ವಿಶ್ವಕಪ್‍ನಲ್ಲಿ, ಏಷ್ಯಾ ಕಪ್‍ನಲ್ಲಿ, ಕೊನೆಗೆ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನೂ ಸೋತಿರುವ ಭಾರತ ತಂಡ ಹಾಗೂ ಅದರ ಕ್ಯಾಪ್ಟನ್ ಟೀಕೆಗೆ ಗುರಿಯಾಗಿದ್ದಾರೆ. ಐದು ಐಪಿಎಲ್ ಕಪ್ ಗೆದ್ದಂತಲ್ಲ.. ಇಂಡಿಯಾ ಕ್ಯಾಪ್ಟನ್ ಆಗಿ ಗೆಲ್ಲೋದು.. ಅನ್ನೋದು ಟೀಕೆ ಮಾಡುವವರ ಪಾಯಿಂಟು. ಡೌಟೇ ಇಲ್ಲದಂತೆ ಸೋಲಿನ ಹೊಣೆಯನ್ನೂ ಸ್ವತಃ ರೋಹಿತ್ ಹೊತ್ತುಕೊಳ್ಳಬೇಕು. ಆದರೆ ರೋಹಿತ್ ಶರ್ಮಾ ಪ್ರಭಾವ ಬಳಿಸಿ ಕ್ಯಾಪ್ಟನ್ ಆಗಿದ್ದಾರೆ ಎನ್ನುವ ವಾದವಿದೆಯಲ್ಲ.. ಅದು ಅಚ್ಚರಿ ಹುಟ್ಟಿಸುತ್ತೆ. ಹಾಗೆ ಟೀಕೆ ಮಾಡುವವರಿಗೆ ರೋಹಿತ್ ಶರ್ಮಾ ಲೈಫಿನ ಬಗ್ಗೆ ಗೊತ್ತಿಲ್ಲವೆಂದೇ ಹೇಳಬೇಕು. 



ಆತನ ಆಟ ನೋಡೋಕೆ ಚೆಂದ. ಕ್ರಿಕೆಟ್ ಅನ್ನೋದು ಇಷ್ಟು ಈಸೀನಾ ಎನ್ನಿಸುವಷ್ಟು. ಒನ್ ಡೇ ಕ್ರಿಕೆಟ್ನಲ್ಲಿ 3 ಡಬಲ್ ಸೆಂಚುರಿ ಹೊಡೆದಿರೋ ಏಕೈಕ ಆಟಗಾರ. ಒಂದಲ್ಲ..ಎರಡಲ್ಲ.. ಐದು ಐಪಿಎಲ್ ಟ್ರೋಫಿ ಗೆದ್ದಿರೋ ಆಟಗಾರ. ಹಾಲಿ ಟೀಂ ಇಂಡಿಯಾ ಕ್ಯಾಪ್ಟನ್. ಮಂಬೈ ಇಂಡಿಯನ್ಸ್ ಕ್ಯಾಪ್ಟನ್. ಅತೀ ಹೆಚ್ಚು ಸಿಕ್ಸರ್ ಹೊಡೆದ ಇಂಡಿಯನ್ ಆಟಗಾರ. ಇದಾವುದೂ ಮುಖ್ಯವಲ್ಲ.
ಇಲ್ಲಿಯವರೆಗೆ ರೋಹಿತ್ ಶರ್ಮಾನನ್ನು ಕಾಪಾಡಿರುವುದು ಕ್ರಿಕೆಟ್ ಮಾತ್ರ. ಫಾರ್ಮ್ ಕಳೆದುಕೊಳ್ಳೋದು ಮತ್ತೆ ಗಳಿಸಿಕೊಳ್ಳೋದು ಎರಡೂ ರೋಹಿತ್ ಶರ್ಮಾಗೆ ಹೊಸದಲ್ಲ. ಫಾರ್ಮ್ ಕಳೆದುಕೊಂಡಾಗ ಟೀಮಿನಿಂದ ಹೊರಹೋಗಿ, ಮತ್ತೆ ಆಡಿ ಫಾರ್ಮ್ ಕಂಡುಕೊಂಡು ವಾಪಸ್ ಆಗುವ ಪ್ರಕ್ರಿಯೆ ರೋಹಿತ್ ಶರ್ಮಾ ಕ್ರಿಕೆಟ್ ಜೀವನದಲ್ಲಿ ನಡೆಯುತ್ತಲೇ ಇತ್ತು. ಜೊತೆಗೆ ಆತನ ದೇಹ ಪ್ರಕೃತಿಯೂ ಅದಕ್ಕೆ ಸಪೋರ್ಟ್ ಮಾಡುವಂತೆಯೇ ಇದೆ. ಸುಮ್ಮ ಸುಮ್ಮನೆ ವಡಾಪಾವ್ ಅನ್ನೋ ಬಿರುದು ಸಿಕ್ಕಲ್ಲ.
