ನಿನ್ನ ರೇಪ್ ಮಾಡಿ ಬಿಡ್ತೀವಿ.. ನಿನ್ನ ಕೊಲೆ ಮಾಡಿ ಬಿಸಾಕ್ತೀವಿ.. ಎಂದೆಲ್ಲ ಪೋಸ್ಟ್ ಹಾಕಿದ್ದರು ಕೆಲವು ದರ್ಶನ್ ಫ್ಯಾನ್ಸ್. ಈಗ ಗಢಗಢನೆ ನಡುಗುತ್ತಿದ್ದಾರೆ. ಯಾಕೆಂದ್ರೆ.. ಪೋಸ್ಟ್, ಕಮೆಂಟ್ ಡಿಲೀಟ್ ಮಾಡಿದ್ರೂ ಅರೆಸ್ಟ್ ಆಗೋದು ತಪ್ಪಲ್ಲ ಅನ್ನೋದು ಖಾತ್ರಿಯಾಗಿ ಹೋಗಿದೆ. ಕೆಲವರು ತಂಗಿ, ತಾಯಂದಿರ ಕೈಲಿ ಗೊತ್ತಿಲ್ದೆ ನಮ್ ಹುಡುಗ ತಪ್ ಮಾಡಿದ್ದಾನೆ. ಇದೊಂದ್ಸಲ ಕ್ಷಮಿಸಿ ಬಿಡಿ ಮೇಡಂ.. ತಪ್ಪಾಗೋಯ್ತು.. ನಿಮ್ಮ ಹೊಟ್ಟೆಗೆ ಹಾಕ್ಕೊಳ್ಳಿ ಮೇಡಂ.. ಅಂತೆಲ್ಲ ರಮ್ಯಾಗೆ ಮೆಸೇಜ್ ಮಾಡ್ತಿದ್ದಾರೆ. ಆದರೆ.. ರಮ್ಯಾ ಮನಸು ಕರಗುತ್ತಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್‌ಗೆ ಭವಿಷ್ಯ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ನಿಂತಿದೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್ ಕ್ರಮದ ಬಗ್ಗೆ ಸುಪ್ರೀಂ ತೀರ್ಪು ಬರುವುದು ಇನ್ನೂ ಬಾಕಿ ಇದೆ. ಹೀಗಿರುವಾಗಲೇ.. ನಟಿ ರಮ್ಯಾ ಅವರ ಒಂದು ಪೋಸ್ಟಿಗೆ ಕೆಟ್ಟಾ ಕೊಳಕ ಕಮೆಂಟ್ಸ್ ಹಾಕಿದ್ದವರಿಗೆ ಭಯ ಶುರುವಾಗಿದೆ. ಕೆಲವರು ತಮ್ಮ ತಾಯಿ, ತಂಗಿ, ಅಕ್ಕಂದಿರಿಂದ ರಮ್ಯಾಗೆ ಪರ್ಸನಲ್ ಮೆಸೇಜ್ ಮಾಡಿ, ನಿಮ್ಮ ತಮ್ಮ ಅಂದ್ಕೊಂಡು ಕ್ಷಮಿಸಿಬಿಡಿ, ಇನ್ ಮುಂದೆ ನಿಮ್ಮ ಅಣ್ಣನ ತರ (ಆ ಅಭಿಮಾನಿಯ ವಯಸ್ಸು ಕೂಡಾ 40 ದಾಟಿರಬಹುದೇ..) ಅಂದ್ಕೊಂಡು ಕ್ಷಮಿಸಿಬಿಡಿ.. ನಂಗೆ ಅಪ್ಪ ಇಲ್ಲ, ಅಮ್ಮ ಮಾತ್ರ. ಅವರನ್ನ ನಾನೇ ನೋಡ್ಕೋಬೇಕು.. ನೀವು ಕ್ಷಮಿಸಲಿಲ್ಲ ಅಂದ್ರೆ.. ಅರೆಸ್ಟ್ ಆಗಿ ಮರ್ಯಾದೆ ಹೋಗುತ್ತೆ. ಕುಟುಂಬ ಬೀದಿಗೆ ಬರುತ್ತೆ ಅಂತೆಲ್ಲ ಮೆಸೇಜ್ ಹಾಕಿದ್ದಾರೆ. ರಮ್ಯಾ ಹೃದಯ ಕರಗುತ್ತಿಲ್ಲ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ರಮ್ಯಾ ಟ್ವೀಟ್ ಹಾಕಿದ್ದೇ ತಡ.. ಕೆಲವರು ರೇಪ್ ಮಾಡ್ತೀನಿ, ಕೊಲೆ ಮಾಡ್ತೀನಿ ಅಂತೆಲ್ಲ ಕಮೆಂಟ್ಸ್ ಹಾಕಿದ್ದರು. ರಮ್ಯಾ ಸೈಬರ್ ಕ್ರೈಂಗೆ ದೂರು ಕೊಟ್ಟ ನಂತರವೂ ಕೆಲವರು ಕಮೆಂಟ್ಸ್ ಮಾಡ್ತಾನೇ ಇದ್ರು. ಈಗ ಮೂವರು ಅರೆಸ್ಟ್ ಆಗಿದ್ದಾರೆ. ರಮ್ಯಾ ಕೊಟ್ಟಿದ್ದು 43 ಪೇಜುಗಳ ವಿವರ. ಆದರೆ.. ಆ ಅಕೌಂಟುಗಳ ಜೊತೆಗೆ ಇನ್ನೂ ಕೆಲವು ಅಕೌಂಟ್ಸ್ ಸೇರಿಸಿ, ಒಟ್ಟು 48 ಅಕೌಂಟ್ಸ್ ಡೀಟೈಲ್ಸ್ ಕೇಳಿದ್ದಾರೆ ಪೊಲೀಸರು.
