ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಬ್ಯಾನ್ ವಿಷಯ ಇಡೀ ಭಾರತಾದ್ಯಂತ ಸದ್ದು ಮಾಡಿತು. ಪ್ರಕರಣ ಈಗಲೂ ಸುಪ್ರೀಂಕೋರ್ಟಿನಲ್ಲಿದೆ. ಉಡುಪಿಯಲ್ಲಿ ಶುರುವಾದ ಹಿಜಾಬ್ ಬ್ಯಾನ್ ವಿಷಯ, ಚುನಾವಣೆಯಲ್ಲಿಯೂ ಪರಿಣಾಮ ಬೀರಿದ್ದನ್ನು ತಳ್ಳಿ ಹಾಕುವಂತಿಲ್ಲ. ಹಾಗೆ ನೋಡಿದರೆ ಜಗತ್ತಿನಲ್ಲಿ ಹಲವು ಮುಸ್ಲಿಂ ದೇಶಗಳಲ್ಲಿ ಹಿಜಾಬ್ ಕಡ್ಡಾಯವೇನಲ್ಲ. ಕೆಲವು ಯೂರೋಪಿಯನ್ ಹಾಗೂ ಮುಸ್ಲಿಂ ರಾಷ್ಟ್ರಗಳಲ್ಲಿ ಹಿಜಾಬ್ ನಿಷೇಧ ಇದೆ. ಈಗ ಆ ಸಾಲಿಗೆ ತಝಕಿಸ್ತಾನ ಕೂಡಾ ಸೇರಿದೆ.
ತಜಕಿಸ್ತಾನದಲ್ಲಿ ಜನಸಂಖ್ಯೆ ಸುಮಾರು 1 ಕೋಟಿ. ಆ 1 ಕೋಟಿಯಲ್ಲಿ ಶೇ.96ರಷ್ಟು ಜನರು ಮುಸ್ಲಿಮರು. ಆದರೆ ಹಾಲಿ ಆಡಳಿತದಲ್ಲಿರುವ ಅಧ್ಯಕ್ಷ ಎಮೋಮಲಿ ರೆಹಮಾನ್ ಸರ್ಕಾರವು, ತಜಕಿಸ್ತಾನವನ್ನು ಜಾತ್ಯತೀತ ದೇಶ ಎಂದು ಜಗತ್ತಿನ ಮುಂದೆ ತೆರೆದಿಡುವ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರವಾದ ಮಸೂದೆ ಅನ್ವಯ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಸೇರಿದಂತೆ ಯಾವುದೇ ಇಸ್ಲಾಮಿಕ್ ಧಾರ್ಮಿಕ ವಸ್ತ್ರ ಧರಿಸುವಂತಿಲ್ಲ. ಒಂದು ವೇಳೆ ಧರಿಸಿದರೆ 3ರಿಂದ 5 ಲಕ್ಷ ರು.ವರೆಗೆ ದಂಡ ಕಟ್ಟಬೇಕಾಗುತ್ತದೆ. ಇದರ ಜೊತೆಗೆ ಹಬ್ಬದ ವೇಳೆ ಮಕ್ಕಳು, ಮನೆಯ ಹಿರಿಯರು ಅಥವಾ ಇತರರಿಂದ ಹಣ ಕೇಳುವ ಸಂಪ್ರದಾಯವನ್ನೂ ಸರ್ಕಾರ ಮಸೂದೆ ಮೂಲಕ ನಿಷೇಧಿಸಿದೆ.
ತಝಕಿಸ್ತಾನದಲ್ಲಿ ಹಿಜಾಬ್ ನಿಷೇಧ ಏಕೆ..?
ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಬಡತನ, ಅನಾಗರಿಕತೆಯ ಸೂಚಕ ಎಂಬ ಭಾವನೆ ಹೆಚ್ಚುತ್ತಿದೆ.
