ಹೃದಯ ಸಮುದ್ರಾ ಕಲಕಿ.. ಹುಟ್ಟಿದೆ ರೋಷದ ಬೆಂಕಿ.. ರೋಷಾಗ್ನಿ ಜ್ವಾಲೆ ಉರಿದುರಿದೂ..
ಈ ಹಾಡು ಅಮರವಾಗಿದ್ದು ಡಾ.ರಾಜ್ ಧ್ವನಿಯಿಂದ. ಡಾ.ರಾಜ್ ಮೊದಲ ಬಾರಿಗೆ ಬೇರೊಬ್ಬ ನಟರ ಸಿನಿಮಾಗೆ ಹಾಡು ಹಾಡಿದ್ದರು. ಹಾಡಿಸಿದ್ದವರು ಅಶ್ವಮೇಧ ಚಿತ್ರದ ನಿರ್ದೇಶಕ ಸಿಆರ್ ಸಿಂಹ. ಜೊತೆಗೆ ಚಿತ್ರದ ನಾಯಕ ಕುಮಾರ್ ಬಂಗಾರಪ್ಪ, ತಮ್ಮ ಸೊಸೆ ಗೀತಾ ಶಿವರಾಜ್ ಕುಮಾರ್ ಅವರ ಅಣ್ಣ ಎನ್ನುವುದೂ ಕಾರಣವಾಗಿತ್ತು. ಹಾಡಿದ್ದರು. ಹಾಡು ಇತಿಹಾಸ ಸೃಷ್ಟಿಸಿತ್ತು. ಅಂತಹ ಐತಿಹಾಸಿಕ ಹಾಡಿನ ಬ್ರಹ್ಮ ಎಸ್ ಪಿ ವೆಂಕಟೇಶ್. ವಿಧಿವಶರಾಗಿದ್ದಾರೆ. ಅಷ್ಟೇ ಅಲ್ಲ, ಎಸ್ ಪಿ ವೆಂಕಟೇಶ್ ಅವರ ಅದ್ಭುತ ಹಾಡುಗಳು ಇವಿಷ್ಟೇ ಅಲ್ಲ.. ಕುಮಾರ್ ಬಂಗಾರಪ್ಪ ಎಂಬ ನಟ ಇವತ್ತಿಗೂ ನೆನಪಿರುವುದು ಎರಡು ಹಾಡುಗಳಿಂದ. ಅದರಲ್ಲಿ ಒಂದು ಅಶ್ವಮೇಧದ ಹಾಡು.. ಮತ್ತೊಂದು ʻಕನ್ನಡ ನಾಡಿನ ರನ್ನದ ರತುನ..ʼ ಹಾಡು.
ಪಂಚಮವೇದ, ಅಶ್ವಮೇಧ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವವರು ಎಸ್‌ಪಿ ವೆಂಕಟೇಶ್. ಎಸ್ ಪಿ ವೆಂಕಟೇಶ್. ಮೂಲತಃ ತಮಿಳಿನವರಾದರೂ ಚಿತ್ರಜೀವನ ಶುರುವಾಗಿದ್ದು ಕನ್ನಡ ಚಿತ್ರರಂಗದಿಂದಲೇ. ಸಂಗೀತ ನಿರ್ದೇಶಕರಾಗಿ ತಮಿಳು, ಮಲಯಾಳಂನಲ್ಲಿ ಹೊಸ ರೀತಿಯ ಸಂಗೀತ ಸೃಷ್ಟಿಸಿದ್ದ ವೆಂಕಟೇಶ್, ಚೆನ್ನೈನ ಮನೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ವೆಂಕಟೇಶ್ ಅವರ ಸಿನಿ ಜರ್ನಿ ಶುರುವಾಗಿದ್ದು ಕನ್ನಡದ ʻಪ್ರೇಮ ಯುದ್ಧʼ ಚಿತ್ರದಿಂದ.
ಎಸ್ ಪಿ ವೆಂಕಟೇಶ್ ಅವರ ಕ್ಲಾಸಿಕ್ ಎಂದರೆ.. ʻಹೃದಯ ಸಮುದ್ರ ಕಲಕಿ..ʼ ಹಾಡು. ಅದೊಂದು ಹಾಡನ್ನು ಕನ್ನಡಿಗರು ಮರೆಯುವುದೇ ಇಲ್ಲ. ಡಾ.ರಾಜ್ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಇತಿಹಾಸ ಬರೆದಿತ್ತು. ಪಂಚಮವೇದ, ಮಾಧುರಿ, ಪೋಲಿ ಕಿಟ್ಟಿ, ಶರವೇಗದ ಸರದಾರ, ಏಕಲವ್ಯ, ಸುಂದರಕಾಂಡ, ಕೆರಳಿದ ಕೇಸರಿ, ಹೊಸ ರಾಗ, ಮೇಘ ಮಂದಾರ, ಅರಗಿಣಿ, ನಿಲುಕದ ನಕ್ಷತ್ರ, ಮುದ್ದಿನ ಕಣ್ಮಣಿ, Z.. ಮೊದಲಾದ ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದ್ದವರು ಎಸ್ ಪಿ ವೆಂಕಟೇಶ್.
