ಬ್ಲಡ್ ಪ್ರೆಷರ್. ಒಂದೆರಡು ದಶಕಗಳಿಂದ ಇದು ನಾರ್ಮಲ್ಲಾಗಿ ಎಲ್ಲರಿಗೂ ಅಂಟಿಕೊಳ್ಳೊ ಕಾಯಿಲೆಯಾಗಿದೆ. ೩೦ ದಾಟಿದವರಲ್ಲಿ ಹೈಬಿಪಿ ವೆರಿ ವೆರಿ ಕಾಮನ್. ಒಂದು ಹಂತ ದಾಟಿದರೆ ಟ್ಯಾಬ್ಲೆಟ್ ಕಡ್ಡಾಯವಾಗುತ್ತದೆ. ಬಿಪಿ ಒಮ್ಮೆ ಬಂದರೆ ಜೀವನಪರ್ಯಂತ ಹಾಗೆ ಉಳಿಯುತ್ತದೆ. ಆದರೆ ಮಾತ್ರೆ ಬೇಡ ಎನ್ನುವವರಿಗೆ ಯಾವುದೇ ಪರಿಹಾರ ಇಲ್ಲವಾ..? ಈ ಪ್ರಶ್ನೆಗೆ ಹೌದು ಎನ್ನುತ್ತದೆ ಆಯುರ್ವೇದ. ಆಯುರ್ವೇದದ ಈ ಔಷಧಿಗಳು ಮನೆಯಲ್ಲೇ ಸಿಗುತ್ತವೆ. ಅಡುಗೆ ಮನೆಯಲ್ಲೇ ಇರುತ್ತವೆ. ರಕ್ತದ ಒತ್ತಡ ನಿಯಂತ್ರಣದಲ್ಲಿ ಈ ಆಯುರ್ವೇದ ಪದಾರ್ಥ ಗಳು ತಮ್ಮದೇ ಆದ ಶೈಲಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.
ನುಗ್ಗೆಕಾಯಿ : ನುಗ್ಗೆಕಾಯಿ ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಸಿಗುವ, ಬೇರೆ ತರಕಾರಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಸಿಗುವ ತರಕಾರಿ. ಇದರಲ್ಲಿ ಅತಿ ಹೆಚ್ಚು ಪ್ರೋಟೀನ್ ಮತ್ತು ವಿಟಮಿನ್ ಹಾಗೂ ಖನಿಜಾಂಶಗಳಿವೆ. ಈ ನುಗ್ಗೆಕಾಯಿ ಅಥವಾ ನುಗ್ಗೆ ಸೊಪ್ಪು ನಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ನುಗ್ಗೆ ಸೊಪ್ಪು ಬಳಸಿ ಬೇರೆ ಬೇರೆ ಸ್ವರೂಪದ ಅಡುಗೆಗಳನ್ನು ಮಾಡಿಕೊಂಡು ತಿನ್ನಬಹುದು ಮತ್ತು ರಕ್ತದ ಒತ್ತಡವನ್ನು ಕಂಟ್ರೋಲ್ ಮಾಡಿಕೊಳ್ಳಬಹುದು. ಕೇವಲ ಬಿಪಿ ಕಂಟ್ರೋಲ್ ಆಗುತ್ತದಷ್ಟೇ ಅಲ್ಲ, ದೇಹಕ್ಕೆ ಅತ್ಯಂತ ಪೌಷ್ಠಿಕಾಂಶಗಳೂ ನುಗ್ಗೆಕಾಯಿಯಿಂದ ದೊರೆಯುತ್ತವೆ. ನುಗ್ಗೆಕಾಯಿಯನ್ನು ಉಪಯೋಗಿಸಿ, ಬೆಳೆದು ಕೆಳಮಟ್ಟಕ್ಕೆ ಇಳಿದಿದ್ದ ಆರೋಗ್ಯ ಮತ್ತು ಹದಗೆಟ್ಟಿದ ಆರ್ಥಿಕತೆಯನ್ನು ʻಕ್ಯೂಬಾʼ ದೇಶ ಹತೋಟಿಗೆ ತಂದಿತ್ತು. ಅದಕ್ಕೆ ಭಾರತವೇ ನೆರವು ನೀಡಿದ್ದ ವಿಷಯವನ್ನು ಮರೆಯುವಂತಿಲ್ಲ.