ಇವತ್ತು ರೋಹಿತ್ ಶರ್ಮಾ ಸಂಪತ್ತು 130 ಕೋಟಿಗಿಂತ ಹೆಚ್ಚು. ಎ+ ಗ್ರೇಡ್ ಆಟಗಾರ. ಮೂರೂ ಮಾದರಿಗಳಲ್ಲಿ ಆಡುತ್ತಿರುವ ಕೆಲವೇ ಕೆಲವು ಆಟಗಾರರಲ್ಲಿ ರೋಹಿತ್ ಕೂಡಾ ಒಬ್ಬ. ಆಟದಿಂದಲೂ ಕೋಟಿ ಕೋಟಿ.. ಐಪಿಎಲ್ನಿಂದಲೂ ಕೋಟಿ.. ಜಾಹೀರಾತುಗಳಿಂದಲೂ ಕೋಟಿ ಕೋಟಿ ಗಳಿಸುತ್ತಿರೋ ಆಟಗಾರ. 



ಆದರೆ ಕಥೆ ಇರೋದು ಇದರಲ್ಲಿ ಅಲ್ಲ. ಪ್ರತಿಯೊಬ್ಬ ಸಾಧಕನ ಹಿಂದೆಯೂ ನೋವಿನ ಕಥೆ ಇರುವಂತೆ ಈತನಿಗೂ ಒಂದು ಹಿನ್ನೆಲೆಯಿದೆ. ಹಿಟ್ ಮ್ಯಾನ್ ಎಂಬ ಪಟ್ಟ ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಈಗ 30 ಕೋಟಿ ಬಂಗಲೆಯಲ್ಲಿ ವಾಸ ಮಾಡುತ್ತಿರೋ ಈತನಿಗೆ ಇದೇ ಮುಂಬೈನಲ್ಲಿ ಪುಟ್ಟ ಮನೆಯೂ ಇರಲಿಲ್ಲ. ತಂದೆ ಗುರುನಾಥ್ ಶರ್ಮಾ ಟ್ರಾನ್ಸ್ಪೋರ್ಟ್ ಏಜೆನ್ಸಿಯೊಂದರಲ್ಲಿ ಕೇರ್ ಟೇಕರ್ ಅಂದ್ರೆ ಸೆಕ್ಯುರಿಟಿ ಗಾರ್ಡ್ ಆಗಿದ್ದವರು. ತಾಯಿ ಪೂರ್ಣಿಮಾ ಶರ್ಮಾ ಆಂಧ್ರದವರು. ಇವತ್ತಿಗೂ ರೋಹಿತ್ ಶರ್ಮಾಗೆ ಮರಾಠಿ, ಹಿಂದಿ ಮತ್ತು ತೆಲುಗು ಸರಾಗವಾಗಿ ಬರುತ್ತೆ. ಮುಂಬೈನ ಡೊಂಬಿವಿಲಿಯಲ್ಲಿ ಈತನ ಮನೆಯಿತ್ತು. ಮನೆಯೆಂದರೆ 10 ಬೈ 10 ರೂಮು. ಅಷ್ಟೆ. ಅಷ್ಟರಲ್ಲೇ ಬದುಕುತ್ತಿದ್ದವರು. ಕೊನೆಗೆ 2 ವರ್ಷದವನಿದ್ದಾಗಲೇ ಈತನನ್ನು ಅಜ್ಜ-ಅಜ್ಜಿಯ ಜೊತೆ ಬಿಟ್ಟರು. ಅಪ್ಪ ಅಮ್ಮ ವಾರಕ್ಕೊಮ್ಮೆ ನೋಡೋಕೆ ಬರುತ್ತಿದ್ದರು.
ಕ್ರಿಕೆಟ್ ಎಂದರೆ ಇಷ್ಟ ಪಡುತ್ತಿದ್ದ ರೋಹಿತ್ನನ್ನು 1999ರಲ್ಲಿ ಕ್ರಿಕೆಟ್ ಕ್ಯಾಂಪ್ವೊಂದಕ್ಕೆ ಸೇರಿಸಿದ್ರು. ಆಟ ಕೋಚ್ ಚಿಕ್ಕಪ್ಪ ದಿನೇಶ್ ಲಾಡ್ಗೆ ಇಷ್ಟವಾಯಿತು. ಈತನಲ್ಲೊಂದು ಉರಿಯುವ ಬೆಂಕಿಯಿದೆ ಎಂದು ಅರ್ಥವಾಯಿತು. ತಾನು ಕೋಚ್ ಆಗಿರುವ ಶಾಲೆಯಲ್ಲೇ ಜಾಯಿನ್ ಆಗು ಎಂದು ಹೇಳಿದರು. ಆದರೆ ಆ ಶಾಲೆಗೆ ಸೇರುವುದಕ್ಕೆ ದುಡ್ಡೇ ಇರಲಿಲ್ಲ. ಅದು ದುಬಾರಿ ಸ್ಕೂಲು. ಆ ಹಣ ಹೊಂದಿಸಿದ್ದು ಖುದ್ದು ಕೋಚ್. ಅವರೇ ರೋಹಿತ್ ಶರ್ಮಾಗೆ ಸ್ಕಾಲರ್ಶಿಪ್ ಸಿಗುವಂತೆ ಮಾಡಿ ಸ್ಕೂಲಿನಲ್ಲಿ ಅಡ್ಮಿಷನ್ ಮಾಡಿಸಿದ್ರು. ನಾನು ಅಲ್ಲಿರುವ 4 ವರ್ಷ ಸ್ಕೂಲಿಗೆ ಎಂದು ಒಂದೇ ಒಂದು ಪೈಸೆ ಖರ್ಚು ಮಾಡಲಿಲ್ಲ. ಎಲ್ಲವನ್ನೂ ಕೋಚ್ ನೋಡಿಕೊಂಡರು ಎಂದು ಖುದ್ದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.

ಆಫ್ ಸ್ಪಿನ್ನರ್ ಆಗಿದ್ದ ರೋಹಿತ್ ಶರ್ಮಾನ ಬ್ಯಾಟಿಂಗ್ ಟೆಕ್ನಿಕ್ ನೋಡಿದ ಕೋಚ್, ಬ್ಯಾಟಿಂಗ್ ಮಾಡುವಂತೆ ಪ್ರೋತ್ಸಾಹ ಕೊಟ್ಟರು. 8ನೇ ಬ್ಯಾಟ್ಸ್ಮನ್ ಆಗಿದ್ದ ರೋಹಿತ್ ಓಪನರ್ ಆದರು. ಶಾಲಾ ಟೂರ್ನಿಗಳಲ್ಲಿ ಸೆಂಚುರಿಗಳ ಮೇಲೆ ಸೆಂಚುರಿ ಹೊಡೆದರು. ನಂತರ ದೇವಧರ್ ಟ್ರೋಫಿಯಲ್ಲಿ ವೆಸ್ಟ್ ಝೋನ್ ಪರ ಆಡುವ ಅವಕಾಶ ಸಿಕ್ಕಿತು. ಅದೇ ಟೂರ್ನಿಯಲ್ಲಿ ಕೇಂದ್ರ ವಲಯದ ಪರ ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ಕೂಡಾ ಎಂಟ್ರಿ ಕೊಟ್ಟಿದ್ದು ಸ್ಪೆಷಲ್. ಆ ಟೂರ್ನಿಯಲ್ಲಿ 8ನೇ ಬ್ಯಾಟ್ಸ್ಮನ್ ಆಗಿ ಹೊಡೆದ 142 ರನ್ ಆಯ್ಕೆದಾರರ ಗಮನ ಸೆಳೆಯಿತು. ಅದು 2005.
