ಕೇಂದ್ರದ ಮಾಜಿ ಸಚಿವ ಹಾಗೂ ಹಿಂದುತ್ವದ ಫೈರ್ ಬ್ರ್ಯಾಂಡ್ ಅನಂತ್ ಕುಮಾರ್ ಹೆಗಡೆ ಈಗ ರಾಜಕೀಯಕ್ಕೆ ಗುಡ್ ಬೈ ಹೇಳಿದಂತೆಯೇ ಇದ್ದಾರೆ. 6 ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿರಲಿಲ್ಲ. ಸಂಸದರಾಗಿದ್ದರೂ, ಒಂದರ್ಥದಲ್ಲಿ ರಾಜಕೀಯದಿಂದ ದೂರವೇ ಇದ್ದ, ವಿಮುಖರಾಗಿದ್ದ ಅನಂತ್ ಕುಮಾರ್ ಹೆಗಡೆ, ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೂ ಗೈರು ಹಾಜರಾಗಿದ್ದರು. ಅವರೀಗ ಬಿಸಿನೆಸ್ ಮ್ಯಾನ್ ಆಗಿದ್ದಾರೆ.
ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರಗಳ ನೆರವಿನಿಂದ ವೇದಿಕ್ ಜ್ಞಾನವನ್ನು 21ನೇ ಶತಮಾನದ ತಂತ್ರಜ್ಞಾನಕ್ಕೆ ಹೊಂದಿಸಲು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರೀನ್ ನ್ಯಾನೋ ರಿಯಾಕ್ಟರ್ ಸ್ಥಾಪಿಸಿದ್ದಾರೆ. ನ್ಯಾನೋರ್ವೇದದ (ನ್ಯಾನೋ ಆಯುರ್ವೇದ) ಪೇಟೆಂಟ್ ಸೇರಿ ತಮ್ಮ ಎಲ್ಲಾ ಗ್ರೀನ್ ನ್ಯಾನೋ ಉತ್ಪನ್ನಗಳಿಗೂ ಪೇಟೆಂಟ್ ಪಡೆದಿದ್ದಾರೆ. ಹೌದು, ಇದು ಆಯುರ್ವೇದದ ಹೊಸ ರೂಪ.
ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳಿಂದ ಗ್ರೀನ್ ನ್ಯಾನೋ ತಂತ್ರಜ್ಞಾನ ಮೂಲಕ ಔಷಧಗಳನ್ನು ತಯಾರಿಸುತ್ತಿರುವ ಅನಂತ್ ಕುಮಾರ್ ಹೆಗಡೆ ಅವರ ಕದಂಬ ಸಂಸ್ಥೆ, ಗ್ರೀನ್ ನ್ಯಾನೋ ಕೇರ್ ಔಷಧ, ಸೌಂದರ್ಯ ವರ್ಧಕಗಳು, ಬಿಸ್ಕತ್ತು, ಚಾಕೊಲೆಟ್, ನ್ಯಾನೋ ತಿನಿಸುಗಳನ್ನು ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದೆ.ಸದ್ದಿಲ್ಲದೆ ಗ್ರೀನ್ ನ್ಯಾನೋ ಟೆಕ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದೆ.
ಗ್ರೀನ್ ನ್ಯಾನೋ ಪಿತಾಮಹ ಡಾ.ಕಟ್ಟೇಶ್ ಕಟ್ಟಿ ಅವರೊಂದಿಗೆ ಕೈ ಜೋಡಿಸಿರುವ ಕದಂಬ ಸಂಸ್ಥೆ ಹೊಸ ಕ್ರಾಂತಿಯನ್ನೇ ಮಾಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಈ ಔಷಧ ಕಾಯಿಲೆಗಳ ಮೇಲೆ ಖಚಿತ ಪ್ರಭಾವ ಬೀರುವುದನ್ನು ಸಾಬೀತುಪಡಿಸುವ ಬಗ್ಗೆ ಆಧಾರಗಳನ್ನು ಕೊಡುವಂಥ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಡಾ.ಕಟ್ಟೇಶ್ ಕಟ್ಟಿ ಹಾಗೂ ಅನಂತಕುಮಾರ್ ಅವರು ಅಭಿವೃದ್ಧಿಪಡಿಸಿರುವ ಈ ನ್ಯಾನೋಕೇರ್ ಔಷಧಗಳು ಭಾರತದ ಆಯುರ್ವೇದ ಹಾಗೂ ಪಾಶ್ಚಿಮಾತ್ಯ ಅಲೋಪತಿ ಔಷಧಗಳ ನಡುವಿನ ಸೇತುವೆಯಾಗಿದೆ.