ಅಶ್ವಮೇಧ ಚಿತ್ರದಲ್ಲಿ ಹೃದಯ ಸಮುದ್ರಾ ಕಲಕಿ ಹಾಡಿನ ಜೊತೆಗೆ..
ಯಾಕೋ ಏನೋ ನನ್ನದೆ..
ಈ ಜಯ ನಿಮ್ಮದೇ..
ರಮೇಶ್, ಸುಧಾರಾಣಿ ಅಭಿನಯದ ಪಂಚಮವೇದ ಚಿತ್ರದಲ್ಲಿ
ಆಸೆ.. ಹೊಳೆಯೇ.. ಉಕ್ಕೀ ಹರಿದೈತೆ..
ನೀ ತಂದ ಪ್ರೀತಿ..
ಶಂಕರ್ ನಾಗ್ ಅವರ ಸುಂದರಕಾಂಡ.. ಚಿತ್ರದಲ್ಲಿ ಹೊಳೆವ ಮೇಘಘಳೇ..
ಅಂಬರೀಷ್ ಅಭಿನಯದ ಮೇಘ ಮಂದಾರ ಚಿತ್ರದ ಟೈಟಲ್ ಟ್ರ್ಯಾಕ್
ಅರಗಿಣಿ ಚಿತ್ರದ
ಅಂದು ನೀನು ಯಾರೊ..
ಕಣ್ಣಾಮುಚ್ಚೆ ಕಾಡೆಗೂಡೆ..
ಶರವೇಗದ ಸರದಾರ ಚಿತ್ರದ ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ.. ಹೀಗೆ ಹತ್ತು ಹಲವು ಹಾಡುಗಳನ್ನು ಸೃಷ್ಟಿಸಿದ್ದವರು ಎಸ್ ಪಿ ವೆಂಕಟೇಶ್. ಇವತ್ತಿಗೂ ಕೂಡಾ ಹೊಯ್ಸಳರ ಕುರಿತಂತೆ ಇರುವ ಏಕೈಕ ಚೆಂದದ ಗೀತೆ ಈ ಹಾಡು ಮಾತ್ರ.
ಕನ್ನಡ ಅಷ್ಟೇ ಅಲ್ಲದೆ ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳಿಗೂ ಸಹ ಸಂಗೀತ ನೀಡಿದ್ದಾರೆ. ಅದರಲ್ಲೂ ಮಲಯಾಳಂ ಮತ್ತು ತಮಿಳಿನ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಶ್ರೇಯ ಎಸ್‌ಪಿ ವೆಂಕಟೇಶ್ ಅವರದ್ದು.
ಹಿಂದಿಯಲ್ಲಿ ಸಲ್ಮಾನ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕ್ಯೂಂಕಿ’ಗೆ ಸಂಗೀತ ನೀಡಿರುವುದು ವೆಂಕಟೇಶ್. ಮಾತ್ರವಲ್ಲದೆ, ಅನಿಲ್ ಕಪೂರ್-ಟಬು ನಟನೆಯ ‘ಥೇವರ್ ಮಗನ್’ ಸಿನಿಮಾ ರೀಮೇಕ್ ‘ವಿರಾಸತ್’ಗೂ ವೆಂಕಟೇಶ್ ಅವರದ್ದೇ ಸಂಗೀತ. ಹಿಂದಿಯ ಕಲ್ಟ್ ಕಾಮಿಡಿ ಸಿನಿಮಾ ಆಗಿರುವ ‘ಹಂಗಾಮ’ಗೂ ವೆಂಕಟೇಶ್ ಅವರದ್ದೇ ಸಂಗೀತ. ಮೋಹನ್ ಲಾಲ್ ಅಭಿನಯದ ರಾಜವಿಂತೆ ಮಕನ್ ಚಿತ್ರಕ್ಕೂ ಇವರದ್ದೇ ಸಂಗೀತ. ಈ ಸಿನಿಮಾ ಮೂಲಕವೇ ಮೋಹನ್ ಲಾಲ್ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದು.



