ಕಾಂತಾರ ಚಾಪ್ಟರ್ 01 ಚಿತ್ರಮಂದಿರಗಳಲ್ಲಿ ಒಂದು ವಾರ ಕಂಪ್ಲೀಟ್ ಆಗುತ್ತಿದ್ದಂತೆಯೇ ದಾಖಲೆ ಬರೆದಿದೆ. ಒಂದು ವಾರಕ್ಕೆ ಸಿನಿಮಾ ಕಲೆಕ್ಷನ್ 500 ಕೋಟಿಯ ಗಡಿ ದಾಟಿದೆ. 1000 ಕೋಟಿ ಗಡಿ ದಾಟುವುದು ಅನುಮಾನ ಎನ್ನಲಾಗುತ್ತಿದೆ. ಆದರೇನಂತೆ.. ಸಿನಿಮಾ ಬ್ಲಾಕ್ ಬಸ್ಟರ್. ಅಂದಹಾಗೆ ಕಾಂತಾರ ದೈವದ ಕುರಿತು ಸಿನಿಮಾ. ಚಿತ್ರತಂಡ ದೇಶವನ್ನೆಲ್ಲ ಸುತ್ತುತ್ತಿದ್ದರೂ, ಧರ್ಮಸ್ಥಳಕ್ಕೆ ಹೋಗಿಲ್ಲ. ಮಂಜುನಾಥ ಸ್ವಾಮಿಯನ್ನಾಗಲೀ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನಾಗಲೀ ಭೇಟಿ ಮಾಡಿಲ್ಲ. ಯಾಕೆ..?
ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಅತ್ತ ನಿರ್ಮಾಪಕ ವಿಜಯ್ ಕಿರಗಂದೂರು ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ. ಇತ್ತ ರಿಷಬ್ ಶೆಟ್ಟಿ ಕೂಡಾ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ವಿಜಯ್ ಕಿರಗಂದೂರು, ಕಟೀಲು ದುರ್ಗಾಪರಮೇಶ್ವರಿಗೆ ಪೂಜೆ ಮಾಡಿಸಿದರೆ, ಅತ್ತ ರಿಷಬ್ ಶೆಟ್ಟಿ, ಸಿದ್ದಿವಿನಾಯಕ ದೇವಸ್ಥಾನಕ್ಕೆ ಹೋಗಿದ್ದಾರೆ. ಆದರೆ ಧರ್ಮಸ್ಥಳಕ್ಕೆ ಮಾತ್ರ ಹೋಗಿಲ್ಲ.
ಕಾಂತಾರ ಮೊದಲ ಸಲ ಬಿಡುಗಡೆ ಆದಾಗಲು ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ಎರಡನೇ ಭಾಗದ ಕತೆಗೆ ದೈವ ಶ್ರೀಮಂಜುನಾಥನ ಅಪ್ಪಣೆ ಕೇಳೋಕು ಹೇಳಿದ್ದಲ್ಲದೆ ರಿಷಬ್ ತಮ್ಮ ಪತ್ನಿಯೊಂದಿಗೆ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರು. ಇನ್ಮುಂದೆ ಹೆಜ್ಜೆ ಇಡುವಾಗ ನೂರಾರು ವಿಘ್ನಗಳು ಎದುರಾಗುತ್ತವೆ ಅನ್ನೋದರ ಜೊತೆಗೆ ಕಾಂತಾರಾ-2 ಬಹಳ ಶುದ್ಧಾಚಾರದಿಂದ ಮಾಡಬೇಕು ಎಂದು ದೈವ ಹೇಳಿತ್ತು. ಆ ಬಳಿಕ ಧರ್ಮಸ್ಥಳಕ್ಕೆ ಹೋಗಿ ಬಂದು ಕಾಂತಾರ ಚಾಪ್ಟರ್ 01 ಆರಂಭಿಸಿದ್ದರು. ಕಾಂತಾರ 01 ಬಿಡುಗಡೆಗೆ ಮುನ್ನ ಮತ್ತು ನಂತರ ರಿಷಬ್ ಶೆಟ್ಟಿ, ಇನ್ನೂ ಧರ್ಮಸ್ಥಳಕ್ಕೆ ಹೋಗಿಲ್ಲ.
