ಹೆಚ್.ಡಿ.ರೇವಣ್ಣ. ಮಾಜಿ ಪ್ರಧಾನಿ ದೇವೇಗೌಡರ ಮಗ. ಮಾಜಿ ಸಚಿವ. ತಮ್ಮ ಮಾಜಿ ಮುಖ್ಯಮಂತ್ರಿ. ಸ್ವತಃ ರೇವಣ್ಣ ಪ್ರಭಾವಿ ಸಚಿವರಾಗಿದ್ದವರು. ಒಬ್ಬ ಮಗ ಸಂಸತ್ ಸದಸ್ಯ. ಮತ್ತೊಬ್ಬ ಮಗ ವಿಧಾನ ಪರಿಷತ್ ಸದಸ್ಯ. ಪತ್ನಿ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದವರು. ಅಂತಹ ರೇವಣ್ಣ ಈಗ ಜೈಲು ವಾಸಿ. ಗೌಡರ ಫ್ಯಾಮಿಲಿಯಲ್ಲೇ ಜೈಲು ಸೇರಿದ ಕೆಟ್ಟ ಇತಿಹಾಸ ಬರೆದಿರುವುದು ಹೆಚ್.ಡಿ.ರೇವಣ್ಣ. ಬೇರೆ ರೀತಿಯ ಪ್ರಕರಣಗಳಾಗಿದ್ದರೆ.. ರಾಜಕೀಯ ಕಾರಣಗಳಿಗಾಗಿ ಜೈಲು ಸೇರಿದ್ದರೆ.. ಹೆಮ್ಮೆಯಿಂದ ಎದೆಯುಬ್ಬಿಸಿ ನಿಲ್ಲುತ್ತಿದ್ದರೇನೋ.. ಆದರೆ.. ಜೈಲು ಸೇರಿರುವುದು ಮಗ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಕೇಸಿನಲ್ಲಿ. ಹೀಗಾಗಿಯೇ.. ಆತ್ಮಸ್ಥೈರ್ಯ ಕಳೆದುಕೊಂಡಂತೆ ಕಾಣುತ್ತಿರುವ ರೇವಣ್ಣ, ಜಡ್ಜ್ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ಧಾರೆ. ಗಳಗಳನೆ ಕಣ್ಣೀರಿಟ್ಟಿದ್ಧಾರೆ.
ಶನಿವಾರ ರಾತ್ರಿಯಿಡೀ ಮತ್ತು ಭಾನುವಾರವೂ ವಿಚಾರಣೆ ಮುಂದುವರಿಸಿದ ಎಸ್‌ಐಟಿ ಅಧಿಕಾರಿಗಳಿಗೆ ರೇವಣ್ಣ ಕೊಟ್ಟಿರುವುದು ಒಂದೇ ಉತ್ತರ.. ಮಹಿಳೆಯ ಅಪಹರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ಯಾರನ್ನೂ ಅಪಹರಿಸಿಲ್ಲ. ನಮ್ಮ ಮನೆಯಲ್ಲಿ ನೂರಾರು ಮಹಿಳೆಯರು ಕೆಲಸ ಮಾಡುತ್ತಾರೆ. ಅಪಹರಣಗೊಂಡಿದ್ದಾರೆ ಎನ್ನಲಾದ ಮಹಿಳೆಯೇ ನನಗೆ ಪರಿಚಯವಿಲ್ಲ. ಆ ಮಹಿಳೆ ಆರೋಪಿಸಿರುವಂತೆ ರೇವಣ್ಣ ಎಂಬ ಹೆಸರಿನವರು ನೂರಾರು ಮಂದಿ ಇದ್ದಾರೆ. ರೇವಣ್ಣ ಎಂದು ಹೆಸರು ಇಟ್ಟುಕೊಂಡಿದ್ದೇನೆ ಎಂಬ ಮಾತ್ರಕ್ಕೆ ನನ್ನನ್ನು ಬಂಧಿಸಿರುವುದು ಸರಿಯಲ್ಲ.
ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ರೇವಣ್ಣ, ಜಡ್ಜ್ ಎದುರು ಕರೆದುಕೊಂಡು ಹೋದಾಗ ಮಾತ್ರ ಬಿಕ್ಕಿಬಿಕ್ಕಿ ಅತ್ತು ಕಣ್ಣೀರು ಹಾಕಿದ್ಧಾರೆ. ರಾಜಕೀಯ ದುರುದ್ದೇಶದಿಂದ ನನ್ನನ್ನು ಬಂಧಿಸಲಾಗಿದೆ. ಮಹಿಳೆಯ ಅಪಹರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದಿರುವ ರೇವಣ್ಣ, ಸುಳ್ಳು ಪ್ರಕರಣದಿಂದ ನನ್ನ ರಾಜಕೀಯ ಭವಿಷ್ಯವೇ ಹಾಳಾಗಿದೆ. ಯಾವುದೇ ತಪ್ಪು ಮಾಡದ ನನಗೆ ಕಾನೂನಿನ ರಕ್ಷಣೆ ನೀಡಬೇಕು ಎನ್ನುತ್ತಾ ಬಿಕ್ಕಳಿಸಿದರಂತೆ. ಆಗ ಪೊಲೀಸರೇ ರೇವಣ್ಣ ಅವರಿಗೆ ನೀರು ಕೊಟ್ಟು ಸಮಾಧಾನ ಮಾಡಿದ್ರಂತೆ.
ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದೊಂದು ರಾಜಕೀಯ ಪಿತೂರಿ. ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ಇದೊಂದು ರಾಜಕೀಯ ಷಡ್ಯಂತ್ರ. ಯಾವುದೇ ಪುರಾವೆ ಇಲ್ಲದೆ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಪೊಲೀಸರು ಮೊದಲಿಗೆ ಏ.28ರಂದು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಆ ಪ್ರಕರಣದಲ್ಲಿಯಾವುದೇ ಪುರಾವೆ ಸಿಗಲಿಲ್ಲವೆಂದು ಮೇ 2ಕ್ಕೆ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಪುರಾವೆಯಿಲ್ಲದೆ ನನ್ನನ್ನು ಬಂಧಿಸಲಾಗಿದೆ. ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡಲಾಗಿದೆ. ನನ್ನ ವಿರುದ್ಧದ ಆರೋಪವೆಲ್ಲಾ ಸುಳ್ಳು. ಇಷ್ಟರಲ್ಲೇ ಎಲ್ಲವನ್ನೂ ಹೇಳುತ್ತೀನಿ ಎಂದಿದ್ದಾರಂತೆ.
ಕಿಡ್ನಾಪ್ ಆಗಿದ್ದ ಸಂತ್ರಸ್ತೆ ಹೇಳ್ತಿರೋದೇನು..?
ಅತ್ಯಾಚಾರಕ್ಕೆ ಒಳಗಾದ ಮಹಿಳೆ ದೂರು ನೀಡಬಾರದು ಎಂದು ಆಕೆಯನ್ನೆ ಅಪಹರಣ ಮಾಡಿದ ಗಂಭೀರ ಆರೋಪ ಈಗ ಹೆಚ್ ಡಿ ರೇವಣ್ಣ ಮೇಲಿದೆ. ಆಕೆಯ ಕಿಡ್ನಾಪ್ ಕೇಸಿನಲ್ಲಿ ಎ2 ಆಗಿರುವ ಸತೀಶ್ ಬಾಬು, ಕಿಡ್ನಾಪ್ ಮಾಡುವಂತೆ ಹೇಳಿದ್ದು ರೇವಣ್ಣನೇ ಎಂದು ಹೇಳಿಕೆ ಕೊಟ್ಟಿದ್ಧಾರಂತೆ. ರೇವಣ್ಣ ಹೇಳಿದ್ದಕ್ಕೆ ಮಹಿಳೆ ಕರೆದೊಯ್ದು ಬಿಟ್ಟು ಬಂದಿದ್ದೆ ಎಂದು ಎಸ್‌ಐಟಿ ಮುಂದೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ ಸಂತ್ರಸ್ತ ಮಹಿಳೆ ತಮ್ಮ ಮೇಲೆ ಅತ್ಯಾಚಾರ ಮಾಡಿ ಕಿರುಕುಳ ನೀಡಿದ್ದು ಪ್ರಜ್ವಲ್ ರೇವಣ್ಣ. ರೇವಣ್ಣ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಸಂತ್ರಸ್ತೆಯನ್ನು ಜಡ್ಜ್ ಎದುರು ಕರೆದೊಯ್ದು, 164 ಅಡಿಯಲಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗುವುದು. ಈ ನಡುವೆ ಪ್ರಕರಣದಲ್ಲಿ ಮತ್ತೆ ಮೂವರು ಮಹಿಳೆಯರು ದೂರು ನೀಡಲು ಮುಂದೆ ಬಂದಿದ್ದಾರೆ. ರೇವಣ್ಣ ಸುತ್ತ ಕುಣಿಕೆ ಬಿಗಿಯುತ್ತಲೇ ಇದೆ.