ನೆಲ್ಲಿಕಾಯಿ : ಹುಳಿಯನ್ನು ಹುಳಿಯ ಜೊತೆಗೆ ಕಾರವನ್ನೂ ಇಷ್ಟಪಡುವವರು ನೆಲ್ಲಿಕಾಯಿ ಎಂದರೆ ಬಾಯಲ್ಲಿ ನೀರೂರಿಸುತ್ತಾರೆ. ಹಲವಾರು ವರ್ಷಗಳಿಂದ ನೆಲ್ಲಿಕಾಯಿ ರಕ್ತದ ಒತ್ತಡ ನಿಯಂತ್ರಣ ಮಾಡುವಲ್ಲಿ ಬಳಕೆಯಾಗುತ್ತಿದೆ. ಇತ್ತೀಚಿನ ಅಧ್ಯಯನಗಳು ಹೇಳುವ ಹಾಗೆ ನೆಲ್ಲಿಕಾಯಿ ನಮ್ಮ ರಕ್ತದಲ್ಲಿನ ಹಾಗೂ ಲಿವರ್ ಭಾಗದಲ್ಲಿ ಕಂಡುಬರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಆಯುರ್ವೇದದಲ್ಲಿ ಶತಮಾನಗಳಷ್ಟು ಹಿಂದೆಯೇ ನೆಲ್ಲಿಕಾಯಿಯ ಉಪಯೋಗಗಳ ಬಗ್ಗೆ ಉಲ್ಲೇಖಗಳಿವೆ. ಇದು ರಕ್ತದ ಒತ್ತಡವನ್ನು ನಿಯಂತ್ರಣ ಮಾಡಲು ಶ್ರಮಿಸುತ್ತದೆ. ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿರುವ ನೆಲ್ಲಿಕಾಯಿ ನಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಈ ಮೂಲಕ ರಕ್ತದ ಒತ್ತಡಕ್ಕೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ತ್ರಿಫಲ ಚೂರ್ಣದಲ್ಲಿ ನೆಲ್ಲಿಕಾಯಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಮೂಲಂಗಿ : ಮೂಲಂಗಿಯ ಸಾರು ಎಂದರೆ ಕೆಲವರಿಗೆ ಅಷ್ಟಕ್ಕಷ್ಟೇ. ಆದರೆ, ಸಾಂಬಾರ್, ಪಲ್ಯ ಇತ್ಯಾದಿಗಳಲ್ಲಿ ಬಳಸುವ ಮೂಲಂಗಿ ಕೂಡ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಪೊಟಾಸಿಯಂ ಪ್ರಮಾಣ ಹೆಚ್ಚಾಗಿದ್ದು, ಆಹಾರದಲ್ಲಿ ಸೋಡಿಯಂ ಇದ್ದರೆ ಅದನ್ನು ಶೀಘ್ರವೇ ಕಡಿಮೆ ಮಾಡಿ ರಕ್ತದ ಒತ್ತಡವನ್ನು ಕಂಟ್ರೋಲ್ ಗೆ ತರುತ್ತದೆ. ಮೂಲಂಗಿಯನ್ನು ನೀವು ಹಸಿಯಾಗಿ ತಿನ್ನಬಹುದು ಅಥವಾ ನಿಮ್ಮ ಸಲಾಡ್ ಇತ್ಯಾದಿಗಳಲ್ಲಿ ಬಳಸಬಹುದು. ತುರಿದು ಮೊಸರಿನ ಜೊತೆ ಕೂಡ ಸೇವಿಸಬಹುದು. ಯಾವ ರೀತಿಯಲ್ಲಿ ಸೇವಿಸಿದರೂ, ಮೂಲಂಗಿ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ಎಳ್ಳು : ಸಂಕ್ರಾಂತಿ ಹಬ್ಬದ ದಿನ ಮಾತ್ರವೇ ಅಲ್ಲ, ಎಳ್ಳು ಬೆಲ್ಲ ಯಾವಾಗ ತಿಂದರೂ ಆರೋಗ್ಯಕ್ಕೆ ಒಳ್ಳೆಯದು. ಎಳ್ಳು ಅಥವಾ ಎಳ್ಳೆಣ್ಣೆ ನಮ್ಮ ದೇಹದಲ್ಲಿ ಆಕ್ಸಿಡೇಟೀವ್ ಉತ್ಪಾದನೆ ಮಾಡುತ್ತದೆ. ಈ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು. ಇದರಿಂದ ರಕ್ತದ ಒತ್ತಡ ಹೆಚ್ಚಾಗಿರುವ ಜನರಲ್ಲಿ ಬಿಪಿ ಔಷಧಿಗಳಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಅಗಸೆ ಬೀಜಗಳು : ಅಗಸೆ ಬೀಜಗಳಲ್ಲಿ ಆಲ್ಫಾ ಲಿನೋಲೇನಿಕ್ ಆಮ್ಲ, ಒಮೆಗಾ 3 ಫ್ಯಾಟಿ ಆಮ್ಲಗಳು ಹೆಚ್ಚಾಗಿರುತ್ತದೆ. ಹಲವಾರು ಅಧ್ಯಯನಗಳ ಪ್ರಕಾರ ರಕ್ತದ ಒತ್ತಡ ಜಾಸ್ತಿ ಇರುವವರು ಅಗಸೆ ಬೀಜಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಕೊಲೆಸ್ಟ್ರಾಲ್ ನಿಯಂತ್ರಣವಾಗುತ್ತದೆ. ಕೊಲೆಸ್ಟರಾಲ್ ನಿಯಂತ್ರಣವಾದರೆ ತನ್ಮೂಲಕ ರಕ್ತದ ಒತ್ತಡವೂ ಕಡಿಮೆಯಾಗುತ್ತದೆ.
