ಇನ್ನು ಮೂರು ತಿಂಗಳು ಕಳೆದರೆ ಸಾಕು, ಎಲೆಕ್ಷನ್ ಜಾತ್ರೆ. ಮೇ ತಿಂಗಳು ಮುಗಿಯುವ ಹೊತ್ತಿಗೆ ಹೊಸ ಸರ್ಕಾರ ರೆಡಿಯಾಗಿರಬೇಕು. ಎಲ್ಲ ಪಕ್ಷಗಳಲ್ಲೂ ಎಲೆಕ್ಷನ್ ಭರಾಟೆ ಜೋರಾಗಿದೆ. ಆಗಲೇ ಟಿಕೆಟ್ ಪಕ್ಕಾ ಆಗಿರುವ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸುತ್ತಿದ್ದಾರೆ. 



ಕಾಂಗ್ರೆಸ್ ಆಂತರಿಕ ಸಮೀಕ್ಷೆ : ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಹಿರಂಗವಾಗಿ ಏನೇ ಹೇಳಿಕೊಂಡರೂ, ಆಂತರಿಕ ಸಮೀಕ್ಷೆಯಲ್ಲಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂಬಲ್ಲಿಗೆ ಸಮೀಕ್ಷೆ ನಿಲ್ಲುತ್ತಿದೆ ಎಂಬ ಮಾಹಿತಿ ಇದೆ. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಾಡುತ್ತಿರುವುದು 40% ಕಮಿಷನ್ ಆರೋಪ ಹಾಗೂ ಹಿಡಿತವಿಲ್ಲದ ಕಳಪೆ ಆಡಳಿತ. ಅದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಜನರಿಗೆ ಮುಟ್ಟಿಸಿದರೆ ಗೆಲ್ಲುತ್ತೇವೆ ಎಂಬ ಭರವಸೆ ಕಾಂಗ್ರೆಸ್ ನಾಯಕರಲ್ಲಿದೆ. ಅಲ್ಲದೆ, ನಿಜವಾದ ಆಟ ಆರಂಭವಾಗುವುದು ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದ ನಂತರ ಎನ್ನುವುದು ಕೂಡಾ ಅಷ್ಟೇ ಸತ್ಯ. ಯಡಿಯೂರಪ್ಪ ಅವರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿ, ಲಿಂಗಾಯತರಲ್ಲಿ ಹೆಚ್ಚುತ್ತಿರುವ ಆಕ್ರೋಶ ಎಲ್ಲವೂ ಕಾಂಗ್ರೆಸ್ ಪರ ವಾಲಿದರೆ, ಅಧಿಕಾರವನ್ನೂ ಹಿಡಿಯಬಹುದು ಎಂಬ ಆಸೆ ಕಾಂಗ್ರೆಸ್ಸಿನಲ್ಲಿದೆ. ವ್ಯತ್ಯಾಸ ಇರುವುದು ಶೇ.2ರಷ್ಟು ಮತಗಳದ್ದು.

ಬಿಜೆಪಿ ಆಂತರಿಕ ಸಮೀಕ್ಷೆ : ಬಿಜೆಪಿಯಲ್ಲಿ ಬರುತ್ತಿರುವ ಆಂತರಿಕ ಸಮೀಕ್ಷೆ ವಿಭಿನ್ನವಾಗಿದೆ. ಅವರ ಪ್ರಕಾರ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಬರುವ ಸಾಧ್ಯತೆ ಕಡಿಮೆ. ಸರಳ ಬಹುಮತವಂತೂ ದೂರ ಉಳೀತು.ಯಡಿಯೂರಪ್ಪ ಫುಲ್ ಆಕ್ಟಿವ್ ಇದ್ದಾಗಲೇ ಆಗಿಲ್ಲ, ಇನ್ನು ಈ ಸಲ ಗೆಲ್ಲೋಕಾಗುತ್ತಾ ಎಂದು ಆಗಲೇ ಕೆಲವರು ಸೋಲೊಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಬಿಜೆಪಿಗೆ ಬೂಸ್ಟ್ ಕೊಟ್ಟಿರುವುದು ಸ್ವಲ್ಪ ಪ್ರಯತ್ನ ಪಟ್ಟರೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂಬ ಸುಳಿವು. ಮೀಸಲಾತಿ ಗಲಾಟೆ ಗೊಂದಲ, 40% ಕಮಿಷನ್ ಆರೋಪ ತಂದಿಟ್ಟ ಕೆಟ್ಟ ಹೆಸರುಗಳ ಮಧ್ಯೆಯೂ ಅದು ನೆಚ್ಚಿಕೊಂಡಿರುವುದು ಮೋದಿ ಮತ್ತು ಹಿಂದುತ್ವವನ್ನು. ಅಲ್ಲದೆ 2004ರ ನಂತರ ಬಿಜೆಪಿಯ ಕಟ್ಟರ್ ವೋಟುಗಳು ಬದಲಾಗಿಲ್ಲ. ಯಡಿಯೂರಪ್ಪ ಬಂಡೆದ್ದು ಪಕ್ಷದಿಂದ ಹೊರಹೋಗದೇ ಇದ್ದರೆ ಆಗಲೂ ನಮ್ಮ ಶೇಕಡಾವಾರು ವೋಟು ಹಾಗೆಯೇ ಇರುತ್ತಿತ್ತು ಎಂಬ ನಂಬುಗೆ ಅವರದ್ದು. ಆದರೆ, ಆಕ್ಟಿವಿಟಿಗಿಂತ ಹೆಚ್ಚು ಕನಸುಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಬಿಜೆಪಿ ನಾಯಕರು 

