ಇತ್ತೀಚೆಗೆ ಗೌಡ್ರು ಬೀಗರೂಟ ಹೋಟೆಲ್ ಹೆಸರು ಜೋರಾಗಿ ಕೇಳಿ ಬರುತ್ತಿತ್ತು. ಹೋಟೆಲ್ ಹೆಸರೇ ವಿಭಿನ್ನವಾಗಿದ್ದ ಕಾರಣ ಫೇಮಸ್ ಆಗಿತ್ತು. ಆದರೆ ಗೌಡ್ರು ಬೀಗರೂಟ ಹೋಟೆಲ್ ಮಾಲೀಕ ಅರುಣ್ ಕೊಲೆಯಾಗಿದ್ದಾರೆ. ಅರುಣ್ ಪತ್ನಿ ರಂಜಿತಾ, ಹೋಟೆಲ್ಲಿಗೆ ನೀರು ಹಾಕುತ್ತಿದ್ದ ಗಣೇಶ್ ಎಂಬುವವನನ್ನು ಪ್ರೀತಿ ಮಾಡುತ್ತಿದ್ದರು. ಅದೇ ಗಣೇಶ್ ಜೊತೆ ಸೇರಿ ಪತಿ ಅರುಣ್`ನನ್ನು ಕೊಂದು ಹಾಕಿದ್ದಾರೆ.
ಜೂನ್ 28 ರಂದು ತಲಘಟ್ಟಪುರಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಕಾರದ ಪುಡಿ ಎರಚಿ, ಕಲ್ಲು ಎತ್ತಿ ಹಾಕಿ ಕೊಂದಿದ್ದರು. ಮುಖದ ಗುರುತು ಸಿಕ್ಕಿರಲಿಲ್ಲ. ಆರೋಪಿಗಳೂ ಸಿಕ್ಕಿರಲಿಲ್ಲ. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಈಗ ಅಪರಿಚಿತ ವ್ಯಕ್ತಿ ಶವದ ಹಿಂದೆ ಅನೈತಿಕ ಸಂಬಂಧದ ಕಹಾನಿ ಬಹಿರಂಗವಾಗಿದೆ. ಮೃತ ವ್ಯಕ್ತಿಯ ಪತ್ನಿ ಪ್ರಿಯಕರನ ನಡುವಿನ ಲವ್ವಿ ಡವ್ವಿ ವಿಚಾರ ಬೆಳಕಿಗೆ ಬಂದಿದೆ. ಶವ ಯಾರದ್ದು ಎಂದು ತನಿಖೆ ನಡೆಸಿದ ಪೊಲೀಸರಿಗೆ ಅರುಣ್ (43) ಎಂಬಾತನದ್ದು ಎಂದು ತಿಳಿದುಬಂದಿದೆ. ಜೂನ್ 28 ರ ರಾತ್ರಿ 11 ಗಂಟೆಗೆ ಈತನ ಬರ್ಬರ ಹತ್ಯೆ ನಡೆದಿತ್ತು. ಹತ್ಯೆ ನಡೆಸಿ ತಲಘಟ್ಟಪುರದ ಅಜ್ಞಾತ ಸ್ಥಳದಲ್ಲಿ ಹಂತಕರು ಮೃತದೇಹವನ್ನು ಎಸೆದಿದ್ದರು.
ಅರುಣ್ ಚನ್ನಪಟ್ಟಣದವರಾಗಿದ್ದರೆ, ಹೆಂಡತಿ ರಂಜಿತಾ ಮಂಡ್ಯದವರಾಗಿದ್ದು. ಆರು ವರ್ಷದ ಹಿಂದೆ ರಂಜಿತಾ ಜೊತೆಗೆ ಮದುವೆಯಾಗಿತ್ತು. ಆರ್.ಆರ್.ನಗರದಲ್ಲಿ ಗೌಡ್ರು ಮನೆ ಬೀಗರ ಊಟ ಎಂಬ ಹೆಸರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ. ಕೊಲೆ ಹಿಂದಿನ ದಿನ ರಂಜಿತಾ ತನ್ನ ಹುಟ್ಟೂರು ಮಂಡ್ಯಗೆ ತೆರಳಿದ್ದಳು. ಈ ವೇಳೆ ಗಣೇಶ್ ಪಾರ್ಟಿ ಮಾಡೋಣ ಜೊತೆಗೆ ಹಣ ಕೊಡಿಸ್ತೀನಿ ಅಂತಾ ಅರುಣ್ ನನ್ನು ಕರೆಸಿಕೊಂಡಿದ್ದ. ಹೋಟೆಲ್ ಆರಂಭಿಸಲು ಫೈನಾನ್ಸ್ ಕೂಡಾ ಮಾಡಿದ್ದ ಗಣೇಶ್`ನ ಡಿಮ್ಯಾಂಡ್‍ಗೆ ಇಲ್ಲ ಎನ್ನಲಾಗದೆ ಅರುಣ್ ಕೂಡಾ ಹೋಗಿದ್ದ. ಅಲ್ಲದೆ ಈ ಹಿಂದೆಯೂ ಹಲವು ಬಾರಿ ಆತನೊಂದಿಗೆ ಪಾರ್ಟಿ ಮಾಡಿದ್ದ ಅರುಣ್`ಗೆ ಅನುಮಾನವೂ ಬರಲಿಲ್ಲ. ಇದಕ್ಕೂ ಮುನ್ನವೇ ಟೀಂ ರೆಡಿ ಮಾಡಿಕೊಂಡಿದ್ದ ಗಣೇಶ್ , ಅರುಣ್ ಬಂದಾಗ ಖಾರದಪುಡಿ ಎರಚಿ ಗ್ಯಾಂಗ್ ಜೊತೆಗೆ ಸೇರಿ ಹತ್ಯೆ ಮಾಡಿದ್ದಾನೆ. ಸುಮಾರು 20 ಬಾರಿ ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಪೊಲೀಸರು ಮೃತ ಅರುಣ್ ಪತ್ನಿ ರಂಜಿತಾ, ಪ್ರಿಯಕರ ಗಣೇಶ್ ಸೇರಿ ಐವರನ್ನು ಬಂಧಿಸಿದ್ದಾರೆ. ಶಿವಾನಂದ, ದೀಪು, ಶರತ್ ಬಂಧಿತ ಆರೋಪಿಗಳಾಗಿದ್ದಾರೆ.



