ದರ್ಶನ್ & ಗ್ಯಾಂಗ್ ದಿಢೀರ್ ಸ್ಟಾರ್ ಆದ ಈ ವ್ಯಕ್ತಿಯ ಹೆಸರು ಸಿದ್ದಾರೂಢ. ಜುಲೈ 9ರಂದು ಸನ್ನಡತೆ ಆಧಾರದ ಮೇಲೆ ಕೆಲವು ಖೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅವರಲ್ಲಿ ಚಿತ್ರದುರ್ಗದ ಸಿದ್ಧಾರೂಢ ಎಂಬ ಖೈದಿಯೂ ಇದ್ದ. ಜೈಲಿಂದ ಹೊರಬಂದ 2 ವಾರದ ಬಳಿಕ ಇದ್ದಕ್ಕಿದ್ದಂತೆ ಸ್ಟಾರ್ ಆಗಿಬಿಟ್ಟ.
ಕೊಲೆ ಕೇಸಿನಲ್ಲಿ 21 ವರ್ಷಗಳಿಂದ ಜೈಲಿನಲ್ಲಿದ್ದ ಸಿದ್ಧಾರೂಢ, ಜುಲೈ 9ರಂದು ರಿಲೀಸ್ ಆಗಿದ್ದ. ಹೊರಬಂದ 2 ವಾರದ ಬಳಿಕ ಮಾಧ್ಯಮಗಳಿಗೆ ನಟ ದರ್ಶನ್ʻನ್ನು ಜೈಲಿನಲ್ಲಿ ಭೇಟಿ ಮಾಡಿದೆ ಎಂದು ಹೇಳಿಕೆ ಕೊಟ್ಟಿದ್ದ. ಜೈಲಿನಲ್ಲಿ ದರ್ಶನ್ ಪರಿಸ್ಥಿತಿ ಹೇಗಿದೆ, ಊಟ, ಆರೋಗ್ಯ ಎಲ್ಲವೂ ಸರಿ ಇದೆಯಾ ಎಂಬ ಬಗ್ಗೆ ಮಾಹಿತಿ ಇಲ್ಲದೆ ಕಾದು ಕುಳಿತಿದ್ದವರಿಗೆ ಸಿದ್ದಾರೂಢ ʻಭರಪೂರ ಆಹಾರʼ ಕೊಟ್ಟಿದ್ದ.
ತಾನು ದರ್ಶನ್ ಅಭಿಮಾನಿ ಎಂದೂ, ತನ್ನ ಬಳಿ ದರ್ಶನ್ʻರ ಎಲ್ಲ ಸಿನಿಮಾಗಳ ಪೋಸ್ಟರ್ ಸಂಗ್ರಹ ಇದೆ ಎಂದೂ ಹೇಳಿದ್ದ. ಕಥೆ ಕೇಳಿದವರು ಆಗಲೇ ಈತನ ಬಗ್ಗೆ ಅನುಮಾನ ಪಟ್ಟಿದ್ದರು. ಏಕೆಂದರೆ.. ಸಿದ್ದಾರೂಢ 21 ವರ್ಷ ಜೈಲಲ್ಲಿದ್ದ ವ್ಯಕ್ತಿ. ದರ್ಶನ್ ಹೀರೋ ಆದ ಮೊದಲ ಸಿನಿಮಾ ಬಂದಿದ್ದೇ 2002ರಲ್ಲಿ. ಅಲ್ಲದೆ ಕರಿಯ ಚಿತ್ರದ ಶೂಟಿಂಗ್ ಕೂಡಾ ನೋಡಿದ್ದೆ ಎಂದು ಹೇಳಿದ್ದ. ಕರಿಯ ರಿಲೀಸ್ ಆಗಿದ್ದು 2002ರಲ್ಲಿ. ಹೇಗೇ ನೋಡಿದರೂ.. ಸರಿಯಾಗಿ 22 ವರ್ಷಗಳ ಹಿಂದೆ.
