ಸಿದ್ಧರಾಮಯ್ಯ ಮತ್ತು ಈಶ್ವರಪ್ಪ ನಡುವಿನ ಸ್ನೇಹ ಸಂಬಂಧ ನೋಡಿದವರು, ರಾಜಕೀಯದಲ್ಲಿ ಹೀಗೂ ಇರ್ತಾರಾ ಎಂಬ ಅಚ್ಚರಿಗೊಳಗಾಗುತ್ತಾರೆ. ಸಿದ್ಧರಾಮಯ್ಯ, ಈಶ್ವರಪ್ಪ ಅವರನ್ನು ಬಹಿರಂಗವಾಗಿಯೇ ಯಾವ್ಯಾವ ರೀತಿಯಲ್ಲಿ ಬಯ್ಯುತ್ತಾರೆ, ಲೇವಡಿ ಮಾಡುತ್ತಾರೆ ಎನ್ನುವುದನ್ನು ರಾಜ್ಯದ ಜನತೆ ನೋಡಿದೆ. ಅದೇ ಈಶ್ವರಪ್ಪ, ಸಿದ್ಧರಾಮಯ್ಯ ವಿರುದ್ಧ ಮಾತನಾಡುವುದಕ್ಕೆ ನಿಂತರೆ, ಏಕವಚನಕ್ಕೂ ಇಳಿಯುತ್ತಾರೆ. ಮುಲಾಜಿಲ್ಲದೆ ಜಾಡಿಸುತ್ತಾರೆ. ಇಂತಹ ಈಶ್ವರಪ್ಪ ಸಿದ್ಧರಾಮಯ್ಯ ಅವರ ಬಗ್ಗೆ ಇದ್ದಕ್ಕಿದ್ದಂತೆ ಮೃದು ಧೋರಣೆ ತಳೆದಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಯಾವುದೇ ತೊಂದರೆ ಆಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವೆ ಎಂದು ಹೇಳಿದ್ದಾರೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮನವು, ಯಾವುದೇ ತಂಟೆ-ತಕರಾರುಗಳಿಗೆ ಹೋಗದವರು. ದೇವರು-ದಿಂಡರು ಎಂದು ಮನೆಯಲ್ಲಿರುವವರು. ಆ ತಾಯಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಪ್ಪ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಈಶ್ವರಪ್ಪ.
ಈಶ್ವರಪ್ಪನವರ ಪ್ರಕಾರ ಸಿದ್ದರಾಮಯ್ಯ ಅವರು ಹೇಳಿದ ಕಡೆ ಪತ್ನಿ ಸಹಿ ಮಾಡಿರುತ್ತಾರೆ. ಎಲ್ಲರ ಮನೆಯಲ್ಲೂ ಗಂಡಸರು ಹೇಳಿದಲ್ಲಿ ಹೆಣ್ಣು ಮಕ್ಕಳು ಸಹಿ ಮಾಡುತ್ತಾರೆ. ಅದೇ ರೀತಿ ಸಿಎಂ ಪತ್ನಿಯೂ ಗೊತ್ತಿಲ್ಲದೆ ಸಹಿ ಮಾಡಿರುತ್ತಾರೆ. ಹಾಗಾಗಿ ಮುಡಾ ಪ್ರಕರಣದಲ್ಲಿ ಆ ತಾಯಿಗೆ ಯಾವುದೇ ಅನ್ಯಾಯ ಆಗಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ ಸಿದ್ಧರಾಮಯ್ಯ ಅವರನ್ನು ಟೀಕಿಸುವ, ಲೇವಡಿ ಮಾಡುವ, ವ್ಯಂಗ್ಯ ಮಾಡುವ ಅವಕಾಶವನ್ನೂ ಈಶ್ವರಪ್ಪ ಬಿಟ್ಟಿಲ್ಲ. ಹಿಂದೆ ಸಿದ್ದರಾಮಯ್ಯನವರು ಅನೇಕ ದೇವಸ್ಥಾನಕ್ಕೆ ಹೋಗುತ್ತಿರಲಿಲ್ಲ, ಈಗ ಸತತವಾಗಿ ದೇವಾಲಯಕ್ಕೆ ಹೋಗುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕಂತೂ ಮತ್ತೆಮತ್ತೆ ಹೋಗುತ್ತಿದ್ದಾರೆ. ನಾನು ಅದನ್ನು ಸ್ವಾಗತ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಹಿಂದೂ ಸಂಸ್ಕೃತಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಗೌರವ ಬಂದಿರುವುದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಅವರ ಕಾಲಾವಧಿಯಲ್ಲಿ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಆಘಾತವನ್ನು ನೋಡಲು ನನ್ನಿಂದ ಆಗುತ್ತಿಲ್ಲ ಎಂದಿರುವ ಈಶ್ವರಪ್ಪ ಮುಖ್ಯಮಂತ್ರಿಗಳ ಪ್ರಾಸಿಕ್ಯೂಷನ್ ವಿಚಾರದಲ್ಲಿ ಪ್ರಲ್ಹಾದ ಜೋಶಿಯವರು ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ, ಹಾಗಾಗಿ, ಈ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಸಿದ್ಧರಾಮಯ್ಯ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಈಶ್ವರಪ್ಪ, ಈ ಹಿಂದೆಯೂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಮ್ಮನವರ ಬಗ್ಗೆ ಮಾತನಾಡಿದ್ದರು. ಸಿಎಂ ಸಿದ್ದರಾಮಯ್ಯನ ಹೆಂಡತಿ ಗೌರಮ್ಮನಂತೆ. ಪಾಪ ಅವರ ಮೇಲೂ ಮುಡ ಕೇಸ್ ಎಳೀತಾರೇನೋ. ಸಿದ್ದರಾಮಯ್ಯ ಅವರು ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್ ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಶ್ರೀಮತಿಯವರನ್ನು ಎಲ್ಲಿ ಸೇರಿಸಿಬಿಡುತ್ತಾರೋ ಎಂಬ ಅನುಮಾನವಿದೆ. ಪಾಪ ಅವರು ಗೌರಮ್ಮರ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬಾರದೇ ಇರಲಿ ಎಂದು ಹೇಳಿದ್ದರು.
ಸಿದ್ಧರಾಮಯ್ಯನವರ ಪತ್ನಿ ಪಾರ್ವತಿಯವರ ಹೆಸರು ಬಹುತೇಕ ಜನರಿಗೆ ಗೊತ್ತಾಗಿದ್ದೇ ಮುಡಾ ಹಗರಣದಲ್ಲಿ. ಸಿದ್ಧರಾಮಯ್ಯ ಈ ಹಿಂದೆ ಡಿಸಿಎಂ ಆಗಿದ್ದಾಗ, ಎರಡು ಬಾರಿ ಸಿಎಂ ಆದಾಗ ಕೂಡಾ ಪಾರ್ವತಿ ಮನೆಯಲ್ಲೇ ಉಳಿದಿದ್ದವರು. ಪ್ರಮಾಣ ವಚನ ಸಮಾರಂಭಕ್ಕೂ ಬಂದವರಲ್ಲ. ಎಲ್ಲ ರಾಜಕಾರಣಿಗಳ ಪತ್ನಿಯರು, ತಮ್ಮ ತಮ್ಮ ಪತಿ, ಸಂಬಂಧಿಗಳ ಪ್ರಚಾರ ಮಾಡಿದರೆ, ಪಾರ್ವತಿಯವರು ಮಾತ್ರ ತಮ್ಮ ಪತಿ ಸಿದ್ಧರಾಮಯ್ಯನವರ ಪರ ಆಗಲೀ, ಮಗ ಯತೀಂದ್ರನ ಪರವಾಗಲೀ ಪ್ರಚಾರಕ್ಕೂ ಬಂದವರಲ್ಲ. ಅವರು ಸುದ್ದಿಯಾಗುತ್ತಿದ್ದದ್ದು ಪತಿಯ ಹುಟ್ಟುಹಬ್ಬದ ದಿನ, ಅವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋದಾಗ ಮಾತ್ರ. ತಾನು ದೇವರನ್ನು ನಂಬುವವನಲ್ಲ. ಆದರೆ, ಹೆಂಡತಿ ನಂಬುತ್ತಾಳೆ. ಅವಳಿಗಾಗಿ ಹೋಗುತ್ತೇನೆ ಎನ್ನುತ್ತಿದ್ದರು ಸಿದ್ಧರಾಮಯ್ಯ. ಸಿಎಂ ಪತ್ನಿಯಾಗಿದ್ದಾಗ ಚಾಮುಂಡೇಶ್ವರಿ ದರ್ಶನ ಪಡೆದರೂ, ವಿಐಪಿ ದರ್ಶನ ಪಡೆಯದೆ ಸಾದಾಸೀದಾ ಸಾಮಾನ್ಯರಂತೆ ಹೋಗಿ ಬರುವ ಪಾರ್ವತಿ, ಪತಿಯ ಅಧಿಕಾರ ವ್ಯಾಪ್ತಿಯಿಂದ ದೂರವೇ ಇದ್ದವರು. ಇದೇ ಮೊದಲ ಬಾರಿಗೆ ಪಾರ್ವತಿಯವರು ಹಗರಣದಲ್ಲಿ ಸಿಲುಕಿಕೊಂಡು ಗಂಭೀರ ಆರೋಪ ಎದುರಿಸುತ್ತಿದ್ದಾರೆ.



