ಸ್ಟಂಟ್ ಮ್ಯಾನ್ ಆಗಿ ಬಂದು, ಸಣ್ಣ ಸಣ್ಣ ವಿಲನ್ ರೋಲ್ʻಗಳಲ್ಲಿ ನಟಿಸಿ, ಆಮೇಲೆ ಹೀರೋ ಆಗಿ.. ಸ್ಟಾರ್ ನಟನಾಗಿ.. ನಿರ್ಮಾಪಕನಾಗಿ.. ಇದೀಗ ನಿರ್ದೇಶಕನಾಗಿಯೂ ಗೆದ್ದಿರುವ ದುನಿಯಾ ವಿಜಯ್ ಈಗ ಮಗಳನ್ನು ನಾಯಕಿಯನ್ನಾಗಿಸುವ ಪ್ಲಾನ್ ಮಾಡಿದ್ದಾರೆ.
ಸ್ಟಾರ್ ನಟ ನಟಿಯರ ಮಕ್ಕಳು ಕೂಡಾ ಚಿತ್ರರಂಗಕ್ಕೆ ಬರುವುದು ಹೊಸದೇನಲ್ಲ. ಹೀರೋಗಳಷ್ಟೇ ಅಲ್ಲ, ಹೀರೋಯಿನ್ ಆಗಿಯೂ ಹಲವು ನಟಿಯರು ಈಗಾಗಲೇ ಇಂಡಸ್ಟ್ರಿಗೆ ಬಂದಿದ್ದಾರೆ. ಈಗಾಗಲೇ ಹಲವು ನಾಯಕ ನಟರು, ನಟಿಯರ ಮಕ್ಕಳು, ನಿರ್ದೇಶಕರ ಮಕ್ಕಳು ನಾಯಕಿಯರಾಗಿ ತೆರೆಗೆ ಬಂದಿದ್ದಾರೆ.
ರಾಮ್ ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ , ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್, ಜೈಜಗದೀಶ್ ಮಕ್ಕಳು ವೈಭವಿ, ವೈಸಿರಿ ಹಾಗೂ ವೈನಿಧಿ, ಓಂಪ್ರಕಾಶ್ ರಾವ್ ಮಗಳು ಶ್ರಾವ್ಯಾ, ಅರುಣ್ ಸಾಗರ್ ಮಗಳು ಆದಿತಿ ಸಾಗರ್, ರಾಜೇಂದ್ರ ಸಿಂಗ್ ಬಾಬು ಮಗಳು ರಿತಿಕಾ ಸಿಂಗ್.. ಹಲವರು ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ ಮಾಲಾಶ್ರೀ ಮಗಳು ಆರಾಧನ ಕೂಡಾ ಕಾಟೇರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮುಂದಿನ ಲಿಸ್ಟಿನಲ್ಲಿ ದುನಿಯಾ ವಿಜಯ್ ಮಗಳೂ ಕೂಡಾ ಚಿತ್ರರಂಗಕ್ಕೆ ಬರುತ್ತಿದ್ದಾರೆ ಅನ್ನೋ ಸುದ್ದಿ ಇದೆ.
ವಿಜಯ್ ದೊಡ್ಮಗಳು ಮೋನಿಕಾ ಸಿನಿಮಾರಂಗಕ್ಕೆ ಬರೋ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಕೂಡ ಪಡೆಯುತ್ತಿರುವ ಮೋನಿಕಾ ಅಪ್ಪನ ಜೊತೆಯಲ್ಲಿನ ಚಿತ್ರಕ್ಕೆ ಓಕೆ ಎಂದಿದ್ದಾರೆ ಅನ್ನೋ ಸುದ್ದಿ ಇದೆ.
ಜೆಂಟಲ್ʻಮನ್, ಗುರುಶಿಷ್ಯರು ಮೂಲಕ ಸದ್ದು ಮಾಡಿದ್ದ ಜಡೇಶ್ ಕುಮಾರ್ ಹಂಪಿ, ಇದೀಗ ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಜೊತೆಯಲ್ಲೇ ಒಂದು ಸ್ಪೆಷಲ್ ಸ್ಟೋರಿಯ ಮೂಲಕ ದುನಿಯಾ ವಿಜಯ್ ಮಗಳ ಸಿನಿಮಾಗೆ ಆಕ್ಷನ್ ಕಟ್ ಹೇಳುತಿದ್ದಾರೆ ಅನ್ನೋ ಸುದ್ದಿ ಇದೆ. ಆ ಚಿತ್ರದಲ್ಲಿ ವಿಜಯ್ ಕೂಡಾ ನಟಿಸಲಿದ್ದಾರಂತೆ.
ವಿಜಯ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಮೋನಿಕಾ ಮತ್ತು ಮೋನಿಶಾ. ದೊಡ್ಡ ಮಗಳು ನಟನಾ ತರಬೇತಿ ಪಡೆಯುತ್ತಿದ್ದರೆ, ಚಿಕ್ಕ ಮಗಳು ಸದ್ಯಕ್ಕೆ ಫಾರಿನ್ʻನಲ್ಲಿದ್ದುಕೊಂಡು ಓದುತ್ತಿದ್ಧಾರೆ. ಇನ್ನು ವಿಜಯ್ ಅವರು ಸದ್ಯಕ್ಕಂತೂ ಭೀಮಾ ಚಿತ್ರದ ಪೋಸ್ಟ್ ಪ್ರೊಡಕ್ಷನ್ʻನಲ್ಲಿ ಬ್ಯುಸಿಯಾಗಿದ್ದಾರೆ.