ಕಳೆದ 50 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗಗಳ ಪತ್ತೆ ವಿಷಯದಲ್ಲಿ ಅತ್ಯದ್ಭುತ ಸಾಧನೆ ಆಗಿದೆ. ಆದರೆ ಚಿಕಿತ್ಸೆ ಹಾಗೂ ಕಾಯಿಲೆ ನಿವಾರಣೆ ಮಟ್ಟದಲ್ಲಿ ಸಾಧನೆ ಆಗಿದೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇದೀಗ ನ್ಯಾನೋ ಔಷಧಗಳ ಮೂಲಕ ಕ್ಯಾನ್ಸರ್, ಮಧುಮೇಹ ಹಾಗೂ ಸೋಂಕು ಸಂಬಂಧಿತ ಸಮಸ್ಯೆಗಳಿಗೆ ಖಚಿತ ಚಿಕಿತ್ಸೆ ನೀಡಬಹುದು. ಇದನ್ನು ಈಗಾಗಲೇ ಕೆಲ ಪ್ರಾಣಿಗಳು, ರೋಗಿಗಳ ಮೇಲೆ ಪ್ರಯೋಗ ಮಾಡಿದ್ದು ಖಚಿತ ಫಲಿತಾಂಶ ಪಡೆದಿದ್ದೇವೆ ಎನ್ನುತ್ತಾರೆ ಡಾಕ್ಟರ್ ಕಟ್ಟೇಶ್ ಶೆಟ್ಟಿ.
ಇದೊಂದು ಶುದ್ಧ ವಿಜ್ಞಾನ. ಮನುಷ್ಯನ ಜೀವ ಕಣಗಳು 12 ರಿಂದ 18ರಷ್ಟು ಮೈಕ್ರಾನ್‌ನಷ್ಟು ಸೂಕ್ಷ್ಮ ಗಾತ್ರ ಹೊಂದಿರುತ್ತದೆ. ಕ್ಯಾನ್ಸರ್ ಟ್ಯೂಮರ್ ಕಣಗಳು ಅಷ್ಟೇ ಗಾತ್ರ ಹೊಂದಿರುತ್ತವೆ.ಗ್ರೀನ್ ನ್ಯಾನೋ ತಂತ್ರಜ್ಞಾನದ ನೆರವಿನಿಂದ ನ್ಯಾನೋ ಗಾತ್ರದಲ್ಲಿ ಔಷಧಗಳನ್ನು ಮಾಡಬಹುದು. ಈಗಿನ ಔಷಧಗಳು ಈ ಕಣಗಳಿಗಿಂತ ದೊಡ್ಡ ಗಾತ್ರದಲ್ಲಿವೆ. ಹೀಗಾಗಿ ಅವು ಜೀವಕಣಗಳ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿಲ್ಲ. ಆದರೆ ನ್ಯಾನೋ ಔಷಧೀಯ ಕಣಗಳು ಜೀವಕಣಗಳಿಗಿಂತ ಅತ್ಯಂತ ಸೂಕ್ಷ್ಮ. ಇವು ಯಶಸ್ವಿಯಾಗುತ್ತವೆ ಎನ್ನುವುದು ಡಾಕ್ಟರ್ ಕಟ್ಟೇಶ್ ನಿರೂಪಣೆ.
ಇದೆಲ್ಲದಕ್ಕೂ ಬೆಂಬಲವಾಗಿ ನಿಂತಿರುವುದು ಅನಂತ್ ಕುಮಾರ್ ಹೆಗಡೆ.
ಬೆಂಗಳೂರಿನ ಜಯನಗರ 4ನೇ ಬ್ಲಾಕ್‌ನಲ್ಲಿ ವಿಶ್ವದ ಮೊದಲ ಗ್ರೀನ್ ನ್ಯಾನೋ ವೈದ್ಯಕೀಯ ಕೇಂದ್ರವನ್ನು ಅನಂತಕುಮಾರ್ ಹೆಗಡೆ ಅವರು ಕದಂಬ ಸಂಸ್ಥೆಯಡಿ ಸ್ಥಾಪಿಸಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಔಷಧ ಅಭಿವೃದ್ಧಿಪಡಿಸಿದ್ದು, ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿಶ್ವ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಮುಂದಾಗಿದ್ದಾರೆ.
ಭಾಷಣಕ್ಕೆ ನಿಂತರೆ ಬೆಂಕಿ ಭಾಷಣ ಮಾಡುತ್ತಿದ್ದ, ಮುಲಾಜಿಲ್ಲದೆ ಮಾತನಾಡುತ್ತಿದ್ದ, ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದ, ಭಟ್ಕಳದ ರಸ್ತೆಗಳಲ್ಲಿ ಪುಂಡರ ವಿರುದ್ಧ ಖಡ್ಗ ಹಿರಿದು ಹೋರಾಟ ನಡೆಸಿದ್ದ ಅನಂತ್ ಕುಮಾರ್ ಹೆಗಡೆ, ಈಗ ಉದ್ಯಮಿಯಾಗಿರುವುದೇ ವಿಶೇಷ.