ಜೆಡಿಎಸ್ ಆಂತರಿಕ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ಪತನದ ಆರಂಭದ ದಿನಗಳಲ್ಲಿ ಇದ್ದ ಪರಿಸ್ಥಿತಿಗೂ, ಈಗಿನ ಸ್ಥಿತಿಗೂ ಭಾರಿ ವ್ಯತ್ಯಾಸವಿದೆ. ಜೆಡಿಎಸ್ ಆಂತರಿಕ ಸಮೀಕ್ಷೆಗಳಲ್ಲಿಯೂ ಜೆಡಿಎಸ್‍ಗೆ ಸರಳ ಬಹುಮತ ಎಂದೇನೂ ಇಲ್ಲ. ಕುಮಾರಸ್ವಾಮಿ ಏನೇ ಹೇಳಿದರೂ ಜೆಡಿಎಸ್ ಸ್ಥಾನಗಳಿಕೆ ಸೀಮಿತವಾಗಿಯೇ ಇದೆ. ಆದರೆ ಮತ್ತೊಮ್ಮೆ ಜೆಡಿಎಸ್ ನಿರ್ಣಾಯಕವಾಗಲಿದೆ ಎಂಬುದು ಆಂತರಿಕ ಲೆಕ್ಕಾಚಾರ. ಇದೆಲ್ಲದರ ಮಧ್ಯೆ ಕುಮಾರಸ್ವಾಮಿ ಇನ್ನಷ್ಟು ಶಕ್ತಿ ತುಂಬಿದರೆ ಪಕ್ಷದ ಸ್ಥಾನ ಗಳಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಆಂತರಿಕ ಸಮೀಕ್ಷೆ ಸುಳಿವು ಕೊಟ್ಟಿದೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಅತಂತ್ರ ಸರ್ಕಾರ ಬಂದಿದ್ದು 1983ರಲ್ಲಿ. ಆಗ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ನಂತರ ಸಮ್ಮಿಶ್ರ ಸರ್ಕಾರ ಬಿದ್ದು ನಡೆದ ಎಲೆಕ್ಷನ್ನಿನಲ್ಲಿ ರಾಮಕೃಷ್ಣ ಹೆಗಡೆಯವರ ಜನತಾ ದಳ ಪ್ರಚಂಡ ಬಹುಮತದೊಂದಿಗೆ ಗೆದ್ದು ಬಂದಿತ್ತು. ಅದಾದ ನಂತರ 2004ರಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಎರಡು ಸಮ್ಮಿಶ್ರ ಸರ್ಕಾರ ರಚನೆಯಾದವು. ಜೆಡಿಎಸ್, ಕಾಂಗ್ರೆಸ್ ಜೊತೆ ಒಮ್ಮೆ, ಬಿಜೆಪಿ ಜೊತೆ ಮತ್ತೊಮ್ಮೆ ಸರ್ಕಾರದಲ್ಲಿ ಪಾಲುದಾರನಾಯ್ತು. 2008ರಲ್ಲಿ ಬಿಜೆಪಿ ಸರ್ಕಾರ ಮಾಡಿತಾದರೂ, ಆಪರೇಷನ್ ಕಮಲ ಜೋರಾಗಿ ನಡೆಯಿತು. ಈಗ ಮತ್ತೊಮ್ಮೆ ಸಮ್ಮಿಶ್ರದ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ ಜನತಾದಳ ಅಧಿಕಾರದಿಂದ ಇಳಿದ ನಂತರ ಒಮ್ಮೆ ಎಸ್.ಎಂ.ಕೃಷ್ಣ ಮತ್ತೊಮ್ಮೆ ಸಿದ್ದರಾಮಯ್ಯ ಬಹುಮತದೊಂದಿಗೆ ಸರ್ಕಾರ ರಚಿಸಿದ್ದಾರಾದರೂ, ಎಸ್.ಎಂ.ಕೃಷ್ಣ ಸರ್ಕಾರ ರಚನೆಗೆ ಜನತಾ ದಳದ ವಿಭಜನೆ ಅನುಕೂಲ ಮಾಡಿತ್ತು. ಜೆಡಿಎಸ್, ಜೆಡಿಯು ರಚನೆಯಿಂದಾಗಿ ಮತಗಳು ವಿಭಜನೆಯಾಗಿದ್ದವು. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಯಡಿಯೂರಪ್ಪ, ಶ್ರೀರಾಮುಲು ಅವರ ಹೊಸ ಪಕ್ಷಗಳು ಪಡೆದುಕೊಂಡ ವೋಟು ಗೆಲ್ಲೋದಕ್ಕೆ ನೆರವಾಗಿದ್ದವು. ಬಿಜೆಪಿಗೆ ಭರವಸೆಯೇ ಅದು.