ರಣಜಿಯಲ್ಲಿ ಅಮೋಘ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ 2007ರ ಟಿ-20 ವಿಶ್ವಕಪ್ ವಿಜೇತ ತಂಡದಲ್ಲಿದ್ದರು. ಒನ್ ಡೇನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬರುತ್ತಿದ್ದ ರೋಹಿತ್ ಶರ್ಮಾಗೆ ಓಪನಿಂಗ್ ಬ್ಯಾಟ್ಸ್ಮನ್ ಪಟ್ಟ ಕಟ್ಟಿದ್ದು ಎಂಎಸ್ ಧೋನಿ. ಶಾರ್ಟ್ ಪಿಚ್ ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವ ಹಿಟ್ ಮ್ಯಾನ್ ತಾಕತ್ತನ್ನು ಗುರುತಿಸಿದ್ದೇ ಧೋನಿ. ಓಪನರ್ ಆದ ಮೇಲೆಯೇ ಶರ್ಮಾ ದಾಖಲೆಗಳ ಏಣಿ ಕಟ್ಟಿದ್ದು.
ಕಡುಕಷ್ಟದಿಂದ ಬಂದ ರೋಹಿತ್ಗೆ ಕಷ್ಟದ ದಿನಗಳ ನೆನಪಿದೆ. ಆ ದಿನಗಳನ್ನು ಮರೆತಿಲ್ಲ. ಆ ಗಲ್ಲಿಯಲ್ಲಿದ್ದ ಗೆಳೆಯರೇ ಇವತ್ತಿಗೂ ಶರ್ಮಾ ಕ್ಲೋಸ್ ಫ್ರೆಂಡ್ಸ್. ಅಪ್ಪ-ಅಮ್ಮ ಇವತ್ತಿಗೂ ಜೊತೆಯಲ್ಲಿದ್ದಾರೆ. ಪತ್ನಿ ರಿತಿಕಾ ಶರ್ಮಾನ ಟೂರ್ ಮತ್ತು ಶೂಟಿಂಗ್ ಇತ್ಯಾದಿ ನೋಡಿಕೊಳ್ಳುತ್ತಾರೆ. ಅದೇ ರೋಹಿತ್ ಶರ್ಮಾ ಇವತ್ತು ಎರಡು ಕ್ರಿಕೆಟ್ ಅಕಾಡೆಮಿ ಕಟ್ಟಿದ್ದಾರೆ. ಒಂದು ಸಿಂಗಪುರದಲ್ಲಿದ್ದರೆ ಮತ್ತೊಂದು ಮುಂಬೈನಲ್ಲೇ. ಎರಡರ ಜವಾಬ್ದಾರಿಯನ್ನು ತಮ್ಮ ವಿಶಾಲ್ ಶರ್ಮಾ ನೋಡಿಕೊಳ್ಳುತ್ತಾರೆ.
ರೋಹಿತ್ ಶರ್ಮಾ ಎಂದರೆ ರಾತ್ರೋರಾತ್ರಿ ಸ್ಟಾರ್ ಆದವನಲ್ಲ. ಹೊಟ್ಟೆ ಬಟ್ಟೆಗೂ ಕಷ್ಟವಿದ್ದ ದಿನಗಳನ್ನು ನೋಡಿದ್ದಾರೆ. ಶ್ರೀಮಂತನಾದರೂ ಆತನಲ್ಲಿ ಆ ಗಲ್ಲಿ ಭಾಯ್ ಗುಣ ಹೋಗಿಲ್ಲ. ಕುಟುಂಬ ಪ್ರೀತಿಯೂ ಹೋಗಿಲ್ಲ. ಪಾಲಿಷ್ಡ್ ಕ್ಯಾರೆಕ್ಟರ್ ಅಂತೂ ಆತನದ್ದಲ್ಲ. ಕಾಸು ಕಾಸಿಗೂ ಕಷ್ಟಪಡುತ್ತಿದ್ದ ಹಿಟ್ ಮ್ಯಾನ್ ಈಗ ಹತ್ತಾರು ಐಷಾರಾಮಿ ಕಾರುಗಳ ಒಡೆಯ.
ಚಾಯ್ ವಾಲಾ ಮಗ ಪ್ರಧಾನಿಯಾಗೋ ದೇಶದದಲ್ಲಿ ಸೆಕ್ಯುರಿಟಿ ಗಾರ್ಡ್ ಮಗ ಹಿಟ್ ಮ್ಯಾನ್ ಆಗಿ ಟೀಂ ಇಂಡಿಯಾ ಕ್ಯಾಪ್ಟನ್ ಆಗುವುದು ವಿಶೇಷವೇನಲ್ಲ ಬಿಡಿ.





