ದೆಹಲಿಯಲ್ಲಿ ಆಮ್ ಆದ್ಮಿ ಮತ್ತೊಂದು ಇತಿಹಾಸ ಬರೆದಿದೆ. ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರದಲ್ಲಿದೆ. ಆದರೆ ಆ ಅಧಿಕಾರ ರಾಜ್ಯ ಸರ್ಕಾರಕ್ಕೆ ಸೀಮಿತ. ದೆಹಲಿಯಲ್ಲೇ ಸಂಸತ್ ಭವನ, ಕೇಂದ್ರ ಸರ್ಕಾರವೂ ಇರುವ ಕಾರಣ ಕೇಜ್ರಿವಾಲ್ ಅಧಿಕಾರ ವ್ಯಾಪ್ತಿಯೂ ಸೀಮಿತ. ದೆಹಲಿ ಬೇರೆ ರಾಜ್ಯಗಳ ಹಾಗಲ್ಲ.

ದೆಹಲಿಯಲ್ಲಿ ಎರಡು ಬಾರಿ ಗೆದ್ದು ಮುಖ್ಯಮಂತ್ರಿ ಪಟ್ಟಕ್ಕೇರಿದ್ದರೂ ದೆಹಲಿ ಹೆಚ್ಚೂ ಕಡಿಮೆ ಬಿಜೆಪಿ ಅಧೀನದಲ್ಲೇ ಇತ್ತು. ಏಕೆಂದರೆ ಸಂಸದರು ಬಿಜೆಪಿಯವರು. ದೆಹಲಿ ಪಾಲಿಕೆಯವರು ಬಿಜೆಪಿ. 15 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ, ದೆಹಲಿ ಪಾಲಿಕೆಯಲ್ಲಿ ಅಧಿಪತ್ಯವನ್ನೇ ಸಾಧಿಸಿತ್ತು. ಇದೇ ಮೊದಲ ಬಾರಿಗೆ ಪಾಲಿಕೆಯಲ್ಲಿ ಆಮ್ ಆದ್ಮಿ ಅಧಿಕಾರ ಹಿಡಿದಿದೆ. 250 ಕಾರ್ಪೊರೇಟರುಗಳಿರೋ ದೆಹಲಿ ಪಾಲಿಕೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದರೆ, 134 ಸ್ಥಾನ ಗಳಿಸಿರೋ ಕೇಜ್ರಿವಾಲ್ ಪಕ್ಷ ಬಹುಮತಕ್ಕೆ ಬೇಕಿರುವ 126 ಸ್ಥಾನಗಳಿಗಿಂತ ಹೆಚ್ಚು ಸ್ಥಾನ ಹೊಂದಿದೆ. ಆದರೂ.. ಮೇಯರ್ ನಮ್ಮವರೇ ಎನ್ನುತ್ತಿದೆ ಬಿಜೆಪಿ.

ಇದನ್ನು ಹೇಳಿರೋದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ. ಅವರು ಚಂಡೀಗಢದ ಉದಾಹರಣೆ ಕೊಟ್ಟಿದ್ದಾರೆ. ಚಂಡೀಗಡದಲ್ಲಿಯೂ ಅಷ್ಟೆ, ಬಹುಮತವಿಲ್ಲದಿದ್ದರೂ ಮೇಯರ್ ಬಿಜೆಪಿಯವರಿದ್ದಾರೆ. ಬೆಂಗಳೂರು ಉದಾಹರಣೆಯನ್ನೂ ನೆನಪಿಸಿಕೊಳ್ಳಬಹುದು. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದ ಮೇಯರ್ ಎಲೆಕ್ಷನ್‍ನಲ್ಲಿ ಶಾಸಕರು, ಸಂಸದರ ವೋಟುಗಳನ್ನು ಪಡೆದು ಬಹುಮತವಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ಆಚೆಯಿಟ್ಟಿತ್ತು ಕಾಂಗ್ರೆಸ್. ಇದು ಪಾಲಿಟಿಕ್ಸ್. ಯಾರೂ ಇದಕ್ಕೆ ಹೊರತಲ್ಲ.
ಅಂದ ಹಾಗೆ ದೆಹಲಿಯಲ್ಲಿಯೂ ಕೂಡಾ 250 ಪಾಲಿಕೆ ಸದಸ್ಯರ ಜೊತೆಗೆ ದೆಹಲಿಯ ಸಂಸದರು, ಶಾಸಕರು, ರಾಜ್ಯ ಸಭೆ ಸದಸ್ಯರು, ದೆಹಲಿ ವಿಧಾನಸಭೆ ಸ್ಪೀಕರ್‍ರಿಂದ ಪಾಲಿಕೆಗೆ ನಾಮನಿರ್ದೇಶನಗೊಂಡವರು, ಲೆಫ್ಟಿನೆಂಟ್ ಜನರಲ್ ನಾಮನಿರ್ದೇಶನ ಮೂಲಕ ನೇಮಕ ಮಾಡುವ 10-12 ಸದಸ್ಯರು, ವಿವಿದ ಮುನ್ಸಿಪಲ್ ಕಮಿಟಿ ಸದಸ್ಯರು ಕೂಡಾ ವೋಟ್ ಮಾಡಬಹುದು. ಅಂದಹಾಗೆ ಪಾಲಿಕೆ ಸದಸ್ಯರಿಗೆ ಪಕ್ಷಾಂತರ ನಿಷೇಧ ಕಾಯ್ದೆಯೂ ಅನ್ವಯವಾಗುವುದಿಲ್ಲ. ಹೀಗಾಗಿ ನಂಬರ್ ಗೇಮ್ ಕೊನೆ ಕ್ಷಣದಲ್ಲಿ ಭರ್ಜರಿ ಆಟವಾಡಲಿದೆ.