21 ವರ್ಷ ಜೈಲಲ್ಲೇ ಇದ್ದವನು ಅದು ಹೇಗೆ ದರ್ಶನ್ʻರ ಎಲ್ಲ ಚಿತ್ರಗಳ ಪೋಸ್ಟರ್ ಇಟ್ಟುಕೊಳ್ಳೋಕೆ ಸಾಧ್ಯ, ಎಲ್ಲ ಸಿನಿಮಾಗಳನ್ನೂ ನೋಡೋದಾದರೂ ಹೇಗೆ ಸಾಧ್ಯ ಎಂಬ ಪ್ರಶ್ನೆಗಳೆದ್ದಿದ್ದವು. ಬಹುಶಃ ಜೈಲಿನಲ್ಲಿ ಸಿನಿಮಾ ನೋಡೋದಕ್ಕೆ ವ್ಯವಸ್ಥೆ ಇದೆಯೇನೋ ಅಂದ್ಕೊಂಡು ಸುಮ್ಮನಾಗಿದ್ದರು. ಆದರೆ.. ಈಗ ಪೊಲೀಸರೇ ಅಂತಾದ್ದೊಂದು ಅನುಮಾನ ಎತ್ತಿದ್ದಾರೆ.
“ನಾನು ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದೆ, ಅವರಿಗೆ ಧ್ಯಾನ ಹೇಳಿಕೊಟ್ಟೆ. 10 ನಿಮಿಷ ಧ್ಯಾನ ಮಾಡಿಸಿದೆ. ದರ್ಶನ್ ಕೋಣೆಯಲ್ಲಿ ಎಷ್ಟು ಪುಸ್ತಕಗಳಿವೆ ಗೊತ್ತೇ” ಎಂದೆಲ್ಲಾ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದ ಸಿದ್ಧಾರೂಢ, ಎಲ್ಲ ಪುಸ್ತಕಗಳ ಹೆಸರನ್ನೂ ಹೇಳಿದ್ದ. ಮಾಧ್ಯಮಗಳಲ್ಲಿ ಸಿದ್ಧಾರೂಢ ನೀಡಿದ ಸಂದರ್ಶನಗಳನ್ನು ಗಮನಿಸಿದ ಪೊಲೀಸರು, ಕೇಂದ್ರ ಕಾರಾಗೃಹದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ವಿಐಪಿ ಸೆಲ್‌ನಲ್ಲಿರುವ ದರ್ಶನ್ ಅವರನ್ನು ಇತರೆ ಕೈದಿಗಳು ಸಂಪರ್ಕ ಮಾಡಿದ್ದಾರೆಯೇ ಎಂದು ವಿಚಾರಿಸಿದ್ದಾರೆ.
ಮೇಲಧಿಕಾರಿಗಳ ಪ್ರಶ್ನೆಗೆ , ಆ ರೀತಿ ಯಾರನ್ನೂ ಕೂಡ ದರ್ಶನ್ ಭೇಟಿ ಮಾಡಲು ಅವಕಾಶ ಕಲ್ಪಿಸಿಲ್ಲ ಎಂಬ ಉತ್ತರ ಸಿಕ್ಕಿದೆ. ಅದಾದ ಮೇಲೆ ಸಿದ್ಧಾರೂಢಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಸಿದ್ದಾರೂಢ ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿದ್ಧಾರೂಢ ಇದ್ದಿದ್ದು ಕೆಲವೇ ಗಂಟೆಗಳು ಮಾತ್ರ. ಬಳ್ಳಾರಿ ಜೈಲಿನಲ್ಲಿದ್ದ ಸಿದ್ಧಾರೂಢನನ್ನು ಜುಲೈ 8ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಕರೆತರಲಾಗಿತ್ತು. ಜುಲೈ 9ರಂದು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಹೀಗಿರುವಾಗ ಅದ್ಯಾವ ಗಳಿಗೆಯಲ್ಲಿ ವಿಐಪಿ ಸೆಲ್‌ನಲ್ಲಿ ಇರುವ ದರ್ಶನ್‌ರನ್ನು ಸಿದ್ಧಾರೂಢ ಭೇಟಿ ಮಾಡಿದ್ರು ಅನ್ನೋದು ಪ್ರಶ್ನೆ ಉದ್ಭವವಾಗಿತ್ತು.
ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿದ್ಧಾರೂಢ, “ನಾನು ಕೂಡ ದರ್ಶನ್ ಅಭಿಮಾನಿ. ಜೈಲಿನಲ್ಲಿದ್ದ ಅವರನ್ನು ಒಂದ್ಸಲ ಭೇಟಿ ಮಾಡಿಸಿ ಅಂತಾ ಅಧಿಕಾರಿಗಳಿಗೆ ಕೇಳ್ಕೊಂಡಿದ್ದೆ. ಅವರು ನನಗೆ ದರ್ಶನ್‌ರನ್ನು ಭೇಟಿ ಮಾಡಲು ಅವಕಾಶ ನೀಡಿದರು. ದರ್ಶನ್ ಅವರನ್ನ ಕಂಡಕೂಡಲೇ ಶೇಕ್‌ಹ್ಯಾಂಡ್ ಮಾಡಿದೆ. ನನ್ನ ಜೊತೆ ದರ್ಶನ್ ಚೆನ್ನಾಗಿ ಮಾತನಾಡಿದ್ರು. ನನಗೆ ತಿನ್ನಲು ಬಿಸ್ಕತ್ ಕೊಟ್ರು. ದರ್ಶನ್ ಸಣ್ಣ ಆಗಿದ್ದಾರೆ, ಡಲ್ ಆಗಿದ್ದಾರೆ. ಅವರಿಗೆ ಪಶ್ಚಾತ್ತಾಪ ಆಗಿವಂತೆ ಕಾಣಿಸುತ್ತದೆ. ಜೈಲು ಅನ್ನೋದು ನರಕ. ಅದಕ್ಕಾಗಿ ಅವರಿಗೆ ಧ್ಯಾನ ಮಾಡಬೇಕು ಎಂದು ಹೇಳಿ, 10 ನಿಮಿಷ ಧ್ಯಾನ ಮಾಡಿಸಿದೆ” ಎಂದೆಲ್ಲ ಹೇಳಿದ್ದ.
ಆದರೆ ಈತನ ಮಾತುಗಳ ಬಗ್ಗೆ ಸಂಶಯಗಳೂ ಎದ್ದಿದ್ದವು. ಈಗ ದರ್ಶನ್ ಜೈಲಿನಲ್ಲಿ ಇದ್ದದ್ದೇ 12 ನಿಮಿಷವಂತೆ. ಆ 12 ನಿಮಿಷದಲ್ಲಿ ಮಾತನಾಡಿ, ಧ್ಯಾನವನ್ನೂ ಹೇಳಿಕೊಟ್ಟು, ದರ್ಶನ್ ಕೋಣೆಯಲ್ಲಿದ್ದ ಎಲ್ಲ ಪುಸ್ತಕಗಳು, ಲೇಖಕರ ಹೆಸರನ್ನೂ ನೆನಪಿಟ್ಟುಕೊಂಡು ಬಂದು.. ಎರಡು ವಾರದ ನಂತರ ಹೇಳೋದಕ್ಕೆ ಗೆ ಸಾಧ್ಯ.. ಅಲ್ಲದೆ ಸಿದ್ದಾರೂಢ ಒಂದೊಂದು ಚಾನೆಲ್ಲಿನಲ್ಲಿ ಒಂದೊಂದು ಕಥೆ ಹೇಳುತ್ತಿದ್ದ. ಈತನನ್ನು ಹಲವರು ನಂಬಿದ್ದರೂ, ದರ್ಶನ್ ಕಟ್ಟಾ ಅಭಿಮಾನಿಗಳೇ ನಂಬಿರಲಿಲ್ಲ. ಈಗ ಒಂದೊಂದೇ ಹೊರಬರುತ್ತಿದೆ.



