ಇನ್ಮೇಲೆ ಎಲೆಕ್ಷನ್ ಸ್ಪರ್ಧೆ ಮಾಡಲ್ಲ. ಹೀಗೊಂದು ತೀರ್ಮಾನ ಪ್ರಕಟಿಸಿದ್ದಾರೆ ಗೀತಾ ಶಿವರಾಜ್ ಕುಮಾರ್. ಆದರೆ, ಪರಿಸ್ಥಿತಿ ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಎಂಬಂತಾಗಿದೆ. ಏಕೆಂದರೆ ದೊಡ್ಮನೆಯಿಂದ ಗೀತಾ ರಾಜಕೀಯಕ್ಕೆ ಬರುವುದು ಶಿವಣ್ಣ ಹಾಗೂ ದೊಡ್ಮನೆಯ ಅಭಿಮಾನಿಗಳಲ್ಲೇ ಬಹುತೇಕರಿಗೆ ಇಷ್ಟ ಇರಲಿಲ್ಲ. ಯಾವ ಮಟ್ಟಿಗೆ ಎಂದರೆ ಆಭಿಮಾನಿ ದೇವರುಗಳಲ್ಲಿ ಶೇ.90ಕ್ಕೂ ಹೆಚ್ಚು ಜನ ನೋ ಎಂದಿದ್ದರು. ಆದರೂ ಗೀತಾ ಶಿವರಾಜ್ ಕುಮಾರ್ ಅಖಾಡಕ್ಕೆ ಇಳಿದಿದ್ದರು.
ಈಗ ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇದು ಗೀತಾ ಶಿವರಾಜ್ ಕುಮಾರ್ ಅವರ ಘೋಷಣೆ ಮತ್ತು ನಿರ್ಧಾರ ಅಭಿಮಾನಿಗಳು ಮತ್ತೆ ಪ್ರಶ್ನೆ ಮಾಡೋ ಹಾಗೆ ಮಾಡಿದೆ. ಗೀತಾ ಅವರೀಗ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ ʻʻ ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ, ಆದರೆ ನಿಮ್ಮೆಲ್ಲರ ಜೊತೆಗೆ ನಿಂತಿರುತ್ತೇನೆ. ಮುಂದಿನ ಚುನಾವಣೆಗೆ ಬಂದು ಕ್ಯಾಂಪೇನ್ ಮಾಡುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಿ ಮಂಜುನಾಥ ಭಂಡಾರಿಗೂ ನಾನು ತೊಂದರೆ ಕೊಡುವುದಿಲ್ಲʼʼ ಎಂದು ಘೋಷಿಸಿದ್ದಾರೆ. ಈ ತೀರ್ಮಾನ ಈಗ ಯಾಕೆ.. ಎನ್ನುವುದು ಅಭಿಮಾನಿ ದೇವರುಗಳ ಪ್ರಶ್ನೆ.
ಅಂದಹಾಗೆ ಗೀತಾ ಅವರು ಈ ಹಿಂದೆ ಒಮ್ಮೆ ಜೆಡಿಎಸ್ʻನಿಂದ, ಮತ್ತೊಮ್ಮೆ ಕಾಂಗ್ರೆಸ್ʻನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಎರಡೂ ಚುನಾವಣೆಗಳಲ್ಲಿ ಸೋತಿದ್ದಾರೆ. ಗೀತಾ ಅವರ ಚುನಾವಣೆ ರಾಜಕೀಯಕ್ಕೆ ಇಳಿದಾಗ ಡಾ.ರಾಜ್ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ರಾಜಕೀಯಕ್ಕೆ ಬರುವುದು ಪತ್ನಿಯ ಆಸೆ. ತಪ್ಪೇನಿದೆ ಎಂದು ಹೇಳಿದ್ದ ಶಿವಣ್ಣ, ಗೀತಾ ಅವರ ಪರ ಪ್ರಚಾರವನ್ನೂ ಮಾಡಿದ್ದರು. ಆದರೆ ಗೆಲುವು ಸಿಕ್ಕಿರಲಿಲ್ಲ.
ಶಿವಣ್ಣ ಅವರನ್ನು ಎಲ್ಲಿ ಹೋದರೂ ಮುತ್ತಿಕೊಳ್ಳುವ ಜನ ಚುನಾವಣಾ ಪ್ರಚಾರಕ್ಕೆ ಹೋದಾಗ ದುಡ್ಡು ಕೇಳಿದ್ದರಂತೆ. ಅಭಿಮಾನಿಗಳು ಎನಿಸಿಕೊಂಡವರೇ ಹಾಗೆ ವರ್ತಿಸುವುದನ್ನು ನೋಡಿ ಶಾಕ್ ಆಗಿದ್ದ ಶಿವಣ್ಣ ʻರಾಜಕೀಯ ಹೀಂಗೂ ಇರುತ್ತಾʼ ಎಂದು ಕೇಳಿಕೊಂಡಿದ್ದರು. ಗೀತಾ ಅವರು ಸೋತಿದ್ದು ತಂದೆ ಬಂಗಾರಪ್ಪನವರ ಕ್ಷೇತ್ರದಲ್ಲಿ.
ಬಂಗಾರಪ್ಪ ಅವರ ಮಕ್ಕಳೇ ಒಬ್ಬೊಬ್ಬರು ಒಂದೊಂದು ಪಕ್ಷದಲ್ಲಿದ್ದಾರೆ. ಕುಮಾರ್ ಬಂಗಾರಪ್ಪ, ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ತೊಡೆತಟ್ಟಿ ಬಿಜೆಪಿಯಲ್ಲಿ ಸೈಡ್ ಲೈನ್ ಆಗುತ್ತಿದ್ದರೆ, ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿದ್ದುಕೊಂಡು ಒಂದಲ್ಲ ಒಂದು ಕಾಂಟ್ರವರ್ಸಿ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುತ್ತಾರೆ. ಅಲ್ಲಿಗೆ ಇಬ್ಬರೂ ಕೂಡಾ ಹಂತ ಹಂತವಾಗಿ ರಾಜಕೀಯದಲ್ಲಿ ನಗಣ್ಯರಾಗುತ್ತಿದ್ದಾರೆ ಎಂದರೆ ಆಶ್ಚರ್ಯ ಇಲ್ಲ. ಬಂಗಾರಪ್ಪನವರ ಮಕ್ಕಳಾದ ಮಾತ್ರಕ್ಕೆ ಗೆಲುವು ಸಿಕ್ಕುವುದಿಲ್ಲ. ದೊಡ್ಮನೆ ಸೇರಿದ ಮಾತ್ರಕ್ಕೆ ಅಭಿಮಾನ ದಕ್ಕುವುದಿಲ್ಲ ಎನ್ನುತ್ತಾರೆ ಫ್ಯಾನ್ಸ್.
ಗೀತಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಅಷ್ಟೇ ಹೊರತು ರಾಜಕೀಯದಿಂದ ದೂರ ಇರುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿರುತ್ತಾರೆ. ಕೇವಲ ಎಲೆಕ್ಷನ್ನಿಗೆ ನಿಲ್ಲುವುದಿಲ್ಲ. ಕಾಂಗ್ರೆಸ್ಸಿನಲ್ಲಿಯೇ ಸಕ್ರಿಯವಾಗಿರುತ್ತಾರೆ.