ಇನ್‌ಸ್ಟಾಗ್ರಾಂಗೆ 48 ಮಂದಿಯ ಡೀಟೈಲ್ಸ್ ಕೇಳಿದ್ದಾರೆ. ಕಾರಣ.. ಅಷ್ಟೂ ಜನ ತಮ್ಮ ಖಾತೆಗಳನ್ನೇ ಡಿಲೀಟ್ ಮಾಡಿದ್ದಾರೆ. ಆದರೆ.. URL ಲಿಂಕ್ ಪೊಲೀಸರ ಬಳಿ ಇದೆ. ಈ ಮಾಹಿತಿ ಇಟ್ಟುಕೊಂಡೇ ಪೊಲೀಸರು ಪತ್ತೆ ಮಾಡಲಿದ್ದಾರೆ. URL ಲಿಂಕ್‌ನ್ನು ನಾವು ನೀವು ಡಿಲೀಟ್ ಮಾಡಬಹುದು. ಅದು ಸಾಮಾನ್ಯವಾಗಿ ಹುಡುಕಿದರೆ ಸಿಗುವುದಿಲ್ಲ. ಅದೂ ಸತ್ಯ. ಆದರೆ.. ಡಿಲೀಟ್ ಮಾಡಿದ್ದರೂ.. ಆ ಖಾತೆಯ ಡೀಟೈಲ್ಸ್, ಕಂಪೆನಿಯವರ ಬಳಿ ಸ್ಟೋರ್ ಆಗಿರುತ್ತದೆ. ಪೊಲೀಸರಲ್ಲಿರುವ ಕೆಲವು ಬುದ್ದಿವಂತರೂ ಆರಾಮವಾಗಿ ಡೀಟೈಲ್ಸ್ ತೆಗೆದುಬಿಡುತ್ತಾರೆ. ಆದರೆ.. ಕಾನೂನುಬದ್ಧವಾಗಿಯೇ ಆಗಲಿ ಎಂದು ಹೊರಟಿರುವ ಪೊಲೀಸರು, ಇನ್ಸ್‌ಸ್ಟಾಗ್ರಾಂನವರ ಬಳಿಯಿಂದಲೇ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಕುರಿತು ನಟಿ ರಮ್ಯಾ ʻʻತಪ್ಪು ಮಾಡಿದವರು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರ ಘನತೆಗೆ ಧಕ್ಕೆ ತಂದವರನ್ನು ಬಂಧಿಸುವ ಕೆಲಸ ಆಗಿದೆʼʼ ಎಂದು ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಹಲವು ಸೆಲಬ್ರಿಟಿಗಳು, ಪೊಲೀಸರು ಹಾಗೂ ಮಾಧ್ಯಮಗಳೂ ಕೂಡಾ ಈ ರೀತಿಯ ಕಮೆಂಟ್ಸ್ ಹಾಕುವುದರಿಂದ ಅಪಾಯ ಎಂದು ಹಲವು ಬಾರಿ ಎಚ್ಚರಿಸುತ್ತಲೇ ಬಂದಿದ್ದವು. ಆದರೆ.. ಹಾಗೆ ಎಚ್ಚರಿಕೆಯ ಮಾತು ಹೇಳಿದವರಿಗೇ ಕೆಟ್ಟಾ ಕೊಳಕ ಕಮೆಂಟ್ಸ್ ಹಾಕಲಾಗಿತ್ತು. ಈಗ ಪಾಠ ಕಲಿಯುವ ಸಮಯ ಹತ್ತಿರವಾಗಿದೆ.
ಪ್ರತಿಯೊಬ್ಬರ ತಾಳ್ಮೆಗೂ ಒಂದು ಮಿತಿ ಇರುತ್ತದೆ. ರಮ್ಯಾ ಕೂಡಾ ಅಷ್ಟೇ. ಈ ಬಾರಿಯೂ ಕೂಡಾ ಈ ರೀತಿ ಮಾಡುವುದು ತಪ್ಪು ಎಂಬ ಆಕ್ರೋಶದಲ್ಲಿಯೇ ಪೋಸ್ಟ್ ಹಾಕಿದ್ದರು. ರಮ್ಯಾರ ಇತಿಹಾಸ ಗೊತ್ತಿದ್ದರೆ, ಅವರು ಗರಂ ಆಗಿದ್ದಾರೆ ಎಂದು ಅರ್ಥವಾಗುತ್ತಿತ್ತು. ಆದರೆ.. ಅರ್ಥವಾಗಲಿಲ್ಲ. ಈಗ ಕುಯ್ಯೋ.. ಮರ್ರೋ.. ಅಂತಿದ್ದಾರೆ.



