ಪ್ರಧಾನಿ ನರೇಂದ್ರ ಮೋದಿ ಇದೀಗ ತಾನೇ ಮುಗಿದಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹೇಳಿರುವ ಮಾತು ಮತ್ತು ನೀಡಿರುವ ಸಂದೇಶ ಬಿಜೆಪಿ ಕಾರ್ಯಕರ್ತರನ್ನು ಮತ್ತು ಅದರಲ್ಲಿಯೂ ವಿಶೇಷವಾಗಿ ನಾಯಕರನ್ನು ಅಚ್ಚರಿಗೆ ಕೆಡವಿದೆ. ಇಷ್ಟಕ್ಕೂ ಮೋದಿ ಹೇಳಿರುವ ಮಾತಿನ ಸಾರಾಂಶ ಇಷ್ಟು.

ಮುಸ್ಲಿಮರ ಮನೆಮನೆಗೂ ಹೋಗಬೇಕು. ಮುಸ್ಲಿಮರು ಬಿಜೆಪಿಯಿಂದ ದೂರ ಇರಬಾರದು. ಪ್ರತಿ ಮುಸ್ಲಿಂ, ಕ್ರಿಶ್ಚಿಯನ್ನರ ಮನೆಗಳಿಗೂ ಹೋಗಿ ಸರ್ಕಾರ ಅವರ ಅಭಿವೃದ್ಧಿಗೆ ಏನು ಮಾಡಿದೆ ಎಂಬ ಮಾಹಿತಿ ನೀಡಬೇಕು ಎಂದಿದ್ದಾರೆ. ಪ್ರತಿಯಾಗಿ ಮುಸ್ಲಿಮರಿಂದ ಮತಗಳನ್ನು ನಿರೀಕ್ಷಿಸಬೇಡಿ. ಕ್ರಮೇಣ ಅವರೂ ಬದಲಾಗುತ್ತಾರೆ ಎಂದಿದ್ದಾರೆ. ಇದೇ ವೇಳೆ ಪಠಾಣ್ ಸೇರಿದಂತೆ ಸಿನಿಮಾಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡದಂತೆಯೂ ಸೂಚಿಸಿದ್ದಾರೆ. ಒಬ್ಬ ಪ್ರಧಾನಿಯಾಗಿ ಒಂದು ಸಮುದಾಯವನ್ನು ದೂರವಿಡಿ ಎಂದು ಹೇಳೋಕೆ ಸಾಧ್ಯವೂ ಇಲ್ಲ. ಇದೂವರೆಗೆ ಗುಜರಾತ್ ಸಿಎಂ ಆಗಿದ್ದಾಗಲೇ ಆಗಲಿ, ಪ್ರಧಾನಿಯಾದ ಮೇಲೆ ಆದರೂ ಆಗಲಿ, ಇದೂವರೆಗೆ ಮೋದಿ ಯಾವತ್ತಿಗೂ ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯ ವಿರೋಧಿ ಹೇಳಿಕೆ ನೀಡಿಲ್ಲ. ಮೋದಿಯರನ್ನು ಪ್ರತಿಪಕ್ಷಗಳು ಏನೇ ಕೋಮುವಾದಿ ಎಂದು ಟೀಕಿಸಿದರೂ ಅವರ ಬಳಿ ಮೋದಿ ಹೇಳಿರುವ ಕೋಮುದ್ವೇಷದ ಹೇಳಿಕೆ ಸಿಗುವುದು ಸಾಧ್ಯವಿಲ್ಲ. ಹೀಗಾಗಿಯೇ ಮೋದಿ ಪಕ್ಷದ ಕಾರ್ಯಕರ್ತರಿಗೂ ಈ ಮಾತು ಹೇಳಿದ್ದಾರೆ.




