ಲೋಕಸಭೆ ಚುನಾವಣೆ 6ನೇ ಸುತ್ತಿನ ಮತದಾನಕ್ಕೆ ಪ್ರವೇಶಿಸಿದೆ. ಇನ್ನು ಕೆಲವೇ ದಿನಗಳಷ್ಟೇ.ಜೂನ್ 4ಕ್ಕೆ ಫಲಿತಾಂಶವೂ ಹೊರಬರಲಿದೆ. ಚುನಾವಣೆ ಮೊದಲ ಹಂತದ ಮತದಾನ ಶುರುವಿಗೂ ಮುನ್ನ ದೇಶಾದ್ಯಂತ ಹಲವು ಸಮೀಕ್ಷೆಗಳು ನಡೆದಿದ್ದವು. ಮತದಾನ ಶುರುವಾದ ಮೇಲೆ ಯಾವುದೇ ಚಾನೆಲ್ಲುಗಳು, ಸಂಸ್ಥೆಗಳು ಸಮೀಕ್ಷೆ ಮಾಡುವಂತಿಲ್ಲ. ಸಮೀಕ್ಷೆ ಮಾಡಿದರೂ ಅವುಗಳನ್ನು ಬಹಿರಂಗಗೊಳಿಸುವಂತಿಲ್ಲ. ಸದ್ಯಕ್ಕೆ ಬರುತ್ತಿರುವ ಸಟ್ಟಾ ಬಜಾರ್ ಲೆಕ್ಕ, ಪ್ರಶಾಂತ್ ಕಿಶೋರ್ ಸೇರಿದಂತೆ ಹಲವರು ಹೇಳುತ್ತಿರುವ ಲೆಕ್ಕಗಳು ಸಮೀಕ್ಷೆ ವ್ಯಾಪ್ತಿಗೆ ಬರುವುದಿಲ್ಲ. ಈ ನಡುವೆ ಅಮೆರಿಕದ ರಾಜನೀತಿ ತಜ್ಞರೊಬ್ಬರು ಈ ಬಾರಿ ಭಾರತದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಭವಿಷ್ಯ ಹೇಳಿದ್ಧಾರೆ.
ಇಯಾನ್ ಬ್ರೆಮ್ಮರ್ . ಅಮೆರಿಕದಲ್ಲಿ ಈತ ಸೆಫಾಲಜಿಸ್ಟ್. ರಾಜಕೀಯ ವಿಜ್ಞಾನಿ ಮತ್ತು ಜಾಗತಿಕ ರಾಜಕೀಯ ವಿಪತ್ತು ಸಂಶೋಧನಾ ಸಂಸ್ಥೆಗಳಲ್ಲಿ ಸಲಹೆಗಾರ. ಯುರೇಷಿಯಾ ಸಮೂಹದ ಸಂಸ್ಥಾಪಕರೂ ಆಗಿರುವ ಬ್ರೆಮ್ಮರ್ ಅವರ ಪ್ರಕಾರ ಈ ಬಾರಿ ಬಿಜೆಪಿ ಸುಮಾರು 305 ಸ್ಥಾನಗಳನ್ನು ಗೆಲ್ಲಲಿದೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಬ್ರೆಮ್ಮರ್ ಬಿಜೆಪಿ 295-315 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ತಮ್ಮ ಯುರೇಷಿಯಾ ಗ್ರೂಪ್ ಸಂಶೋಧನೆ ತಿಳಿಸಿದೆ ಎಂದು ಹೇಳಿದ್ದಾರೆ. ಮೋದಿ ಅವರ ನಾಯಕತ್ವಕ್ಕೆ ಜನತೆ ಮತ್ತೆ ವೋಟ್ ಹಾಕುತ್ತಿರುವುದಕ್ಕೆ ಕಾರಣಗಳನ್ನೂ ಪಟ್ಟಿ ಮಾಡಿರುವ ಬ್ರೆಮ್ಮರ್ ʻಭಾರತದ ಸಾಧನೆ ಕಳೆದ ಹಲವು ದಶಕಗಳಲ್ಲಿ ಕಳಪೆ ಇತ್ತು. ಈಗ ಬೆಳವಣಿಗೆ ಚುರುಕು ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಭಾರತವು ನಂಬಲಾಗದ ಜನಸಂಖ್ಯಾ ಶಕ್ತಿ ಮತ್ತು ಪ್ರಬಲ ಬೌದ್ಧಿಕ ಸಂಪನ್ಮೂಲ ಹೊಂದಿದೆ. ಅನೇಕ ಅಮೆರಿಕನ್ ಸಿಇಒಗಳು ಭಾರತದವರು. ಇದು ಮೊದಲೂ ಇತ್ತಾದರೂ.. ಆಗ ಭಾರತದ ಸಾಧನೆ ಕಳಪೆ ಇತ್ತು. ಆದರೆ.. ಈಗ ಹಾಗಿಲ್ಲ, ಭಾರತವು ಮುಂದಿನ ವರ್ಷ ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವುದನ್ನು ನಾವು ನೋಡಲಿದ್ದೇವೆ. ಮತ್ತು ಬಹುಶಃ 2028ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ಅಮೆರಿಕಕ್ಕೆ ಹೋಲಿಸಿದರೆ.. ಭಾರತವೇ ಉತ್ತಮ ಎನ್ನುವ ಬ್ರೇಮ್ಮರ್ ನಮ್ಮಲ್ಲಿ ಭೌಗೋಳಿಕ ಸಂಪತ್ತಿದೆ. ಆರ್ಥಿಕತೆಯೂ ಚೆನ್ನಾಗಿದೆ. ಆದರೆ.. ರಾಜಕೀಯ ಸ್ಥಿತಿ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ. ಜಾಗತಿಕ ಮಾರುಕಟ್ಟೆಯ ಒಳಗೆ ರಾಜಕೀಯ ನುಸುಳಿದೆ. ಯುದ್ಧಗಳು, ಅಮೆರಿಕ-ಚೀನಾ ಸಂಬಂಧಗಳು ಮತ್ತು ಅಮೆರಿಕ ಚುನಾವಣೆಗಳು ಎಲ್ಲವೂ ಅದರ ದೊಡ್ಡ ಭಾಗವಾಗಿದ್ದು, ಅವುಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆದರೆ.. ಭಾರತದ ಸ್ಥಿತಿ ಹಾಗಿಲ್ಲ, ರಾಜಕೀಯವಾಗಿ ಅಚಲ ಮತ್ತು ಸ್ಥಿರವಾಗಿ ಕಾಣುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗಳು ಜಗತ್ತಿನ ಆರ್ಥಿಕ ಸ್ಥಿತಿ ಸಮತೋಲನ ಸಾಧಿಸಲು ನೆರವಾಗಲಿವೆ ಎಂದು ಹೇಳಿದ್ಧಾರೆ.
ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತು ಎನ್ʻಡಿಎ ಹೋರಾಟ ನಡೆಸುತ್ತಿದ್ದು, 400+ ಗುರಿ ಇಟ್ಟುಕೊಂಡಿವೆ. ಒಂದೆರಡು ಸಮೀಕ್ಷೆಗಳನ್ನು ಬಿಟ್ಟರೆ, ಸಟ್ಟಾಬಜಾರ್ ಸೇರಿದಂತೆ ಯಾವ ಸಮೀಕ್ಷೆಗಳೂ ಎನ್ʻಡಿಎಗೆ 400+ ನೀಡಿಲ್ಲ. ಸಟ್ಟಾ ಬಜಾರ್ ಸಮೀಕ್ಷೆಯಲ್ಲಿಯೂ ಕೂಡಾ ಬಿಜೆಪಿಗೆ 300+ ಅಷ್ಟೇ ನೀಡಲಾಗಿದೆ. ಆದರೆ, ಅಮೆರಿಕದ ಬ್ರೆಮ್ಮರ್ ಗರಿಷ್ಠ 315 ಸ್ಥಾನಗಳನ್ನು ಕೊಟ್ಟಿದ್ಧಾರೆ.



