ಚುನಾವಣೆಯ ಮೊದಲನೇ ಹಂತ ಶುರುವಾಗುವ ಎರಡು ದಿನಕ್ಕೆ ಮುಂಚೆ ದೇಶದಲ್ಲಿ ಚುನಾವಣಾ ಸಮೀಕ್ಷೆ ನಿಷೇಧವಾಗುತ್ತದೆ. ಯಾವುದೇ ಚಾನೆಲ್, ಪತ್ರಿಕೆ, ಸಂಸ್ಥೆಗಳು ಸಮೀಕ್ಷೆ ಮಾಡಬಹುದು, ಆದರೆ.. ಅವುಗಳನ್ನು ಪ್ರಕಟ ಮಾಡುವಂತಿಲ್ಲ. ಜೂನ್ 1ಕ್ಕೆ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿಯಲಿದೆ. ಅದೇ ದಿನ ಸಂಜೆಯ ಹೊತ್ತಿಗೆ ಎಕ್ಸಿಟ್ ಪೋಲ್ ಅಬ್ಬರಿಸಲಿವೆ. ಈಗಾಗಲೇ ಎಲ್ಲ ಟಿವಿ ಚಾನೆಲ್ಲುಗಳಲ್ಲೂ ಎಕ್ಸಿಟ್ ಪೋಲ್ ನಮ್ಮಲ್ಲೇ ನೋಡಿ ಎಂಬ ಪ್ರೋಮೋಗಳು ಪ್ರಸಾರವಾಗುತ್ತಿವೆ. ಇಷ್ಟಕ್ಕೂ ಈ ಎಕ್ಸಿಟ್ ಪೋಲ್ ಹೇಗೆ ನಡೆಯುತ್ತೆ..?
ಈ ಎಕ್ಸಿಟ್ ಪೋಲ್ ಪ್ರಕಟಿಸುವುದಕ್ಕೂ ಆಯೋಗದ ನಿರ್ಬಂಧ ಇದೆ. ಮತಗಟ್ಟೆಗಳಲ್ಲಿ ಮತದಾನ ಮುಗಿದ ಅರ್ಧ ಗಂಟೆಯ ನಂತರ ಸಮೀಕ್ಷೆಗಳು ಪ್ರಕಟವಾಗುತ್ತವೆ. ಅದಕ್ಕೆ ಮುನ್ನ ಪ್ರಸಾರ ಮಾಡುವಂತಿಲ್ಲ. ಕೊನೆಯ ಬೂತ್ ಮುಚ್ಚಿದ 30 ನಿಮಿಷಗಳ ನಂತರ ಸಮೀಕ್ಷೆ ಪ್ರಸಾರವಾಗಬೇಕು. ಸಾಮಾನ್ಯವಾಗಿ ಎಲ್ಲ ಟಿವಿ ಚಾನೆಲ್ಲಗಳಲ್ಲಿ ಆರಂಭದಲ್ಲಿ ಕಳೆದ ಚುನಾವಣೆಯ ಫಲಿತಾಂಶವನ್ನೇ ವಿಶ್ಲೇಷಣೆ ಮಾಡುತ್ತಿರುತ್ತಾರೆ. ಅದಕ್ಕೆ ಇದೇ ಕಾರಣ. ಮತದಾನದ ಅವಧಿ ಮುಕ್ತಾಯದ ಮೊದಲು ಭಾರತದ ಯಾವುದೇ ಭಾಗದಲ್ಲಿ ಎಕ್ಸಿಟ್ ಪೋಲ್‌ಗಳನ್ನು ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಸಾಧ್ಯವಿಲ್ಲ ಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 126A ಪ್ರಕಾರ, ” ಚುನಾವಣಾ ಆಯೋಗವು ಸೂಚಿಸಬಹುದಾದಂತಹ ಅವಧಿಯಲ್ಲಿ ಎಕ್ಸಿಟ್ ಪೋಲ್‌ನ ಫಲಿತಾಂಶವನ್ನು ಯಾವುದೇ ವ್ಯಕ್ತಿ ಯಾವುದೇ ಎಕ್ಸಿಟ್ ಪೋಲ್ ನಡೆಸುವಂತಿಲ್ಲ. ಅದೇ ರೀತಿ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಅದನ್ನು ಪ್ರಕಟಿಸಬಾರದು ಅಥವಾ ಪ್ರಚಾರ ಮಾಡುವಂತಿಲ್ಲ.
ಎಕ್ಸಿಟ್ ಪೋಲ್ ಅಭಿಪ್ರಾಯ ಹೇಗೆ ಸಂಗ್ರಹ ಮಾಡ್ತಾರೆ..?