ಕರ್ಪೂರವಲ್ಲಿ ಅಥವಾ ದೊಡ್ಡಪತ್ರೆ : ದೊಡ್ಡಪತ್ರೆ ಗಿಡ ನೋಡಿದ್ದೀರಲ್ಲ, ದೊಡ್ಡಪತ್ರೆ ಎಲೆಗಳಲ್ಲಿರುವ ಹಲವು ಔಷಧೀಯ ಗುಣಗಳಿಗಾಗಿ ತಲೆಮಾರುಗಳಿಂದಲೂ ಇದರ ಬಳಕೆ ಇದೆ. ದೊಡ್ಡಪತ್ರೆಯು ಮಧುಮೇಹ ವಿರೋಧಿ ಗುಣಗಳಿವೆ. ದೊಡ್ಡಪತ್ರೆಯು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಸಂಶೋಧನೆಗಳು ಹೇಳುವ ಹಾಗೆ ಇದು ಹೃದಯದ ಅಪಧಮನಿಗಳ ಮೇಲೆ ಕಡಿಮೆ ಒತ್ತಡ ಬೀಳುವಂತೆ ಮಾಡುತ್ತದೆ ಮತ್ತು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕರ್ಪೂರವಲ್ಲಿ ಟ್ಯಾಬ್ಲೆಟ್ ಗಳು ಮತ್ತು ಪಿಲ್ಸ್ ಲಭ್ಯವಿವೆ. ಇದನ್ನು ಮನೆಯ ಹೂಕುಂಡಗಳಲ್ಲಿಯೂ ಬೆಳೆಯಬಹುದಾಗಿದೆ.
ಓಂಕಾಳಿನ ನೀರು : ಒಂದು ಲೋಟ ಕುದಿಯುವ ನೀರಿಗೆ ಅರ್ಧ ಚಿಕ್ಕ ಚಮಚ ಓಮದ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ,ಆರಿಸಿ ಕುಡಿಯಿರಿ ಸಾಕು. ಅಷ್ಟೇ.
ಬೆಳ್ಳುಳ್ಳಿ : ರಕ್ತದ ಒತ್ತಡ ಜಾಸ್ತಿ ಹೊಂದಿರುವವರು ಬೆಳ್ಳುಳ್ಳಿ ಸೇವನೆ ಮಾಡುವುದು ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಕಂಡುಬರುವ ಅಲಿಸಿನ್ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ ಜೊತೆಗೆ ನಮ್ಮ ಮಾಂಸ ಖಂಡಗಳಲ್ಲಿ ಒತ್ತಡವನ್ನು ಕಡಿಮೆ ಮಾಡಿ ರಕ್ತದ ಒತ್ತಡ ನಿರ್ವಹಣೆ ಮಾಡುತ್ತದೆ. ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ಜಜ್ಜಿ ಅವು ಗಳನ್ನು ಹಸಿಯಾಗಿ ತಿನ್ನಿ. ಇವು ರಕ್ತವನ್ನು ತೆಳ್ಳಗೆ ಮಾಡುತ್ತವೆ ಮತ್ತು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ತಡೆಯುತ್ತವೆ. ಆದರೆ ಬೆಳ್ಳುಳ್ಳಿಯ ಕಾರವನ್ನು ಸಹಿಸಿಕೊಳ್ಳಬೇಕು. ಬೆಳ್ಳುಳ್ಳಿಯ ಒಂದು ಹಸಿಯಾದ ಎಸಳು ತಿಂದರೆ, ಕಾರ ದೂರವಾಗಲು ಕನಿಷ್ಠ ೧೫ ನಿಮಿಷ ಬೇಕು.
ಆಹಾರ ಪದ್ಧತಿಯಲ್ಲಿ ಹಣ್ಣು ತರಕಾರಿಗಳನ್ನು ಸೇರಿಸಿಕೊಂಡು, ಕೊಬ್ಬಿನ ಅಂಶ ಇರುವ ಡೈರಿ ಮತ್ತು ಮಾಂಸಹಾರ ಪದಾರ್ಥಗಳಿಂದ ದೂರವಿದ್ದು, ಕಡಿಮೆ ಉಪ್ಪಿನ ಪ್ರಮಾಣವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಹೊಂದುವುದರ ಮೂಲಕ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ರಕ್ತದ ಒತ್ತಡವನ್ನು ಸಹ ನಿಯಂತ್ರಣಕ್ಕೆ ತಂದುಕೊಳ್ಳಬಹುದು.



