ಅಶ್ಲೀಲ ಸಿಡಿ ಭೀತಿ ಈಗ ಎಲ್ಲ ಕಡೆ ತಾಂಡವವಾಡುತ್ತಿದೆ. ತಮ್ಮ ವಿರುದ್ಧ ಯಾವುದೇ ಮಾನಹಾನಿಯಾಗುವಂತಹ ವರದಿ, ದೃಶ್ಯ, ಪೋಟೋ ಸೇರಿದಂತೆ ಯಾವುದೇ ರೀತಿಯ ಸುದ್ದಿಗಳನ್ನು ಪ್ರಕಟಿಸಬಾರದು ಎಂದು ಕೋರ್ಟಿಗೆ ಹೋಗಿ ತಡೆ ತಂದಿದ್ಧಾರೆ ಕೆಇ ಕಾಂತೇಶ್. ಈ ಕಾಂತೇಶ್ ಬೇರಾರೂ ಅಲ್ಲ.. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಪುತ್ರ.
ಕಾಂತೇಶ್ ತಂದಿರೋ ತಡೆಯಾಜ್ಞೆ ಪರಿಣಾಮ.. ಯಾವ ನ್ಯೂಸ್ ಚಾನೆಲ್, ಯಾವುದೇ ಪೇಪರ್.. ಯಾವುದೇ ಫೇಸ್ʻಬುಕ್ ಪೇಜ್.. ಯೂಟ್ಯೂಬ್.. ಎಲ್ಲಿಯೂ ಅಂತಹ ವಿಡಿಯೋಗಳು ಸಿಕ್ಕರೆ ಪ್ರಸಾರ ಮಾಡುವಂತಿಲ್ಲ. ಕಾಂತೇಶ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಸಿಸಿಎಚ್ 11ನೇ ನ್ಯಾಯಾಲಯ ಮುಂದಿನ ಅದೇಶದವರೆಗೆ ಅರ್ಜಿದಾರರ ವಿರುದ್ಧ ಅವಹೇಳನಕಾರಿ ಅಥವಾ ಮಾನಹಾನಿಯಾಗುವಂತಹ ಯಾವುದೇ ರೀತಿಯ ಸುದ್ದಿ, ಪೋಟೊ, ದೃಶ್ಯಗಳನ್ನು ಪ್ರಸಾರ ಮಾಡುವಂತಿಲ್ಲ” ಎಂದು ಆದೇಶಿಸಿದೆ.
ಲೋಕಸಭಾ ಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿಯೇ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನ ನಡೆಸಲಾಗುತ್ತಿದೆ. ಹಾಗಾಗಿ, ಯಾವುದೇ ರೀತಿಯ ಆಶ್ಲೀಲ ಆಡಿಯೋ, ವಿಡಿಯೋ, ಪೋಟೊಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎನ್ನುವುದು ಕಾಂತೇಶ್ ಪರ ವಕೀಲರ ವಾದ. ಮೇಲ್ನೋಟಕ್ಕೆ ಮಾಧ್ಯಮಗಳು ಅವರ ವಿರುದ್ಧ ಮಾನಹಾನಿಕಾರ ವರದಿ, ವಿಡಿಯೋಗಳನ್ನು ಪ್ರಸಾರ ಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳ ಆಧಾರದಲ್ಲಿಈ ನಿರ್ಬಂಧ ಆದೇಶ ಹೊರಡಿಸಲಾಗುತ್ತಿದೆ ಎಂದಿದೆ ನ್ಯಾಯಾಲಯ.
ಸುಮಾರು 5೦ ಟಿವಿ ಚಾನೆಲ್ಲುಗಳು, ದಿನಪತ್ರಿಕೆಗಳು, ವೆಬ್ʻಸೈಟುಗಳು ಸುದ್ದಿ ಸಿಕ್ಕರೂ ಸುದ್ದಿ ಮಾಡುವಂತಿಲ್ಲ. ಫೇಸ್ ಬುಕ್, ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾ, ಯೂಟ್ಯೂಬ್ʻಗಳಲ್ಲಿ ಸುದ್ದಿ ಅಥವಾ ವಿಡಿಯೋ ಹಾಕುವಂತಿಲ್ಲ. ಕೆಲವರು ಕೇವಿಯಟ್ ಹಾಕಿಕೊಂಡಿದ್ದರೆ.. (ನ್ಯಾಯಾಲಯ ಯಾವುದೇ ತಡೆಯಾಜ್ಞೆ ನೀಡುವ ಮುನ್ನ ತಮ್ಮ ಅರ್ಜಿಯನ್ನೂ ಪರಿಶೀಲಿಸಬೇಕು ಎಂದು ಹಾಕಿಕೊಂಡಿರುವ ಅರ್ಜಿ) ಅವರಿಗೆ ಅದು ಅನ್ವಯವಾಗುವುದಿಲ್ಲ.
ಪ್ರಜ್ವಲ್ ರೇವಣ್ಣ ಅವರೂ ಕೂಡಾ ಇದೇ ಮಾದರಿ ಅನುಸರಿಸಿದ್ದರು. ಆದರೆ. ಯಾವಾಗ ಸರ್ಕಾರ, ಮಹಿಳಾ ಆಯೋಗ ಎಚ್ಚೆತ್ತುಕೊಂಡವೋ.. ಆಗ ಎಲ್ಲವೂ ತಂತಾನಾಗಿಯೇ ತೆರವಾಗಿತ್ತು.



