ರಾಜ್ಯ ಚುನಾವಣೆಯಲ್ಲೀಗ ಚರ್ಚೆಯಲ್ಲಿರುವುದು ಎರಡೇ ಸುದ್ದಿಗಳು. ಒಂದು ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್ ವಿಡಿಯೋಗಳು ಮತ್ತು ಕೇಂದ್ರ ಸರ್ಕಾರದಿಂದ ಬಂದಿರುವ ಬರ ಪರಿಹಾರ.
ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ರಾಜ್ಯಕ್ಕೆ 18,172 ಕೋಟಿ ರು.ಗಳಿಗೆ ಮನವಿ ಸಲ್ಲಿಸಿತ್ತು. ಕೇಂದ್ರ ಕೊಡದಿದ್ಧಾಗ ಸುಪ್ರೀಂಕೋರ್ಟ್ ಮೊರೆ ಹೋಯ್ತು. ಈಗ ರಾಜ್ಯ ಸರ್ಕಾರ ಕೇಳಿದ್ದ ಒಟ್ಟಾರೆ ಹಣದ ಶೇ.19ರಷ್ಟು ಅಂದರೆ 3,498 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ಬರ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ ಎಂದು ವಾದಿಸುತ್ತಿರುವ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ.
‘ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 35,162 ಕೋಟಿ ರು. ಬರ ನಷ್ಟ ಉಂಟಾಗಿದ್ದು, ಈ ಪೈಕಿ ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 18,171 ಕೋಟಿ ರು.ಗಳ ಪರಿಹಾರಕ್ಕಾಗಿ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರದಿಂದ 14,674 ಕೋಟಿ ರು. ಹಣ ಬಿಡುಗಡೆ ಬಾಕಿಯಿದೆ. ಈ ನಡುವೆ ಸೆಪ್ಟೆಂಬರ್‌ನಿಂದ ಈವರೆಗೆ ಬರ ನಷ್ಟ 50 ಸಾವಿರ ಕೋಟಿ ರು.ವರೆಗೆ ತಲುಪಿದೆ. ಹೀಗಾಗಿ ಬಾಕಿ ಇರುವ ಪರಿಹಾರದ ಜತೆಗೆ ಹೆಚ್ಚುವರಿ ಪರಿಹಾರಕ್ಕಾಗಿಯೂ ಹೋರಾಟ ಮುಂದುವರೆಸುತ್ತೇವೆ ಎನ್ನುವುದು ರಾಜ್ಯದ ವಾದ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಾದವೆಂದರೆ.. ಸೆಪ್ಟೆಂಬರ್‌ನಲ್ಲೇ ಪರಿಹಾರಕ್ಕಾಗಿ ಮನವಿ ಮಾಡಿ, ಕಾನೂನು ಪ್ರಕಾರ ಮನವಿ ಪತ್ರ ನೀಡಿದ್ದೆವು. ಅದಾದ ಒಂದು ವಾರದಲ್ಲಿ ಅಧ್ಯಯನ ನಡೆದು, ತಿಂಗಳ ಒಳಗೆ ಪರಿಹಾರ ಬರಬೇಕಿತ್ತು. ಖುದ್ದು ನರೇಂದ್ರ ಮೋದಿ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿ ರಾಜ್ಯ ಸಚಿವರು ಹಾಗೂ ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ.. ಪರಿಹಾರ ಸಿಗಲಿಲ್ಲ. 7 ತಿಂಗಳ ಸುಪ್ರೀಂಕೋರ್ಟ್ ಮೊರೆ ಹೋದೆವು. ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಕೋರ್ಟ್ ಚಾಟಿ ಬೀಸಿದ ಕಾರಣಕ್ಕೆ ಶೇ.19 ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ನಮಗೆ ಭಿಕ್ಷೆ ನೀಡುತ್ತಿಲ್ಲ. ಇದು ನಮ್ಮ ರಾಜ್ಯದ ಜನತೆಯ ಹಕ್ಕು. ನಾವು ರಾಜ್ಯದಿಂದ ಕೇಂದ್ರಕ್ಕೆ ಪ್ರತಿ ವರ್ಷ 4.30 ಲಕ್ಷ ಕೋಟಿ ರು. ತೆರಿಗೆ ಕಟ್ಟುತ್ತೇವೆ. ಇಂತಹ ಬರ ಪರಿಸ್ಥಿತಿಯಲ್ಲಿ ನಿಯಮಗಳ ಪ್ರಕಾರ ರಾಜ್ಯದ ನೆರವಿಗೆ ಬರಬೇಕಿರುವುದು ಅವರ ಕರ್ತವ್ಯ.
