ವಿಧಾನಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಲೀಡರ್ ಸಿದ್ದರಾಮಯ್ಯ ಕೋಲಾರದಲ್ಲಿಯೇ ನಿಲ್ಲುವುದು ಖಚಿತವಾಗಿವೆ. ನಿಲ್ಲುವುದು ಕೋಲಾರದಲ್ಲಿಯೇ ಎಂದು ಘೋಷಿಸಿರುವ ಸಿದ್ದರಾಮಯ್ಯ, ಅಂತಿಮ ತೀರ್ಮಾನ ಹೈಕಮಾಂಡಿಗೆ ಬಿಟ್ಟಿದ್ದು ಎಂದೇನೋ ಹೇಳಿದ್ದಾರೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೂ ಸಿದ್ದರಾಮಯ್ಯ ಘೋಷಣೆ ಅಚ್ಚರಿ ಮೂಡಿಸಿದೆ.


ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ರಮೇಶ್ ಕುಮಾರ್ ಸೇರಿದಂತೆ ಪಕ್ಷದ ಮುಖಂಡರ ಆಗ್ರಹದ ಹಿನ್ನೆಲೆಯಲ್ಲಿ ಕೋಲಾರದಲ್ಲಿಯೇ ನಿಲ್ಲುತ್ತಿದ್ದೇನೆ. ಈ ಬಾರಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಎಂದಿದ್ದಾರೆ ಸಿದ್ದರಾಮಯ್ಯ. ಕೋಲಾರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಲಿರುವುದು ಬಹುತೇಕ ವರ್ತೂರು ಪ್ರಕಾಶ್. ಮೊದಲಿನಿಂದಲೂ ಸಿದ್ದು ವಿರುದ್ಧ ಹೂಂಕರಿಸುತ್ತಿರುವ ವರ್ತೂರು ಪ್ರಕಾಶ್ ಕೂಡಾ ಕುರುಬರೇ.


ಸಿದ್ದರಾಮಯ್ಯ ನನಗೆ ಎದುರಾಳಿಯೇ ಅಲ್ಲ. ನಿಜವಾಗಿ ಇಲ್ಲಿ ಸ್ಪರ್ಧೆ ನಡೆಯುವುದು ನನ್ನ ಹಾಗೂ ಜೆಡಿಎಸ್ ಅಭ್ಯರ್ಥಿ ಮಧ್ಯೆ ಎಂದಿರೋ ವರ್ತೂರು ಸಿದ್ದರಾಮಯ್ಯ ಮೈಸೂರು ಹುಲಿ ಎನ್ನುತ್ತಿದ್ದಾರೆ. ಅವರಿಗೆ ಹುಲ್ಲು ತಿನ್ನಿಸಿ ಕಳಿಸುತ್ತೇನೆ ಎಂದು ಗುಡುಗಿದ್ದಾರೆ. ಅಹಿಂದ ಮುಖಂಡ ನಾನು. ಮಗನ ಮೇಲಿನ ವ್ಯಾಮೋಹಕ್ಕೆ ಇಲ್ಲಿಗೆ ಬಂದಿದ್ದಾರೆ. ಸಿದ್ದರಾಮಯ್ಯ ಪರ ಮತ ಕೇಳೋಕೆ ಯಾರಿದ್ದಾರೆ ಎಂದಿರುವ ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಅವರನ್ನು ಸೋಲಿಸೋಕೆ ಅವರ ಪಕ್ಷದೊಳಗಿನ ಬಣ ರಾಜಕೀಯವೇ ಸಾಕು. ಮುನಿಯಪ್ಪ ಇದ್ದಾರಲ್ಲ, ಅವರು ಕಾಂಗ್ರೆಸ್‍ನಲ್ಲೇ ಇರುತ್ತಾರೆ. ಯಾರನ್ನು ಸೋಲಿಸಬೇಕೋ ಅವರನ್ನು ಸೋಲಿಸುತ್ತಾರೆ ಎಂದಿದ್ದಾರೆ.


ಅಂದಹಾಗೆ ಕೋಲಾರದಲ್ಲಿ ಬಣ ರಾಜಕೀಯಗಳಿಲ್ಲ ಎಂದು ಯಾರು ಏನೇ ಹೇಳಲಿ, ವಾಸ್ತವ ಬೇರೆಯೇ ಇದೆ. ಕೆ.ಎಚ್.ಮುನಿಯಪ್ಪ ಅವರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸೂಕ್ತ ಸ್ಥಾನಮಾನ ನೀಡಲಿಲ್ಲ ಎಂಬ ಆಕ್ರೋಶವೂ ಇದೆ. ಜೊತೆಗೆ ಕೋಲಾರ ಸಮಾವೇಶಕ್ಕೆ ಮುನ್ನ ಸಿದ್ದರಾಮಯ್ಯ ಸರ್ಕಸ್ ಮಾಡಿ, ಮನವೊಲಿಸಿ ಮುನಿಯಪ್ಪ ಅವರನ್ನು ಕರೆದುಕೊಂಡು ಹೋಗಿದ್ದಾರೆ.


ಇತ್ತ ಸಚಿವ ಸುನಿಲ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಿದ್ದರಾಮಯ್ಯ ಕೋಲಾರ ಸ್ಪರ್ಧೆಯನ್ನು ಟೀಕಿಸಿದ್ದಾರೆ. ಸಿದ್ದರಾಮಯ್ಯ ಒಂದು ಕ್ಷೇತ್ರದಲ್ಲಿ ಗೆಲ್ಲೋದು, ಮುಂದಿನ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಹೋಗೋದು ಸಾಮಾನ್ಯವಾಗಿಬಿಟ್ಟಿದೆ. ಕೋಲಾರದ ಜನ ಪ್ರಬುದ್ಧರು. ಅವರು ಸರಿಯಾಗಿಯೇ ಪಾಠ ಕಲಿಸುತ್ತಾರೆ ಎಂದಿದ್ದಾರೆ ಸುನಿಲ್ ಕುಮಾರ್.



