ನಾನು ಡಾ.ರಾಜ್ ಕುಮಾರ್ ಅಭಿಮಾನಿ ಎನ್ನುವುದು ಕನ್ನಡ ಚಿತ್ರರಂಗದ ಪ್ರತಿಯೊಬ್ಬರ ಮಾತು. ಒಳಗೊಳಗೆ ಏನೇ ಇರಲಿ.. ಹೊರಗೆ ಪ್ರೀತಿಯನ್ನಂತೂ ತೋರಿಸುತ್ತಾರೆ. ದೊಡ್ಡಮನೆಯ ಪ್ರತಿಯೊಬ್ಬರನ್ನೂ ಗೌರವಿಸುವ ಚಿತ್ರರಂಗದವರಲ್ಲಿ ಬಹಳಷ್ಟು ಮಂದಿ ಹೃದಯದಿಂದ ಪ್ರೀತಿಸುವವರೂ ಇದ್ದಾರೆ. ಅಂತಹ ಪಟ್ಟಿಗೆ ಸೇರಿರುವುದು ನಟ ದುನಿಯಾ ವಿಜಯ್. ಅವರು ಅಣ್ಣಾವ್ರು, ದೊಡ್ಡಮನೆ, ಅಪ್ಪು ಅವರಿಂದ ಪಾಠ ಕಲಿತರಂತೆ.. ಅದನ್ನು ಅಳವಡಿಸಿಕೊಂಡಿದ್ದಾರಂತೆ.. ಇಷ್ಟಕ್ಕೂ ಆ ಪಾಠ ಏನು ಅಂತೀರಾ.? ಅದು ನಡೆದಿದ್ದು ರಾಮನಗರ ಚಾಮುಂಡಿ ಉತ್ಸವದಲ್ಲಿ.
ದುನಿಯಾ ವಿಜಯ್. ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅರ್ಜುನ್ ಜನ್ಯ, ಕನ್ನಡ ಚಿತ್ರರಂಗದ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್. ಅರ್ಜುನ್ ಜನ್ಯ ಹೇಳಿದ ಅದೊಂದು ಮಾತಿಗೂ, ಅಣ್ಣಾವ್ರು, ದೊಡ್ಡಮನೆ, ಅಪ್ಪು ಲಿಂಕ್ ಆಗಿದ್ದೇಕೆ ಎನ್ನುವುದೇ ರೋಚಕ. ರಾಮನಗರ ಚಾಮುಂಡಿ ಉತ್ಸವದಲ್ಲಿ ಭಾಗವಹಿಸಿದ್ದ ಅರ್ಜುನ್ ಜನ್ಯ ತಾವು ಆರಂಭದಲ್ಲಿ ಬಂದಾಗ, ನನಗೆ ಸಿನಿಮಾಗಳನ್ನು ಕೊಟ್ಟು, ಕೈ ಹಿಡಿದು ಚಿತ್ರರಂಗದಲ್ಲಿ ನಾನು ಇಲ್ಲಿವರೆಗೂ ಬಂದು ನಿಂತಿದ್ದೇನೆ ಅಂದರೆ, ಬಹಳ ಮುಖ್ಯವಾದ ಕಾರಣ ದುನಿಯಾ ವಿಜಯ್ ಅಣ್ಣ ಎಂದು ವೇದಿಕೆಯ ಮೇಲೆಯೇ ಹೇಳಿದ್ರು.