ಪ್ರಧಾನಿ ಮೋದಿ ಮುಸ್ಲಿಂ ಸೇರಿದಂತೆ ಯಾವುದೇ ಸಮುದಾಯದ ವಿರುದ್ಧ ವೈಯಕ್ತಿಕ ಹೇಳಿಕೆ ನೀಡಿಲ್ಲ. ಅಲ್ಲದೆ ಪ್ರಧಾನಿಯಾಗಿ ಆ ರೀತಿ ಹೇಳಿಕೆ ನೀಡುವುದು ಅಸಾಧ್ಯ. ಅಲ್ಲದೆ ಸ್ವತಃ ಮೋದಿ ಏನೇ ಆರೋಪಗಳಿದ್ದರೂ ಗುಜರಾತಿನಲ್ಲಿ ಬೋರಾ, ನದಾಫ್ ಮುಸ್ಲಿಮರೂ ಸೇರಿದಂತೆ ಸುಧಾರಣಾವಾದಿ ಮುಸ್ಲಿಮರನ್ನು ಒಳಗೊಂಡೇ ರಾಜಕೀಯ ಮಾಡಿದವರು. ಅಲ್ಲದೆ ಇಡೀ ದೇಶವನ್ನು ಮುನ್ನಡೆಸುವವರು ಒಂದು ಸಮುದಾಯವನ್ನು ದ್ವೇಷಿಸಬಾರದು. ಅಲ್ಲದೆ ಪಠಾಣ್ ಸೇರಿದಂತೆ ಯಾವುದೇ ಸಿನಿಮಾ ಇರಲಿ, ಟೀಕೆ, ಬಾಯ್ಕಾಟ್ ಎಂಬ ಮಾತು ಬಂದಾಗ ಸಿನಿಮಾ ಜನಪ್ರಿಯ ಮಾಧ್ಯಮ ಎಂಬ ಕಾರಣಕ್ಕೆ ದೊಡ್ಡ ಸುದ್ದಿಯಾಗುತ್ತದೆ. ಇದು ಪಕ್ಷಕ್ಕೆ ಮುಜುಗರದ ಸಂಗತಿ. ಅಲ್ಲದೆ ಒಂದು ಸಮುದಾಯವನ್ನು ದೂರ ಮಾಡುತ್ತಾ ಹೋದರೆ ಅದೇ ಸಮುದಾಯದಲ್ಲಿರುವ ಉದಾರವಾದಿಗಳೂ ಪಕ್ಷದಿಂದ ದೂರವಾಗಬಹುದು. ದೂರ ಇಡುವುದಕ್ಕಿಂತ ಸುಧಾರಿಸುವುದೇ ಉತ್ತಮ ಎಂಬ ಸಂದೇಶವೂ ಮೋದಿಯವರಲ್ಲಿದೆ. ಈ ರೀತಿಯ ಹೆಜ್ಜೆ ಬಿಜೆಪಿಗೆ ಗುಜರಾತ್, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಪಕ್ಷಕ್ಕೆ ವರವಾಗಿದೆ. ಇದನ್ನೇ ಇಡೀ ರಾಷ್ಟ್ರದಲ್ಲೂ ಅನ್ವಯ ಮಾಡಿಕೊಳ್ಳಿ ಎನ್ನುವುದು ಮೋದಿ ಸೂಚನೆ.
ಇವರೇನ್ ಮಾಡ್ತಾರೆ?
ಆದರೆ ರಸ್ತೆ, ಗುಂಡಿ, ಸಮಸ್ಯೆ, ಅಭಿವೃದ್ಧಿಯನ್ನೆಲ್ಲ ಸೈಡಿಗೆ ಹಾಕಿ. ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುವುದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ. ನನಗೆ ಮುಸ್ಲಿಮರ ಮತಗಳೇ ಬೇಡ ಎನ್ನುವ ಮಾಜಿ ಡಿಸಿಎಂ ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ್ ಮೊದಲಾದವರು ಎಲ್ಲಿಗೆ ಹೋಗಬೇಕು? ಸಾಮರಸ್ಯದ ಮಾತುಗಳನ್ನು ಬಿಟ್ಟು ಕೆಣಕುವ ಮಾತುಗಳನ್ನೇ ಆಡುವ ಪ್ರತಾಪ್ ಸಿಂಹ, ಸಿ.ಟಿ.ರವಿ ಮೊದಲಾದವರು ಏನು ಮಾಡಬೇಕು ಎನ್ನುವುದು ಪ್ರಶ್ನೆ. ನೋಡೋಣ.. ಏನ್ ಮಾಡ್ತಾರೆ?



