ಕಿಚ್ಚ ಸುದೀಪ್, ಕನ್ನಡದ ಸೂಪರ್ ಸ್ಟಾರ್ʻಗಳಲ್ಲಿ ಒಬ್ಬರು. ಇವರು ಮೂಲತಃ ಚಿಕ್ಕಮಗಳೂರಿನ ನರಸಿಂಹಾರಾಜ ಪುರದವರು. ನಂತರ ಶಿವಮೊಗ್ಗಕ್ಕೆ ವಲಸೆ ಬಂದವರು. ಆನಂತರ ಬೆಂಗಳೂರಿಗೆ ಶಿಫ್ಟ್ ಆದವರು. ಅಂತಹ ಸುದೀಪ್ ಅವರಿಗೂ ತುಳುನಾಡಿಗೂ ಎಲ್ಲಿಂದ ಎಲ್ಲಿಗೆ ನಂಟು.. ಕುತೂಹಲವಿದೆಯೇ..?
ಕಿಚ್ಚ ಸುದೀಪ್ ಅವರನ್ನು ಮಾತಿನಲ್ಲಿ ಸೋಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ನಗುತ್ತಾ.. ನಗಿಸುತ್ತಾ.. ಹೃದಯದೊಳಕ್ಕೇ ಕೈಹಾಕುವ ಕಿಚ್ಚ ಸುದೀಪ್ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ಧಾರೆ. ಮಾತುಗಳಂತೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲೂ ತಮ್ಮ ತಾಯಿಯ ಬಗ್ಗೆ ಹೇಳಿರುವ ಮಾತು.
ಸುದೀಪ್ ಅವರ ತಾಯಿ ಸರೋಜ ಶಿವಮೊಗ್ಗದವರಾದರೂ..ಕರಾವಳಿಯವರಿಗೆ ಹತ್ತಿರದವರು. ತುಳು ಚೆನ್ನಾಗಿಯೇ ಬರುತ್ತದೆ. ನನ್ನ ಅಪ್ಪಂಗೆ ಕರ್ನಾಟಕದ ಕರಾವಳಿ ಹುಡುಗಿನೇ ಇಷ್ಟ ಆಗಿದ್ದು. ಕರಾವಳಿ ಜನ ತುಂಬ ಸ್ವಾಭಿಮಾನಿಗಳು. ಇಲ್ಲಿಯ ಜನ ಅಷ್ಟು ಬೇಗ ಯಾರನ್ನು ಇಷ್ಟಪಡಲ್ಲ, ಅದ್ರು ನಿಮ್ಮ ಮನಸ್ಸಿನಲ್ಲಿ ನಂಗೆ ಜಾಗ ಕೊಟ್ಟಿದ್ದೀರಿ. ನಾನು ಗೌರವ ಪಡೆಯಲು ಬಂದಿಲ್ಲ. ನಿಮ್ಮ ಪ್ರೀತಿಗೆ ಬಂದಿದ್ದೇನೆ. ನನ್ನ ತಾಯಿ ಕರಾವಳಿಯವರು. ಅವರು ಚೆನ್ನಾಗಿ ತುಳು ಮಾತಾಡ್ತಾರೆ. ನನಗೆ ತುಳು ಅಷ್ಟೊಂದು ಬರಲ್ಲ ಎನ್ನುವ ಮೂಲಕ ಸುದೀಪ್ ತುಳು ನಾಡಿನವರ ಹೃದಯ ಗೆದ್ದಿದ್ಧಾರೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸುದೀಪ್ ತಮ್ಮ ಎಂದಿನ ತಮಾಷೆಯ ಶೈಲಿಯಲ್ಲಿ ನಿರೂಪಕರು ಆಗಿನಿಂದ ನಮ್ಮ ತುಳುನಾಡಿಗೆ, ನಮ್ಮ ತುಳುನಾಡಿಗೆ ಸ್ವಾಗತ ಅಂತ ನಮ್ಮನ್ನು ಹೊರಗಿನವರು ಅಂತ ಮಾಡ್ತಿದ್ದಾರೆ. ತುಳುನಾಡು ನಮ್ಮ ಕರ್ನಾಟಕದಲ್ಲಿದೆ, ಕರ್ನಾಟಕ ನಮ್ಮ ಹೃದಯದಲ್ಲಿದೆ ತಾನೇ. ಮತ್ತೆ ಮಾತ್ ಮಧ್ಯೆ ಹೆಳ್ತಾರೆ ನಾವು ಅರ್ಧ ಈ ಕಡೆಯವರು ಅಂತ ಹೇಳ್ತೀರ.. ಎಂದು ಕಿಚಾಯಿಸಿದ್ಧಾರೆ.
ಕನ್ನಡ ಚಿತ್ರರಂಗಕ್ಕೆ ಕರಾವಳಿಗರು ಬಂದು ಕನ್ನಡ ಯಾವುದು ತುಳು ಯಾವುದು ಗೊತ್ತಾಗ್ತಾ ಇಲ್ಲ. ತುಳು ಚಿತ್ರರಂಗ ಬೆಂಗಳೂರಿಗೆ ಬಂದದ್ದು ತುಂಬಾ ಖುಷಿಯಾಗಿದೆ. ಯಕ್ಷಗಾನ ಕಲೆ ಎದುರು ನಾವು ಇನ್ನೂ ಚಿಕ್ಕವರು ಎಂದಿರುವ ಸುದೀಪ್ ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಸಾಧನೆಯನ್ನು ಕೊಂಡಾಡಿದ್ದಾರೆ.
ಇತ್ತೀಚೆಗೆ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದಲ್ಲಿ ತುಳುನಾಡಿನ ವಿಶೇಷತೆಯಾದ ಯಕ್ಷಗಾನ, ಗಗ್ಗರದ ವೇಷ ತೊಟ್ಟಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ತುಳುನಾಡಿನ ಸುತ್ತಲೇ ಇದ್ದ ವಿಕ್ರಾಂತ್ ರೋಣದ ಕಥೆ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಈ ಚಿತ್ರದ ಮೂಲಕ ತುಳುನಾಡಿನವರಿಗೂ ಸಹಜವಾಗಿಯೇ ಹತ್ತಿರವಾಗಿದ್ದರು.
ತುಳು ಕನ್ನಡದ ಉಪಭಾಷೆಗಳಲ್ಲಿ ಒಂದು. ತುಳು ಮಾತನಾಡುವವರಿಗೆ ತಮ್ಮ ತುಳು ಭಾಷೆಯ ಬಗ್ಗೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಹೆಚ್ಚು. ತುಳು ಗೊತ್ತಿಲ್ಲದವರಿಗೆ ಕಿರಿಕಿರಿಯಾಗುವಷ್ಟರ ಮಟ್ಟಿಗೆ ಅಭಿಮಾನ ಮೆರೆಯುತ್ತಾರೆ. ಆದರೆ.. ಸುದೀಪ್ ತುಳುನಾಡಿನ ತಾಯಿಯ ಮಗ. ಅದನ್ನೇ ಸುದೀಪ್ ವೇದಿಕೆಯಲ್ಲಿ ಹೇಳಿಕೊಂಡಿದ್ಧಾರೆ.