ಕಾಂಟ್ರವರ್ಸಿಗೆ ಹೆದರಿದರಾ ರಿಷಬ್ ಶೆಟ್ಟಿ..?
ಕಾಂತಾರ ಚಾಪ್ಟರ್ 01 ಶುರುವಾಗುವ ಮೊದಲು ಜಸ್ಟಿಸ್ ಫಾರ್ ಸೌಜನ್ಯ ಹೋರಾಟ ಸೈಲೆಂಟ್ ಆಗಿತ್ತು. ತಲೆಬುರುಡೆ ಕೇಸ್ ಎದ್ದಿರಲಿಲ್ಲ. ಆದರೆ.. ಭಕ್ತರಲ್ಲಿ ಇದ್ದ ಅನುಮಾನಗಳು ಕ್ಲಿಯರ್ ಆಗಿವೆ. ಈಗ ಎಸ್‌ಐಟಿಯವರು ಯಾರದ್ದೋ ರಕ್ಷಣೆಗೆ ನಿಂತಿರುವಂತೆ ವರ್ತಿಸುತ್ತಿದ್ದಾರೆ. ಸರ್ಕಾರವೂ ಹಾಗೆಯೇ ಮಾಡುತ್ತಿದೆ. ಹೀಗಿದ್ದರೂ.. ಎಲ್ಲಿ ಯಾರು ಏನು ಕೇಳಿಬಿಡುತ್ತಾರೋ ಎಂಬ ಭಯ ರಿಷಬ್ ಶೆಟ್ಟಿ ಅವರಿಗೆ ಕಾಡುತ್ತಿರುವಂತಿದೆ. ಕಳೆದ ಬಾರಿ ಧರ್ಮಸ್ಥಳಕ್ಕೆ ಎಡತಾಕುತ್ತಿದ್ದ ರಿಷಬ್ ಶೆಟ್ಟಿ, ಹೊಂಬಾಳೆಯ ವಿಜಯ್ ಕಿರಗಂದೂರು.. ಈ ಬಾರಿ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದರೂ.. ಧರ್ಮಸ್ಥಳದಿಂದ ದೂರವೇ ಉಳಿದಿದ್ದಾರೆ.
ಇದರ ನಡುವೆಯೇ ಥಿಯೇಟರಿನಲ್ಲಿ ಕೆಲವರ ಹುಚ್ಚಾಟ.. ದೈವ ಆರಾಧಕರು, ದೈವ ನರ್ತಕರ ವಿರೋಧ, ಸಮರ್ಥನೆ… ವಿವಾದಗಳು ಏನೇ ಇರಲಿ.. ಪ್ರೇಕ್ಷಕರಲ್ಲಿ ಕಾಂತಾರ ನೋಡುವ ತೀವ್ರತೆ ಕಡಿಮೆಯಾಗಿಲ್ಲ. BMS ಮಾರ್ಕೆಟ್ಟಿನಲ್ಲಿ ಒಂದು ವಾರ ಕಳೆದ ನಂತರವೂ ಸ್ಕ್ರೀನ್ ಸಂಖ್ಯೆ ಕಡಿಮೆಯಾಗಿಲ್ಲ. 100ಕ್ಕೂ ಹೆಚ್ಚು ಶೋಗಳು ಬೆಳಗಿನ ಹೊತ್ತಿನಲ್ಲೇ ಶುರುವಾಗುತ್ತಿವೆ. ಬಹುತೇಕ ಶೋಗಳು ತುಂಬಿ ತುಳುಕುತ್ತಿವೆ. ವೀಕ್ ಎಂಡ್ ಬರುತ್ತಿದ್ದಂತೆಯೇ ಬುಕಿಂಗ್ ಜೋರಾಗಿದೆ. ಕಲೆಕ್ಷನ್ ಕುಸಿಯುತ್ತಿಲ್ಲ. ಸಿನಿಮಾ ನೋಡಿದವರೇ ಮತ್ತೆ ಮತ್ತೆ ನೋಡುತ್ತಿದ್ದಾರೆ.