ಆದರೆ.. ಇದಕ್ಕೆ ಉತ್ತರವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳುವುದು ಬೇರೆ. ಅವರು ಇನ್ನೊಂದು ಲೆಕ್ಕ ಕೊಡುತ್ತಾರೆ. ಮಾರ್ಗಸೂಚಿ ಪ್ರಕಾರ, 4,860ಕೋಟಿ ರೂ. ನಷ್ಟ ಪರಿಹಾರ ನೀಡಬೇಕು ಎಂದು ಕೇಳಿತ್ತು. ಈಗ ಕೇಂದ್ರ ಸರಕಾರ 3,454 ಕೋಟಿ ರೂ.ನೀಡಿದ ನಂತರ 18,172 ಕೋಟಿ ರೂ.ನೀಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುತ್ತಿದ್ಧಾರೆ. ಅಂದರೆ ರಾಜ್ಯ ಸರ್ಕಾರ ಕೇಳಿದ್ದದ್ದೇ 4860 ಕೋಟಿ ಎನ್ನುವುದು ಅಶೋಕ್ ಅವರ ವಾದ.
ಅಲ್ಲದೆ.. 2020-21ರಲ್ಲಿ 2242.48 ಕೋಟಿ ರೂ.ಕೇಳಿದ್ದು, 1480 ಕೋಟಿ ರೂ.ಅಂದರೆ ಶೇ.66ರಷ್ಟು ನೀಡಲಾಗಿದೆ. 2021-22ರಲ್ಲಿ 2122.85 ಕೋಟಿ ರೂ.ಕೇಳಿದ್ದು, 2255ಕೋಟಿ ರೂ. ಅಂದರೆ ಶೇ.106ರಷ್ಟು ಎನ್ನುತ್ತಿರುವ ಅಶೋಕ್, ಇದೇ ಕಾಂಗ್ರೆಸ್ಸಿನವರ ಯುಪಿಎ ಸರ್ಕಾರ ಇದ್ಧಾಗ, ಇವರದ್ದೇ ಸರ್ಕಾರ (ಆಗಲೂ ಸಿದ್ದರಾಮಯ್ಯ ಸಿಎಂ) ಇದ್ದರೂ ದೊಡ್ಡ ಮೊತ್ತದ ನೆರವು ಸಿಕ್ಕಿರಲಿಲ್ಲ. 2004ರಿಂದ 2014ರವರೆಗೆ ರಾಜ್ಯ ಸರ್ಕಾರ ಬರ ಮತ್ತು ನೆರೆ ಪರಿಹಾರಕ್ಕಾಗಿ 44 ಸಾವಿರದ 838 ಕೋಟಿ ರೂ. ಮನವಿ ಸಲ್ಲಿಸಿದ್ದಾಗ.. ಕೇಂದ್ರದ ಯುಪಿಎ ಸರ್ಕಾರ ಕೊಟ್ಟಿದ್ದ ಹಣ ಕೇವಲ 4571 ಕೋಟಿ ಎನ್ನುವುದು ಅಶೋಕ್ ಕೊಡುವ ಮಾಹಿತಿ.
ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಬರ ಪರಿಹಾರ 4571 ಕೋಟಿ ಬಂದಿದ್ದರೆ, ಅದೇ ಎನ್ʻಡಿಎ ಅವಧಿಯಲ್ಲಿ 15,920 ಕೋಟಿ ನೆರವು ಸಿಕ್ಕಿದೆ. ರಾಜ್ಯಕ್ಕೆ ಕಾಂಗ್ರೆಸ್ ಮೋಸ ಮಾಡಿದೆಯೇ ಹೊರತು, ಬಿಜೆಪಿ ಅಲ್ಲ ಎಂದು ಅಂಕಿ ಅಂಶಗಳ ಉತ್ತರ ಕೊಟ್ಟಿದ್ಧಾರೆ ಅಶೋಕ್.