ಹಾಗೆ ಹೇಳುತ್ತಿರುವಾಗಲೇ ಮಧ್ಯ ಪ್ರವೇಸಿಸಿದ ದುನಿಯಾ ವಿಜಯ್ ʻನಾನು ಅದನ್ನೆಲ್ಲ ಕಲಿತಿದ್ದು ಅಣ್ಣಾವ್ರ ಮನೆಯಿಂದ. ಪುನೀತ್ ರಾಜ್‌ಕುಮಾರ್ ಸರ್ ಕಡೆಯಿಂದ. ಹಾಗಾಗಿ ನಮ್ಮ ಜೀವ ಇರುವವರೆಗೂ ಅವರು ಹೇಳಿಕೊಟ್ಟಂತಹ ಪಾಠಗಳನ್ನು ನಾವು ಬಿಡುವುದಿಲ್ಲ. ಹಾಗಾಗಿ ಇವತ್ತು ಆ ದು:ಖನೂ ಇದೆ. ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ ಅನ್ನುವ ಖುಷಿನೂ ಇದೆ. ನಾನೇನು ಮಾಡಿಲ್ಲ. ಅವರು ಏನು ಮಾಡಿದ್ದಾರೋ ಅದರಲ್ಲಿ ಸಣ್ಣದನ್ನು ಮಾಡಿದ್ದೇವೆ ಅಷ್ಟೇʼ ಎಂದು ಹೇಳಿದ್ದಾರೆ.
ದುನಿಯಾ ವಿಜಯ್ ನಿರ್ದೇಶನದ ಭೀಮ ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರಕ್ಕೂ ರಾಮನಗರ ಸರ್ಕಲ್ಗೂ ಇರುವ ನಂಟನ್ನು ಹೇಳಿದ ವಿಜಯ್ ಈ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಓಪನ್ ಆಗುವುದೇ, ನಮ್ಮ ಈ ರಾಮನಗರ ಸರ್ಕಲ್‌ನಿಂದ. ಇಲ್ಲಿ ಬಂದು ಗಾಡಿಯನ್ನು ಆಕ್ಸಿಡೆಂಟ್ ಮಾಡಿ, ಇಲ್ಲಿಂದ ಅಟ್ಟಿಸಿಕೊಂಡು ಆ ಮಸೀದಿ ಹತ್ತಿರ ಹೋಗಿ, ಅಲ್ಲಿಂದ ಕರೆದುಕೊಂಡು ಸೀದಾ ಬೆಂಗಳೂರಿಗೆ ಹೋಗುತ್ತೇನೆ. ಹಾಗಾಗಿ ತುಂಬಾ ನೆನಪಿನಲ್ಲಿರುವ ಸರ್ಕಲ್ ಇದು ಎಂದು ಹೇಳಿದ್ದಾರೆ.
ಅಂದಹಾಗೆ ದೊಡ್ಡಮನೆಯ ಸದಸ್ಯರು, ಡಾ.ರಾಜ್ ಅವರಿಂದ ಹಿಡಿದು ಪ್ರತಿಯೊಬ್ಬರೂ ಹಿರಿಯರು ಕಿರಿಯರಿಗೆ ಗೌರವ ಕೊಡುವುದನ್ನು ಕಲಿತಿದ್ದಾರೆ. ಜೊತೆಗೆ ತಮ್ಮೊಂದಿಗೆ ಇತರರನ್ನೂ ಬೆಳೆಸುವ, ಅಂತಹವರಿಗೆ ಅವಕಾಶ ಕೊಡುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ. ಹೊಸಬರನ್ನು ಪ್ರೋತ್ಸಾಹಿಸುವ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬಂದಿದ್ದಾರೆ. ಅದನ್ನು ಹೇಳಿರುವುದಷ್ಟೇ ಅಲ್ಲ, ಸ್ವತಃ ಮಾಡಿ ತೋರಿಸಿದ್ಧಾರೆ. ದುನಿಯಾ ವಿಜಯ್ ಅವರೂ ಇದೇ ಮಾತು ಹೇಳಿದ್ಧಾರೆ. ಮಾತುಗಳಿಂದ ಅಲ್ಲ.. ಕೃತಿಗಳಿಂದ ಮಾಡಿ ತೋರಿಸುವ ಮೂಲಕ ಮಾದರಿಯಾಗಿದ್ದಾರೆ.