ಮತದಾನ ಮುಗಿದ ಕೂಡಲೇ ಯಾವ ಪಕ್ಷ ಗೆಲ್ಲುತ್ತದೆ ಎಂಬ ಕುತೂಹಲ ಜನರಲ್ಲಿ ಇದ್ದೇ ಇರುತ್ತದೆ. ಈ ಕುತೂಹಲದಿಂದಾಗಿಯೇ ಟಿವಿ ಮಾಧ್ಯಮಗಳು ಈ ಬಗ್ಗೆ ಸುಳಿವು ನೀಡಲು ಶುರು ಮಾಡುತ್ತವೆ. ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಇಂಗ್ಲಿಷ್‌ನಲ್ಲಿ ಒಪೀನಿಯನ್ ಪೋಲ್ ಅಂತಾರೆ. ಎಕ್ಸಿಟ್ ಪೋಲ್ʻನ್ನ ಚುನಾವಣೋತ್ತರ ಸಮೀಕ್ಷೆ ಅಂತ ಕರೀತಾರೆ.
ಚುನಾವಣೆಗೆ ಮೊದಲು ಜನಾಭಿಪ್ರಾಯ ಸಂಗ್ರಹಿಸಿ ಅದರ ಲೆಕ್ಕಾಚಾರ ಆಧರಿಸಿ ಫಲಿತಾಂಶ ಹೀಗಿರಬಹುದು ಎಂದು ಊಹಿಸಿ ಹೇಳುವಂಥದ್ದು ಚುನಾವಣಾ ಪೂರ್ವ ಸಮೀಕ್ಷೆ. ಚುನಾವಣೆ ಮುಗಿದ ನಂತರ ಅಭಿಪ್ರಾಯ ಸಂಗ್ರಹಿಸಿ ಗೆಲುವು-ಸೋಲಿನ ಲೆಕ್ಕಾಚಾರ ಹೇಳೋದು ಚುನಾವಣೋತ್ತರ ಸಮೀಕ್ಷೆ.
ಮೊದಲೆಲ್ಲ ಮತಗಟ್ಟೆಗಳಿಗೆ ಹೋಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. ಈಗ ಟೆಕ್ನಾಲಜಿ ಬಳಸಿಕೊಳ್ಳಲಾಗಿದೆ. ಮತದಾರರ ಮೊಬೈಲ್‌ಗೆ ಸ್ವಯಂಚಾಲಿತ ಕರೆ ಮಾಡಿ ಅಭಿಪ್ರಾಯ ಸಂಗ್ರಹಿಸ್ತಾರೆ. ಈ ಸಮೀಕ್ಷೆ ನಡೆಸಲು ಖಾಸಗಿ ಸಂಸ್ಥೆಗಳಿದ್ದು, ಇವು ಮಾಧ್ಯಮಗಳೊಂದಿಗೆ ಸೇರಿ ಮತದಾರರ ಅಭಿಪ್ರಾಯವನ್ನು ಸಂಗ್ರಹಿಸುತ್ತವೆ.
ಈ ರೀತಿ ಕರೆಗಳಲ್ಲಿ ಮತದಾರರಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರಗಳ ಆಯ್ಕೆ ನೀಡಲಾಗುತ್ತದೆ. ಆ ಮೂಲಕ ಮಾದರಿ ಸಂಗ್ರಹಿಸಿ ಫಲಿತಾಂಶವನ್ನು ಊಹಿಸಲಾಗುತ್ತದೆ. ಎಲ್ಲರನ್ನೂ ಸಂಪರ್ಕ ಮಾಡುವುದಿಲ್ಲ. ಆದರೆ.. ಹೆಚ್ಚು ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹಿಸಿದಷ್ಟೂ ಸಮೀಕ್ಷೆ ಹೆಚ್ಚು ಹೆಚ್ಚು ನಿಖರವಾಗಿರುತ್ತದೆ, ಅಷ್ಟೆ.
ಆ ಎಲ್ಲ ಅಭಿಪ್ರಾಯಗಳನ್ನೂ ಸಂಗ್ರಹಿಸುವಾಗ ಅಭಿಪ್ರಾಯ ನೀಡುವ ಮತದಾರರ ವಯಸ್ಸು, ಲಿಂಗ, ಆರ್ಥಿಕ ಸ್ಥಿತಿ, ಧರ್ಮ, ಜಾತಿ, ಕುಟುಂಬದ ಸ್ಥಿತಿ.. ಎಲ್ಲವನ್ನೂ ಸಂಗ್ರಹ ಮಾಡಲಾಗುತ್ತದೆ. ತೀರಾ ವೈಯಕ್ತಿಕ ಎನ್ನಬಹುದಾದ ವಿವರಗಳನ್ನು ಪಡೆದುಕೊಳ್ಳುವುದಿಲ್ಲ. ಇತ್ತೀಚೆಗೆ ಸಮೀಕ್ಷೆಗಳ ನಿಖರತೆಗಾಗಿ ಹೆಚ್ಚು ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.
ಜೂನ್ 1ರಿಂದ ಜೂನ್ 3ರವರೆಗೂ ಯಾವ ನ್ಯೂಸ್ ಚಾನೆಲ್ ಆನ್ ಮಾಡಿದರೂ..ಸಮೀಕ್ಷೆಗಳದ್ದೇ ಧ್ವನಿ ಇರುತ್ತದೆ. ಜೂನ್ 4ರಂದು ರಿಸಲ್ಟ್ ಬರುತ್ತದೆ.