ತಜಕಿಸ್ತಾನವನ್ನು ಜಾತ್ಯತೀತ ದೇಶ ಎಂದು ಜಗತ್ತಿನೆದುರು ಬಿಂಬಿಸುವ ಯತ್ನದ ಭಾಗವಾಗಿ ಹಿಜಾಬ್ ನಿಷೇಧ ಹೇರಲಾಗಿದೆ.
ಅಧ್ಯಕ್ಷ ಎಮೋಮಲಿ ರೆಹಮಾನ್ ಸರ್ಕಾರದಿಂದ ಹಿಜಾಬ್‌ಗೆ ನಿಷೇಧ ಹೇರಿ ತೀರ್ಮಾನ ಕೈಗೊಳ್ಳಲಾಗಿದೆ.
ಕಟ್ಟರ್ ಸಂಪ್ರದಾಯವಾದಿಗಳಿಂದ ತಜಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಸಂಸತ್ತಿನ ಉಭಯ ಸದನಗಳು ಒಪ್ಪಿಗೆ ನೀಡಿವೆ.
ತಝಕಿಸ್ತಾನದಲ್ಲಿ ಹಿಜಾಬ್ ಬ್ಯಾನ್ ನಿರ್ಧಾರ ಹಿಂದೆ..
1 ಕೋಟಿ ಜನಸಂಖ್ಯೆ ಹೊಂದಿರುವ ತಜಕಿಸ್ತಾನದಲ್ಲಿ 96% ಜನರು ಮುಸ್ಲಿಮರು. ಆದರೂ 2007ರಲ್ಲೇ ಸರ್ಕಾರ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿತ್ತು. ಇದೀಗ ದೇಶವ್ಯಾಪಿ ಹಿಜಾಬ್ ನಿಷೇಧ ವಿಸ್ತರಣೆ ಮಾಡಲು ಮಸೂದೆ ಅಂಗೀಕಾರವಾಗದೆ. ಈ ವಿಧೇಯಕದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧಾರಣೆ ನಿಷಿದ್ಧವಾಗಿದೆ. ಇದನ್ನು ಉಲ್ಲಂಘಿಸಿ ಹಿಜಾಬ್ ಧರಿಸಿದರೆ 3ರಿಂದ 5 ಲಕ್ಷ ರು.ವರೆಗೂ ದಂಡ ಹೇರುವ ಅವಕಾಶವಿದೆ. ಮುಸ್ಲಿಂ ದೇಶದಲ್ಲೇ ಹಿಜಾಬ್‌ಗೆ ನಿಷೇಧ ಹೇರಿರುವ ಬಗ್ಗೆ ಭಾರಿ ಚರ್ಚೆಯಂತೂ ಆಗುತ್ತಿದೆ.
ಸರ್ಕಾರದ ನಿರ್ಧಾರವನ್ನು ದೇಶದ ಸಂಪ್ರದಾಯವಾದಿ ಮುಸ್ಲಿಮರು ಕಟುವಾಗಿ ಟೀಕಿಸಿದ್ದಾರೆ. ಇದು ದೇಶದ ಸಂಸ್ಕೃತಿ, ಇಸ್ಲಾಮಿಕ್ ಸಂಪ್ರದಾಯಕ್ಕೆ ಆಪಾಯ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದು ಬಡತನ ಮತ್ತು ಅನಾಗರಿಕತೆ ಸೂಚಕ ಎಂದೇ ಟೀಕಿಸಿಕೊಂಡು ಬಂದಿರುವ ರೆಹಮಾನ್ 2007ರಲ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ್ದರು. ಬಳಿಕ ಅದನ್ನು ಸಾರ್ವಜನಿಕ ಸಂಸ್ಥೆಗಳಿಗೂ ವಿಸ್ತರಿಸಲಾಗಿತ್ತು. ಇದೀಗ ಅದನ್ನು ದೇಶವ್ಯಾಪಿ ವಿಸ್ತರಣೆ ಮಾಡಲಾಗಿದೆ.



