಕ್ಕೆ. ರೆಹಮಾನ್ ನಿರ್ಮಾಪಕರಾಗಿದ್ದ, ಓಂ ಪ್ರಕಾಶ್ ರಾವ್ (Om Prakash Rao) ನಿರ್ದೇಶನದ ಹುಚ್ಚ ಚಿತ್ರ ಸುದೀಪ್ ಅವರನ್ನು ಸ್ಟಾರ್ ಮಾಡಿದ ಸಿನಿಮಾ. ರೇಖಾ ನಾಯಕಿಯಾಗಿದ್ದರು. ಅಂದಹಾಗೆ ಸ್ಪರ್ಶ ಚಿತ್ರಕ್ಕೂ ರೇಖಾ ಅವರೇ ಹೀರೋಯಿನ್. ಹುಚ್ಚ ಚಿತ್ರಕ್ಕೂ ರೇಖಾ ಅವರೇ ಹೀರೋಯಿನ್. ಆದರೆ ಇಬ್ಬರೂ ಬೇರೆ ಬೇರೆ ರೇಖಾ. ಸ್ಪರ್ಶದ ನಾಯಕಿ ಸ್ಪರ್ಶ ರೇಖಾ (Sparsha Rekha) ಎಂದೇ ಖ್ಯಾತರಾದರೆ, ಹುಚ್ಚ ಚಿತ್ರದಲ್ಲಿ ನಟಿಸಿದ್ದ ರೇಖಾ, ಅದಕ್ಕೂ ಮೊದಲು ನಟಿಸಿದ್ದ ಚಿತ್ರ ಚಿತ್ರದ ಮೂಲಕ ಚಿತ್ರ ಖ್ಯಾತಿಯ ರೇಖಾ (Chithra Rekha) ಆಗಿದ್ದರು. ಉಸಿರೇ ಉಸಿರೇ ಹಾಡು ಇವತ್ತಿಗೂ ಅಭಿಮಾನಿಗಳ ಹೃದಯದಲ್ಲಿದೆ. ರಾಜೇಶ್ ರಾಮನಾಥನ್ ಮ್ಯೂಸಿಕ್ ಡೈರೆಕ್ಟರ್.
ಮತ್ತೊಮ್ಮೆ ಜುಲೈ 6ನ್ನು ಸ್ಪೆಷಲ್ ಮಾಡಿದ ಸಿನಿಮಾ ಈಗ (Eega). ಭಾರತದ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ (Rajamouli), ಈಗ ಅನ್ನೋ ಕಾನ್ಸೆಪ್ಟ್ ಮಾಡಿಕೊಂಡಾಗ ಅವರ ಕಣ್ಣೆದುರು ಬಂದ ಏಕೈಕ ನಟ ಕಿಚ್ಚ ಸುದೀಪ್. ಸಮಂತಾ (Samantha), ನಾನಿ (nani) ನಟನೆಯ ಆ ಚಿತ್ರ ಭಾರತ ಚಿತ್ರ ಜಗತ್ತಿನ ಮೈಲಿಗಲ್ಲುಗಳಲ್ಲೊಂದು. ಸುದೀಪ್ ಆ ಚಿತ್ರದ ನಂತರ ನ್ಯಾಷನಲ್ ಲೆವೆಲ್ಲಿನ ಸ್ಟಾರ್ ನಟರಾದರು. ಆ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರೂ ಕೂಡಾ ಸುದೀಪ್. ಕಣ್ಣಿಗೆ ಕಾಣದ ನೊಣವನ್ನು, ಇದ್ದಂತೆ ಕಲ್ಪಿಸಿಕೊಂಡು ನಟಿಸಿದ್ದ ಆ ನಟನೆಯಿತ್ತಲ್ಲ.. ಅಲ್ಟಿಮೇಟ್ ಅದು. ಮತ್ತೊಮ್ಮೆ ಆ ಲೆವೆಲ್ಲಿನ ಆಕ್ಟಿಂಗ್ ಸ್ವತಃ ಸುದೀಪ್ ಅವರಿಂದಲೂ ಬಂದಿಲ್ಲ. ತಮ್ಮದೇ ಲ್ಯಾಂಡ್`ಮಾರ್ಕ್ ದಾಟುವುದಕ್ಕೆ ಸುದೀಪ್ ಅವರಿಗೆ ಸಾಧ್ಯವಾಗಿಲ್ಲ.
ಕಿಚ್ಚ ಸುದೀಪ್ ಈಗ 46ನೇ ಚಿತ್ರದ ಸಂಭ್ರಮದಲ್ಲಿದ್ದಾರೆ. ಆದರೆ ಜುಲೈ 6ರ ನೆನಪು ಸದಾ ಹಸಿರಾಗಿದೆ.



